ಕರ್ನಾಟಕ

karnataka

ಲಸಿಕಾ ಆಂದೋಲನದಲ್ಲಿ ಕೈ ಜೋಡಿಸಿ: ಔಷಧ ಉದ್ದಿಮೆಗಳಿಗೆ ಡಾ.ಕೆ‌ ಸುಧಾಕರ್‌ ಮನವಿ

By

Published : Aug 18, 2021, 6:43 AM IST

ವಿಧಾನಸೌಧದಲ್ಲಿ ರಾಜ್ಯದ ಪ್ರಮುಖ ಔಷಧ ಉದ್ದಿಮೆದಾರರ ಜೊತೆ ಸಭೆ ನಡೆಸಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ಲಸಿಕಾ ಆಂದೋಲನಕ್ಕೆ ದೇಣಿಗೆ ನೀಡುವಂತೆ ಮನವಿ ಮಾಡಿದರು.

Minister Dr.K sudhakar
ಸಚಿವ ಡಾ. ಕೆ‌ ಸುಧಾಕರ್‌

ಬೆಂಗಳೂರು:ಔಷಧ ವಲಯದ ಉದ್ದಿಮೆಗಳು ತಮ್ಮ ಸಾಂಸ್ಥಿಕ ಹೊಣೆಗಾರಿಕೆ ನಿಧಿಯನ್ನು ಲಸಿಕಾ ಆಂದೋಲನಕ್ಕೆ ದೇಣಿಗೆ ನೀಡುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಕೋರಿದರು.

ಕೇಂದ್ರ ಸರ್ಕಾರ ಶೇ. 75 ರಷ್ಟು ಲಸಿಕೆಯನ್ನು ರಾಜ್ಯಕ್ಕೆ ಉಚಿತವಾಗಿ ನೀಡುತ್ತಿದೆ. ಉಳಿದ ಶೇ.25 ರಷ್ಟನ್ನು ಖಾಸಗಿ ವಲಯಕ್ಕೆ ಹಂಚಿಕೆ ಮಾಡಿದೆ. ಖಾಸಗಿ ವಲಯಕ್ಕೆ ನೀಡಿರುವ ಲಸಿಕೆಯನ್ನು ಕಾರ್ಪೊರೇಟ್‌ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (CSR) ನಿಧಿಯಡಿ ಖರೀದಿಸಿ ದೇಣಿಗೆ ರೂಪದಲ್ಲಿ ನೀಡುವಂತೆ ಕೇಳಿಕೊಂಡರು.

ತಜ್ಞರ ಅಭಿಪ್ರಾಯದ ಪ್ರಕಾರ, ಕೋವಿಡ್ ಮೂರನೇ ಅಲೆ ಅಷ್ಟೇನು ಪರಿಣಾಮಕಾರಿ ಅಲ್ಲ ಎನ್ನಲಾಗುತ್ತಿದೆ. ಆದರೂ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಎರಡು ಡೋಸ್‌ ಲಸಿಕೆ ಪಡೆದವರಿಗೆ ಸೋಂಕು ತೀವ್ರವಾಗಿ ಪರಿಣಾಮ ಬೀರುವುದಿಲ್ಲ ಮತ್ತು ಸಾವು ಸಂಭವಿಸುವುದಿಲ್ಲ ಎಂಬುದು ರುಜುವಾತಾಗಿದೆ. ತ್ವರಿತವಾಗಿ ಲಸಿಕೆ ನೀಡುವುದರಿಂದ ಸಂಭವನೀಯ ಮೂರನೇ ಅಲೆಯಿಂದ ಸಂರಕ್ಷಣೆ ಸಾಧ್ಯ. ಹೀಗಾಗಿ, ಸರ್ಕಾರದ ಜತೆ ಉದ್ದಿಮೆಗಳು ಕೈ ಜೋಡಿಸಿದರೆ ಗುರಿ ಸಾಧ್ಯ ಎಂದರು.

ವಿಧಾನಸೌಧದಲ್ಲಿ ಔಷಧ ಉದ್ದಿಮೆದಾರರ ಜೊತೆ ಸಭೆ ನಡೆಸಿದ ಸಚಿವ ಡಾ. ಕೆ. ಸುಧಾಕರ್‌

ಔಷಧ ವಲಯ ಮಾತ್ರವಲ್ಲದೆ, ಪೌಷ್ಟಿಕ ಆಹಾರ ಮತ್ತು ಸೌಂದರ್ಯವರ್ಧಕ ಉದ್ದಿಮೆದಾರರ ಜತೆಗೂ ಮುಂದಿನ ದಿನಗಳಲ್ಲಿ ಸಭೆ ನಡೆಸಿ ಸಿಎಸ್‌ಆರ್‌ ನಿಧಿಯ ನೆರವನ್ನು ಲಸಿಕಾ ಆಂದೋಲನಕ್ಕೂ ವಿಸ್ತರಿಸಲು ಮನವಿ ಮಾಡಲಾಗುವುದು. ಇದು ಸರ್ಕಾರ ಮಾತ್ರವಲ್ಲದೆ, ಸಮಾಜದ ಎಲ್ಲರ ಹೊಣೆಗಾರಿಕೆ ಆಗಿರುವುದರಿಂದ ಉದ್ದಿಮೆಗಳು ನೆರವಿನ ಹಸ್ತ ಚಾಚಬೇಕು ಎಂದು ಸಚಿವರು ಹೇಳಿದರು.

ಔಷಧಉದ್ದಿಮೆದಾರರ ಭರವಸೆ

ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಉದ್ದಿಮೆ ಪ್ರತಿನಿಧಿಗಳು, ಔಷಧ ವಲಯದ ಸಂಘಟನೆ ಮೂಲಕ ಮತ್ತು ತಮ್ಮ ಉದ್ದಿಮೆಗಳ ಮೂಲಕ ಸರ್ಕಾರದ ಲಸಿಕಾ ಆಂದೋಲನಕ್ಕೆ ನೆರವಾಗುವುದಾಗಿ ಭರವಸೆ ನೀಡಿದರು. ಸರ್ಕಾರದ ಸಂದೇಶವನ್ನು ತಮ್ಮ ಕಂಪನಿಗಳ ಆಡಳಿತ ಮಂಡಳಿಗೆ ತಿಳಿಸಿ ಆದಷ್ಟು ಬೇಗ ಪ್ರತಿಕ್ರಿಯೆ ನೀಡುವುದಾಗಿ ಸಭೆಯಲ್ಲಿ ಸ್ಪಷ್ಟಪಡಿಸಿದರು.

ಆಕ್ಸಿಜನ್‌ ಕೊರತೆ ನಿವಾರಣೆಗೆ ಅಗತ್ಯ ಕ್ರಮ:

ಸಂಭವನೀಯ ಮೂರನೇ ಅಲೆ ಸಂದರ್ಭದಲ್ಲಿ ಆಕ್ಸಿಜನ್‌ ಕೊರತೆ ಎದುರಾಗದಂತೆ ಉದ್ಯಮಗಳ ಜತೆ ಸರ್ಕಾರ ಸಮನ್ವಯದಿಂದ ಕಾರ್ಯ ನಿರ್ವಹಿಸಲಿದೆ ಎಂದು ಇದಕ್ಕೂ ಮೊದಲು ಆಕ್ಸಿಜನ್‌ ಉತ್ಪಾದಕ ಕಂಪನಿಗಳ ಪ್ರತಿನಿಧಿಗಳ ಸಭೆಯಲ್ಲಿ ಸಚಿವ ಸುಧಾಕರ್‌ ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಆಕ್ಸಿಜನ್‌ ಸರಬರಾಜು ಕುರಿತಂತೆ ಉದ್ಯಮದ ಪ್ರತಿನಿಧಿಗಳ ಸಭೆ ನಡೆಸಿದ ಸಚಿವರು, ಉದ್ಯಮಗಳ ಸಹಕಾರದೊಂದಿಗೆ ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಲಾಗಿದೆ. ಸಂಭವನೀಯ ಮೂರನೇ ಅಲೆಯಲ್ಲೂ ಜನರ ಹಿತದೃಷ್ಟಿಯಿಂದ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದರು.

ರಾಜ್ಯದಲ್ಲಿ ಆಕ್ಸಿಜನ್ ಉತ್ಪಾದನೆ ಪ್ರಮಾಣ:

ಪ್ರಸ್ತುತ ಒಟ್ಟು ಏಳು ಕಂಪನಿಗಳು 812 ಟನ್‌ಗಳಷ್ಟನ್ನು ಆಕ್ಸಿಜನ್‌ ಅನ್ನು ಪ್ರತಿದಿನ ಉತ್ಪಾದಿಸುತ್ತಿವೆ. ನಮ್ಮಲ್ಲಿ ಒಟ್ಟು 7900 ಟನ್‌ಗಳಷ್ಟಿದೆ. ಸದ್ಯ 5381 ಟನ್‌ ಪ್ರಮಾಣದ ದಾಸ್ತಾನು ಇದೆ. ಆಕ್ಸಿಜನ್‌ ರಿಫಿಲ್ಲಿಂಗ್‌ ಘಟಕಗಳು 64 ಇವೆ. ಗದಗ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೀದರ್‌, ಯಾದಗಿರಿ, ಚಾಮರಾಜನಗರ, ಕೊಡಗು ಮತ್ತು ಮಂಡ್ಯಗಳಲ್ಲಿ ಇಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕು ಮತ್ತು ಜಿಲ್ಲೆಗಳಲ್ಲಿ ಆಕ್ಸಿಜನ್‌ ಘಟಕಗಳನ್ನು ನಿರ್ಮಿಸುವ ಉದ್ದೇಶವಿದೆ.

ಇನ್ನು ಹಿಂದಿನ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು. ಹೊಸ ಘಟಕಗಳ ಸ್ಥಾಪನೆ, ಟೆಂಡರ್‌ ಕರೆಯುವುದು, ಜಂಬೋ ಸಿಲಿಂಡರ್‌ ಖರೀದಿ, ಹೆಚ್ಚುವರಿ ದಾಸ್ತಾನು ಕೇಂದ್ರ, ಸರಬರಾಜು ವ್ಯವಸ್ಥೆ ಸಹಿತ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಖಾಸಗಿ ಕಂಪನಿಗಳು ತಮ್ಮ ಉತ್ಪಾದನೆ, ದಾಸ್ತಾನು ವ್ಯವಸ್ಥೆಗಳನ್ನು ಬಲವರ್ಧನೆಗೊಳಿಸಿಕೊಳ್ಳಬೇಕು. ಸರ್ಕಾರದಿಂದ ಅಗತ್ಯವಿರುವ ಎಲ್ಲಾ ನೆರವು ನೀಡಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್ ಭರವಸೆ ಕೊಟ್ಟರು.

ABOUT THE AUTHOR

...view details