ಬೆಂಗಳೂರು: ಕೆಪಿಸಿಸಿ ಕಚೇರಿ ಬಳಿಯ ಭಾರತ್ ಜೋಡೋ ಭವನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕರ್ತರೊಂದಿಗೆ ನಿಮ್ಮ ಡಿಸಿಎಂ ಕಾರ್ಯಕ್ರಮ ನಡೆಸಿದರು.
ಕೈ ಕಾರ್ಯಕರ್ತರನ್ನು ಕಡೆಗಣನೆ ಮಾಡಲಾಗಿದೆ ಎಂಬ ಅಸಮಾಧಾನ ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ಜೊತೆ ಸಂಪರ್ಕ ಸಾಧಿಸಲು ಹೊಸ ಕಾರ್ಯಕ್ರಮವನ್ನು ಕಾಂಗ್ರೆಸ್ ರೂಪಿಸಿದೆ. ಅದರಂತೆ ಶನಿವಾರ ಡಿಸಿಎಂ ಪಕ್ಷದ ಕಾರ್ಯಕರ್ತರ ಅಹವಾಲು ಸ್ವೀಕರಿಸಿದರು. ಆ ಮೂಲಕ ಕಾರ್ಯಕರ್ತರ ವಿಶ್ವಾಸ ಗಳಿಸುವುದರೊಂದಿಗೆ ಪಕ್ಷ ಸಂಘಟನೆಗೆ ರಾಜ್ಯ ಕಾಂಗ್ರೆಸ್ ಮುಂದಾಗಿದೆ. ಶನಿವಾರ ಪಕ್ಷದ ಕಚೇರಿಯಲ್ಲಿ ನಡೆದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡು ವಿವಿಧ ಅಹವಾಲು, ಕೊಂದು ಕೊರೆತಗಳನ್ನು ಡಿಸಿಎಂ ಮುಂದಿಟ್ಟರು.
ಡಿಸಿಎಂ ಕಾರ್ಯಕರ್ತರ ವಿವಿಧ ಬೇಡಿಕೆಗಳಿಗೆ ಸ್ಪಂದಿಸಿ, ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಲೋಕಸಭಾ ಚುನಾವಣೆಗೆ ಪ್ರಚಾರಕ್ಕೆ ತೆರಳುವ ವೇಳೆ ಅಪಘಾತವಾಗಿ ಕಾಲಿನ ಮೊಣಕಾಲು ಚಿಪ್ಪಿಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ಮಣಿಕಂಠ ಅವರು ತಮ್ಮ ನೋವು ಹೇಳಿಕೊಂಡರು. ಪಶುಸಂಗೋಪನಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಪತ್ನಿ ಮೃತ ಪಟ್ಟಿದ್ದು, ನನ್ನ ಮಗನಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಡಿಸಿ. ನಾನು ಸಹ ಕೊರೋನಾ ಸಮಯದಲ್ಲಿ ಕಾಲು ಕಳೆದುಕೊಂಡೆ. ಆರ್ಥಿಕವಾಗಿ ಬಹಳ ತೊಂದರೆಯಲ್ಲಿ ಇದ್ದೇನೆ ಎಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕಾರ್ಯಕರ್ತ ಕಿರಣ್ ಅವಲತ್ತುಕೊಂಡಾಗ "ನಿಮಗೆ ಕೂಡಲೇ ಕೆಲಸ ಸಿಗುವಂತೆ ಮಾಡುತ್ತೇನೆ. ಸಚಿವರಾದ ವೆಂಕಟೇಶ್ ಅವರನ್ನು ಭೇಟಿಯಾಗಿ ಎಂದು ತಿಳಿಸಿದರು.
ಯಶವಂತಪುರದ ಅಬ್ರಹಾಂ ಶಂಕರ್ ಅವರು, ಮಗಳ ಶಾಲಾ ಶುಲ್ಕ ಮತ್ತು ಮನೆ ನೀಡಿ ಎಂದು ಮನವಿ ಸಲ್ಲಿಸಿದಾಗ "ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಮನೆ ದೊರೆಯುವಂತೆ ಮಾಡುತ್ತೇನೆ. ಯಾವುದೇ ಚಿಂತೆ ಬೇಡ ಎಂದು ಧೈರ್ಯ ನೀಡಿದರು. ನಾನು 39 ವರ್ಷಗಳಿಂದ ಪಕ್ಷಕ್ಕೆ ಕೆಲಸ ಮಾಡುತ್ತಿದ್ದೇನೆ. ಎಂಎಸ್ಐಎಲ್ಗೆ ನಾಮನಿರ್ದೇಶನ ಮಾಡಿ ಎಂದು ತೇರದಾಳದ ಸಂಗಮೇಶ್ ಅವರ ಮನವಿಗೆ "ಗೃಹಸಚಿವರಾದ ಪರಮೇಶ್ವರ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು ಅವರಿಗೆ ತಿಳಿಸುತ್ತೇನೆ" ಎಂದರು.
ಸರ್, ನಿಮ್ಮ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. ನನಗೆ ಮನೆ ಕೊಡಿ ಎಂದು ಹಾರೋಹಳ್ಳಿಯ ಮಂಜುಳಾ ಅವರು ಮನವಿ ಮಾಡಿದಾಗ "ನಿನಗೆ ಇನ್ನೂ ಮನೆ ಸಿಕ್ಕಿಲ್ಲವೇ? ಈ ಬಾರಿ ಸಿಗುತ್ತದೆ" ಎಂದು ಭರವಸೆ ನೀಡಿದರು. ಕುಡುಚಿಯ ಬಾಬಾ ಸಾಹೇಬ್ ಜಿನರಾಲ್ಕರ್, ಪಾವಗಡದ ರಾಮಮೂರ್ತಿ, ಬಬಲೇಶ್ವರದ ಫಯಾಜ್, ಬನಶಂಕರಿಯ ಪ್ರಸನ್ನ ಕುಮಾರ್ ಸೇರಿದಂತೆ ಅನೇಕರು ಪಕ್ಷದ ವಿವಿಧ ವಿಭಾಗಗಳಲ್ಲಿ ಪದಾಧಿಕಾರಿಗಳನ್ನಾಗಿ ನೇಮಕಾತಿ ಮಾಡಿಕೊಳ್ಳುವಂತೆ ಅಹವಾಲು ಸಲ್ಲಿಸಿದರು.
ನಿಗಮ ಮಂಡಳಿಗೆ ನೇಮಕ ಹಾಗೂ ಪಕ್ಷದಲ್ಲಿ ಆಯಕಟ್ಟಿನ ಸ್ಥಾನಮಾನ, ಮನೆ, ನಿವೇಶನ, ಜಮೀನು ಸಮಸ್ಯೆ, ಹಾಸ್ಟೆಲ್ ಸಮಸ್ಯೆ ಸೇರಿದಂತೆ ನೂರಾರು ಸಮಸ್ಯೆಗಳನ್ನು ಹೊತ್ತು ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಕಾರ್ಯಕರ್ತರು ಡಿಸಿಎಂ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದರು.