ಧಾರವಾಡ : ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಬಗ್ಗೆ ನೀಡಿದ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ದಾವೆ ಹೂಡುತ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಬೆಂಗಳೂರು, ಧಾರವಾಡ, ಕಲಬುರಗಿ ಹೈಕೋರ್ಟ್‌ನಲ್ಲಿ ಕೇಸ್ ದಾಖಲು ಮಾಡುತ್ತೇವೆ. ಉದಯನಿಧಿ ಸಂವಿಧಾನಿಕ ಜವಾಬ್ದಾರಿಯ ಸ್ಥಾನದಲ್ಲಿದ್ದಾರೆ. ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ. ಈ ರೋಗಗಳಂತೆ ಸನಾತನ ಧರ್ಮಗಳನ್ನು ನಾಶ ಮಾಡಬೇಕು ಎಂದಿದ್ದಾರೆ. ಇವರ ಹೇಳಿಕೆಯನ್ನು ಶ್ರೀರಾಮ ಸೇನೆ ಖಂಡಿಸುತ್ತದೆ" ಎಂದು ವಾಗ್ದಾಳಿ ನಡೆಸಿದರು.
ಉದಯನಿಧಿ ಎನ್ನುವ ಒಬ್ಬ ಸಣ್ಣ ವ್ಯಕ್ತಿ ಇನ್ನೂ ಸರಿಯಾಗಿ ಕಣ್ಣು ತೆರೆದಿರಲಿಲ್ಲ. ಆದರೆ, ನಮ್ಮ ಸನಾತನ ಧರ್ಮ ಸಾವಿರಾರು ವರ್ಷದಿಂದ ಇದೆ. ದೇಶಕ್ಕೆ ಶಾಂತಿಯ ಸಂದೇಶ ಕೊಡುತ್ತಾ ಬಂದಿದೆ. ಇದು ಡೆಂಗ್ಯೂ, ಮಲೇರಿಯಾ ತರ ಹರಡುವ ಸೊಳ್ಳೆಯಲ್ಲ, ಗಂಧದ ಮರ ಇದ್ದಂತೆ. ಶ್ರೇಷ್ಠವಾದ ಸುಗಂಧ ಹರಡುವ ಮರವನ್ನು ನೀವು ನಾಶ ಮಾಡಲು ಪ್ರಯತ್ನಿಸಿದಷ್ಟು ಹೆಚ್ಚು ಸುಗಂಧ ಬೀರುತ್ತದೆ ಎಂದರು.
ಸಚಿವ ಉದಯನಿಧಿ ಸ್ಟಾಲಿನ್ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಉದಯನಿಧಿಯದ್ದು ರಾಜಕೀಯ ಪ್ರೇರಿತ ಹೇಳಿಕೆ, ಇದರಿಂದ ನಿಮ್ಮ ರಾಜಕೀಯ ವ್ಯವಸ್ಥೆ ನಾಶ ಆಗುತ್ತದೆ. ಕೂಡಲೇ ಕ್ಷಮೆ ಕೇಳಿ ಹೇಳಿಕೆ ವಾಪಸ್ ಪಡೆಯಬೇಕು. ಇಲ್ಲದೇ ಹೋದಲ್ಲಿ ಉದಯನಿಧಿ ವಿರುದ್ಧ ಕೇಸ್ ದಾಖಲು ಮಾಡುತ್ತೇವೆ ಎಂದು ಮುತಾಲಿಕ್ ಎಚ್ಚರಿಕೆ ರವಾನಿಸಿದರು.