ನವದೆಹಲಿ: ಮುಂಬೈ ಇಂಡಿಯನ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್ ಮನ್ ಸುರೇಶ್ ರೈನಾ ಐಪಿಎಲ್ನಲ್ಲಿ 200ನೇ ಪಂದ್ಯವನ್ನಾಡಿದ 5ನೇ ಕ್ರಿಕೆಟಿಗ ಎಂಬ ವಿಶೇಷ ದಾಖಲೆಗೆ ಪಾತ್ರರಾಗಿದ್ದಾರೆ.
ವೈಯಕ್ತಿಕ ಕಾರಣಗಳಿಂದ 2020ರ ಐಪಿಎಲ್ನಿಂದ ದೂರ ಉಳಿದಿದ್ದ ಮಿಸ್ಟರ್ ಐಪಿಎಲ್ ಖ್ಯಾತಿಯ ರೈನಾ ಇದೀಗ 200ನೇ ಪಂದ್ಯವನ್ನಾಡಿದ ಸಿಎಸ್ಕೆ ನಾಯಕ ಧೋನಿ(211), ಮುಂಬೈ ಇಂಡಿಯನ್ಸ್ ನಾಯಕ ರೋಹಿತ್(207) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್(203) ಅವರ ಸಾಲಿಗೆ ಸೇರಿದ್ದಾರೆ. ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ 199 ಪಂದ್ಯಗಳನ್ನಾಡಿದ್ದಾರೆ.
ರೈನಾ 2016 ಮತ್ತು 2017ರ ಆವೃತ್ತಿಯನ್ನು ಹೊರತುಪಡಿಸಿ 2008ರಿಂದ 2019ರ ತನಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಆ ಎರಡು ವರ್ಷ ಸಿಎಸ್ಕೆ ನಿಷೇಧಗೊಂಡಿದ್ದರಿಂದ ಗುಜರಾತ್ ಲಯನ್ಸ್ ಪರ ಆಡಿದ್ದರು. ಅವರು 199 ಪಂದ್ಯಗಳಿಂದ 5,491 ರನ್ಗಳಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 39 ಅರ್ಧಶತಕ ಸೇರಿವೆ.