ಕರ್ನಾಟಕ

karnataka

ಇಷ್ಟಾರ್ಥ ಸಿದ್ಧಿಗಾಗಿ ದೇವಿಗೆ ಸಾರಾಯಿ, ಸಿಗರೇಟು ಅರ್ಪಣೆ.. ಮಂಗಳಮುಖಿಯಿಂದ 26 ವರ್ಷಗಳಿಂದ ಪೂಜೆ!

By ETV Bharat Karnataka Team

Published : Sep 29, 2023, 7:15 PM IST

Updated : Sep 29, 2023, 9:22 PM IST

ಗೋಕಾಕ್ ತಾಲೂಕಿನ ಕಡಬಗಟ್ಟಿ ಗುಡ್ಡದ ಶ್ರೀ ಚೌಡೇಶ್ವರಿ ದೇವಿ ಮಂದಿರದಲ್ಲಿ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಸಾರಾಯಿ ಹಾಗೂ ಸಿಗರೇಟು ಅರ್ಪಿಸಿ, ಬೇಡಿಕೊಳ್ಳಲಾಗುತ್ತದೆ.

ಶ್ರೀ ಚೌಡೇಶ್ವರಿ ದೇವಿ
ಶ್ರೀ ಚೌಡೇಶ್ವರಿ ದೇವಿ

ಅರ್ಚಕರಾದ ಸತ್ಯಪ್ಪ ಅವರು ಮಾತನಾಡಿದ್ದಾರೆ

ಬೆಳಗಾವಿ :ಸಾಮಾನ್ಯವಾಗಿ ದೇವರಿಗೆ ಭಕ್ತರು ಹೂವು, ಹಣ್ಣು, ತೆಂಗಿನಕಾಯಿ ಅರ್ಪಿಸುವುದನ್ನು ನಾವು ನೀವೆಲ್ಲ ನೋಡಿದ್ದೇವೆ. ಆದರೆ, ಇಲ್ಲೊಂದು ದೇವಸ್ಥಾನದಲ್ಲಿ ಭಕ್ತರು ದೇವಿಗೆ ಸಾರಾಯಿ, ಸಿಗರೇಟು ಅರ್ಪಣೆ ಮಾಡುತ್ತಿರುವುದು ವಿಶೇಷವಾಗಿದೆ. ಈ ದೇವಾಲಯದ ಮತ್ತೊಂದು ವಿಶೇಷ ಎಂದರೆ ಮಂಗಳಮುಖಿಯೊಬ್ಬರು ದೇವಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಇಂದು ಜಾತ್ರೆ ಮಹೋತ್ಸವದ ಹಿನ್ನೆಲೆ ದೇವಾಲಯಕ್ಕೆ ಭಕ್ತರ ದಂಡೇ ಹರಿದುಬಂದಿದ್ದು, ವಿಶೇಷ ಪೂಜೆ ಸಲ್ಲಿಸಿದರು.

ಹೀಗೆ ದೇವಿಗೆ ಭಕ್ತರು ಸಾರಾಯಿ ಕುಡಿಸಿ, ಸಿಗರೇಟು ಸೇದಿಸುತ್ತಿರುವುದು ಗೋಕಾಕ್ ತಾಲೂಕಿನ ಕಡಬಗಟ್ಟಿ ಗುಡ್ಡದ ಶ್ರೀ ಚೌಡೇಶ್ವರಿ ದೇವಿ ಮಂದಿರದಲ್ಲಿ. ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವಿಯಲ್ಲಿ ಹರಕೆ ಮಾಡಿಕೊಳ್ಳುವ ಭಕ್ತರು ಮಂದಿರದ ಹಿಂಭಾಗದ ಮರಕ್ಕೆ ತೆಂಗಿನಕಾಯಿ ಕಟ್ಟುತ್ತಾರೆ. ಬೇಡಿಕೆ ಈಡೇರಿದ ಬಳಿಕ ಚೌಡೇಶ್ವರಿ ದೇವಿಗೆ ತಮ್ಮ ಭಕ್ತಿ ಮತ್ತು ಶಕ್ತಿಯನುಸಾರ ಹೂವು, ಹಣ್ಣು, ಕಾಯಿ, ಎಣ್ಣೆಯ ಜೊತೆಗೆ ಸಾರಾಯಿ, ಸಿಗರೇಟ್ ಅನ್ನೂ ಸಮರ್ಪಿಸಿ ಭಕ್ತಿ ಮೆರೆಯುತ್ತಿದ್ದಾರೆ. ಇನ್ನು ಸರ್ಪದ ಮೇಲೆ ಚೌಡೇಶ್ವರಿ ದೇವಿ ಕುಳಿತುಕೊಂಡಿರುವುದು ಇಲ್ಲಿನ ಮತ್ತೊಂದು ವಿಶೇಷತೆ.

ಪ್ರತಿವರ್ಷದಂತೆ ಜೋಕುಮಾರ ಹುಣ್ಣಿಮೆ ದಿನದ ಜಾತ್ರೆ ಹಿನ್ನೆಲೆಯಲ್ಲಿ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಚಿನ್ನಾಭರಣ, ಹೂವುಗಳಿಂದ ಸಿಂಗರಿಸಲಾಗುತ್ತದೆ. ಹೀಗಾಗಿ ದೇವಿಯ ದರ್ಶನಕ್ಕೆ ಭಕ್ತಸಾಗರವೇ ಹರಿದು ಬರುತ್ತದೆ. ಹೀಗೆ ಬಂದ ಭಕ್ತರು ನೀಡುವ ಸಾರಾಯಿಯನ್ನು ಲಾಳಿಕೆ ಮೂಲಕ ಸೇವಕರು ದೇವಿಗೆ ಕುಡಿಸುತ್ತಾರೆ. ಅಲ್ಲದೇ ಕೈ ಹಿಡಿದು ಸಿಗರೇಟ್ ಅನ್ನು ಹಚ್ಚುತ್ತಾರೆ.

ಅರ್ಚಕ ಸತ್ಯಪ್ಪ ಹೇಳುವುದಿಷ್ಟು:ಇಲ್ಲಿನ ಆಚರಣೆ ಬಗ್ಗೆ ಅರ್ಚಕರಾದ ಸತ್ಯಪ್ಪ ಅವರು ಈಟಿವಿ ಭಾರತ್ ಜೊತೆಗೆ ಮಾತನಾಡಿ, ’’ನಮ್ಮ ಚೌಡೇಶ್ವರಿ ದೇವಿ ತುಂಬಾ ಶಕ್ತಿಶಾಲಿ ಆಗಿದ್ದಾಳೆ. ಮಕ್ಕಳಿಲ್ಲದವರಿಗೆ ಮಕ್ಕಳನ್ನು ಕರುಣಿಸಿದ್ದಾಳೆ. ಅದೆಷ್ಟೋ ಭಕ್ತರಿಗೆ ಮನೆ ಸಮಸ್ಯೆ ಸೇರಿ ಆರೋಗ್ಯ ಸಮಸ್ಯೆಯಿಂದ ಪಾರು ಮಾಡಿದ್ದಾಳೆ. ತಮ್ಮ ಬೇಡಿಕೆ ಪೂರ್ಣಗೊಂಡ ಬಳಿಕ ಭಕ್ತರು ದೇವಿಗೆ ಸಾರಾಯಿ, ಸಿಗರೇಟು ಅರ್ಪಿಸುವುದು ವಾಡಿಕೆ. ಕಳೆದ 26 ವರ್ಷಗಳಿಂದ ಜಾತ್ರೆ ಮಾಡಿಕೊಂಡು ಬಂದಿದ್ದೇವೆ. ದೇವಿಯೇ ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದು ಪ್ರತಿಷ್ಠಾಪನೆ ಆಗಿದ್ದಾಳೆ. ಅಂದಿನಿಂದ ದೇವಿಗೆ ಸೇವೆ ಸಲ್ಲಿಸುತ್ತಿದ್ದೇನೆ. ಭಕ್ತರ ಸಹಾಯದಿಂದ ಇಂದು ದೇವಸ್ಥಾನ ದೊಡ್ಡದಾಗಿ ಬೆಳೆದಿದ್ದು, ನಾಡಿನಾದ್ಯಂತ ದೇವಿಯ ಕೀರ್ತಿ ಪಸರಿಸಿದೆ‘‘ ಎಂದರು.

ಇನ್ನು ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಮುಂಬೈ, ಪುಣೆ, ಕೊಲ್ಹಾಪುರ, ಕೇರಳ ಸೇರಿ ಕರ್ನಾಟಕದ ವಿವಿಧ ಮೂಲೆಗಳಿಂದಲೂ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ ಅಂತಾರೆ ಸತ್ಯಪ್ಪ

ಇಲ್ಲಿನ ವಿಶೇಷತೆ ಬಗ್ಗೆ ಭಕ್ತರು ಹೇಳಿದ್ದೇನು?: ’’ಕಳೆದ 17 ವರ್ಷಗಳಿಂದ ದೇವಿ ದರ್ಶನಕ್ಕೆ ಬರುತ್ತಿದ್ದೇನೆ. ನಾವು ದೇವಿಗೆ ಬೇಡಿಕೊಂಡಂತೆ ನಮಗೆ ಎರಡನೇ ಮಗು ಗಂಡು ಆಗಿದೆ. ಒಬ್ಬೊಬ್ಬರು ಹಣ್ಣು, ಕಾಯಿ ಅರ್ಪಿಸಿದರೆ, ಮತ್ತೊಂದಿಷ್ಟು ಜನರು ಸಾರಾಯಿ, ಸಿಗರೇಟು ದೇವಿಗೆ ನೀಡುತ್ತಾರೆ. ಈ ದೇವಿಗೆ ಸಾರಾಯಿಯೇ ನೈವೇದ್ಯ. ಹರಿಕೆ ತೀರಿದ ಬಳಿಕ ಭಕ್ತರು ಸಾರಾಯಿ, ಸಿಗರೇಟನ್ನೂ ದೇವಿಗೆ ಅರ್ಪಿಸುತ್ತಿರುವ ವಿಶಿಷ್ಟ ಆಚರಣೆ ಗೋಕಾಕ್ ತಾಲ್ಲೂಕಿನ ಕಡಬಗಟ್ಟಿ ಗುಡ್ಡದ ಶ್ರೀ ಚೌಡೇಶ್ವರಿ ದೇವಿ ಮಂದಿರದ ವಿಶೇಷತೆ‘ ಎನ್ನುವುದು ಭಕ್ತ ರಾಚಪ್ಪ ಅಮ್ಮಣಗಿಮಾತು

ಭಕ್ತೆ ಆಶ್ರಯಾ ಎಂಬುವವರು ಮಾತನಾಡಿ, ನಾವು ಪ್ರತಿವರ್ಷ ದೇವಿಯ ಜಾತ್ರೆಗೆ ಕುಟುಂಬ ಸಮೇತರಾಗಿ ಬರುತ್ತೇವೆ. ಚೌಡೇಶ್ವರಿ ದೇವಿ ನಮ್ಮ ಎಲ್ಲ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆಯಿದೆ ಎಂದರು.

ಈ ಮಂಗಳಮುಖಿ ಯಾರು? :ವಿಶೇಷ ಎಂದರೆ ಸತ್ಯಪ್ಪ ಎಂಬುವವರೇ ಮಂಗಳಮುಖಿಯಾಗಿದ್ದಾರೆ. ಇವರು ಕಳೆದ 26 ವರ್ಷಗಳಿಂದ ದೇವಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.

ಇದನ್ನೂ ಓದಿ :ವರ್ಷದಲ್ಲಿ ಏಳು ದಿನ ಮಾತ್ರ ದರ್ಶನ ನೀಡುವ ಕಾರವಾರದ ಸಾತೇರಿ ದೇವಿ!

Last Updated : Sep 29, 2023, 9:22 PM IST

ABOUT THE AUTHOR

...view details