ಬ್ರಿಡ್ಜ್‌ಟೌನ್ (ಬಾರ್ಬಡೋಸ್): ಭಾರತೀಯ ಕ್ರಿಕೆಟ್‌ನ ಇಬ್ಬರು ಸಾರ್ವಕಾಲಿಕ ಶ್ರೇಷ್ಠ ಆಟಗಾರರಾದ ನಾಯಕ ರೋಹಿತ್ ಶರ್ಮಾ ಮತ್ತು ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಟಿ 20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದಾರೆ.
ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಳು ರನ್‌ಗಳ ಗೆಲುವು ಸಾಧಿಸಿದೆ. ಈ ಗೆಲುವಿನಲ್ಲಿ 76 ರನ್ ಗಳ ಕೊಡುಗೆ ನೀಡಿ,ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದ ಕೊಹ್ಲಿ ತಮ್ಮ ನಿರ್ಧಾರವನ್ನು ಘೋಷಿಸಿದರು. ಇದಾದ ಬೆನ್ನಲ್ಲೇ ರೋಹಿತ್ ಕೂಡ ನಿವೃತ್ತಿ ಘೋಷಿಸಿದರು.ಅಂದುಕೊಂಡಿದ್ದನ್ನು ಸಾಧಿಸಿದ್ದೇನೆ. ಹೀಗಾಗಿ ಪಕ್ಕಕ್ಕೆ ಸರಿಯುವ ಸಮಯ ಬಂದಿದೆ ಎಂದು ಘೋಷಿಸಿದರು.
ಕೊಹ್ಲಿ ಹೇಳಿದ್ದಿಷ್ಟು: "ಇದು ನನ್ನ ಕೊನೆಯ T20 ವಿಶ್ವಕಪ್ ಮತ್ತು ನಾನು ಬಯಸಿದ್ದು ಇದನ್ನೇ’’ ಎಂದು ಕೊಹ್ಲಿ ಹೇಳಿದರು. ನಾನು ಕೃತಜ್ಞತೆಯಿಂದ ತಲೆ ಬಾಗಿಸುತ್ತೇನೆ. ತಂಡಕ್ಕೆ ಅತ್ಯಂತ ಮುಖ್ಯವಾದ ದಿನವಾದ ಇಂದು ಕೆಲಸವನ್ನು ಮಾಡಲು ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ ಅಂತಾನೂ ಕೊಹ್ಲಿ ಹೇಳಿದರು.
ನಿವೃತ್ತಿ ಘೋಷಿಸಿದ ರೋಹಿತ್ ಮಾತನಾಡಿದ್ದಿಷ್ಟು: "ಇದು ನನ್ನ ಕೊನೆಯ ಪಂದ್ಯವೂ ಆಗಿತ್ತು. ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯವಿಲ್ಲ. ನಾನು ಇದನ್ನು (ಟ್ರೋಫಿ) ಬಯಸಿದ್ದೆ. ಪದಗಳಲ್ಲಿ ಹೇಳುವುದು ತುಂಬಾ ಕಷ್ಟ" ಎಂದರು. ನಾನು ಏನು ಬಯಸಿದ್ದೆನೋ ಅದು ಸಂಭವಿಸಿದೆ. ನನ್ನ ಜೀವನದಲ್ಲಿ ಇದಕ್ಕಾಗಿ ನಾನು ತುಂಬಾ ಕಾತರನಾಗಿದ್ದೆ. ನಾವು ಈ ಬಾರಿ ಇದನ್ನು ಸಾಧಿಸಿದ್ದಕ್ಕೆ ಸಂತೋಷವಾಗಿದೆ" ಎಂದು ಅವರು ಹೇಳಿದರು.
ರೋಹಿತ್ ಸಾಧನೆ: 37 ವರ್ಷದ ರೋಹಿತ್ 2022 ರ ಟಿ 20 ವಿಶ್ವಕಪ್‌ನಲ್ಲಿ ಭಾರತವನ್ನು ಮುನ್ನಡೆಸಿದ್ದರು. ಆದರೆ ಆ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಸೋತು ಟೀಂ ಇಂಡಿಯಾ ಟೂರ್ನಿಯಿಂದ ಹೊರ ಬಿದ್ದಿತ್ತು. ಒಂದು ವರ್ಷದ ನಂತರ, ಭಾರತವು ಅವರ ನಾಯಕತ್ವದಲ್ಲಿ ತವರಿನಲ್ಲಿ ನಡೆದ 50-ಓವರ್‌ಗಳ ವಿಶ್ವಕಪ್‌ನ ಫೈನಲ್‌ಗೆ ಎಂಟ್ರಿ ಪಡೆದಿತ್ತು. ಆದರೆ ಅಹಮದಾಬಾದ್‌ನಲ್ಲಿ ನಡೆದ ಫೈನಲ್ ನಲ್ಲಿ ರೋಹಿತ್ ಪಡೆ ಆಸ್ಟ್ರೇಲಿಯಾಕ್ಕೆ ಶರಣಾಗುವ ಮೂಲಕ ಭಾರತೀಯರ ಕನಸು ಭಗ್ನಗೊಂಡಿತ್ತು.
ರೋಹಿತ್ 159 ಪಂದ್ಯಗಳಿಂದ 4231 ರನ್ ಗಳನ್ನು ಬಾರಿಸಿದ್ದಾರೆ. ಇಂದಿನ ಪಂದ್ಯದ ಬಳಿಕ ಅವರು T20I ವಿದಾಯ ಹೇಳಿದ್ದಾರೆ. ಐದು ಶತಕಗಳು ಮತ್ತು 32 ಅರ್ಧಶತಕಗಳನ್ನು ರೋಹಿತ್ ಬಾರಿಸಿದ್ದಾರೆ. ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ಅವರು ಸಕ್ರಿಯವಾಗಿ ಮುಂದುವರಿದಿದ್ದಾರೆ.
ಭಾರತ ತಂಡಕ್ಕೆ ಉತ್ತಮ ಭವಿಷ್ಯವಿದೆ - ಕೊಹ್ಲಿ : ಯುವ ಆಟಗಾರರು ಭಾರತ ತಂಡವನ್ನ ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲಿದ್ದಾರೆ ಎಂದು ರನ್ ಮಷಿನ್ ವಿರಾಟ್ ಕೊಹ್ಲಿ ಹೇಳಿದ್ದಾರೆ.
"ಮುಂದಿನ ಪೀಳಿಗೆಯು ಅಧಿಕಾರ ವಹಿಸಿಕೊಳ್ಳುವ ಸಮಯ ಬಂದಾಗಿದೆ. ಇದು ಎರಡು ವರ್ಷಗಳ ಚಕ್ರ (ಮುಂದಿನ T20 WC ಗಾಗಿ), ಭಾರತದಲ್ಲಿ ಕೆಲವು ಅದ್ಭುತ ಆಟಗಾರರು ಆಡುತ್ತಿದ್ದಾರೆ. ಅವರು T20 ಸ್ವರೂಪದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಮತ್ತು ಅದ್ಭುತಗಳನ್ನು ಮಾಡುತ್ತಾರೆ. ಐಪಿಎಲ್‌ನಲ್ಲಿ ಅವರು ಮಾಡುವುದನ್ನು ನಾವು ನೋಡಿದ್ದೇವೆ. ಅವರು ಟೀಂ ಇಂಡಿಯಾ ಧ್ವಜವನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.
125 T20I ಪಂದ್ಯಗಳಲ್ಲಿ ಕೊಹ್ಲಿ 48.69 ಸರಾಸರಿಯಲ್ಲಿ 4,188 ರನ್ ಗಳಿಸಿದ್ದಾರೆ. 122 ಅವರ ಗರಿಷ್ಠ ಸ್ಕೋರ್ ಆಗಿದೆ. ಅದು ಅವರ ಏಕೈಕ T20 ಶತಕ - ಸೆಪ್ಟೆಂಬರ್ 2022 ರಲ್ಲಿ ಅಫ್ಘಾನಿಸ್ತಾನ ವಿರುದ್ಧ ಅವರು ಈ ಸಾಧನೆ ಮಾಡಿದ್ದರು.
ಇದನ್ನು ಓದಿ: ಟಿ20 ವಿಶ್ವಕಪ್ ಗೆಲುವಿನೊಂದಿಗೆ ಮುಖ್ಯ ಕೋಚ್ ಸ್ಥಾನ ಕೊನೆಗೊಳಿಸಿದ ರಾಹುಲ್ ದ್ರಾವಿಡ್ - Dravid Ends His Career