ಕರ್ನಾಟಕ

karnataka

ಪಾಕ್ ನೆಲದಲ್ಲಿ ದಶಕದ ಬಳಿಕ ವೈಟ್​ ಜೆರ್ಸಿ ಟೂರ್ನಿ... ಪಾಕಿಸ್ತಾನದ ಎಲ್ಲ ಆಟಗಾರರಿಗೆ ಚೊಚ್ಚಲ ಟೆಸ್ಟ್ ಮ್ಯಾಚ್..!

By

Published : Dec 11, 2019, 9:37 AM IST

Updated : Dec 11, 2019, 9:52 AM IST

ಹತ್ತು ವರ್ಷದ ಹಿಂದೆ ಪಾಕಿಸ್ತಾನದ ಟೆಸ್ಟ್ ತಂಡದಲ್ಲಿದ್ದ ಯೂನಿಸ್ ಖಾನ್, ಮಿಸ್ಬಾ ಉಲ್ ಹಕ್ ಹಾಗೂ ಶೋಯೆಬ್ ಮಲಿಕ್ ವಿದಾಯ ಹೇಳಿದ್ದಾರೆ. ಹೀಗಾಗಿ ಹಾಲಿ ತಂಡದ ಯಾವೊಬ್ಬ ಆಟಗಾರನೂ ತಮ್ಮ ನೆಲದಲ್ಲಿ ಟೆಸ್ಟ್ ಮ್ಯಾಚ್ ಆಡಿಲ್ಲ.

Pakistan vs Sri Lanka
ಐತಿಹಾಸಿಕ ಟೆಸ್ಟ್ ಪಂದ್ಯ

ರಾವಲ್ಪಿಂಡಿ:ಸತತ ಸೋಲು ಕಾಣುತ್ತಿರುವ ಪಾಕಿಸ್ತಾನ ತಂಡ ಇಂದು ರಾವಲ್ಪಿಂಡಿಯಲ್ಲಿ ನಡೆಯಲಿರುವ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.

ಸರಿಯಾಗಿ ಹತ್ತು ವರ್ಷದ ಬಳಿಕ ಪಾಕಿಸ್ತಾನದಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ವಿಶೇಷವೆಂದರೆ ಎರಡೂ ತಂಡದ ಆಟಗಾರರಿಗೆ ಪಾಕಿಸ್ತಾನದಲ್ಲಿ ಇಂದು ಚೊಚ್ಚಲ ಟೆಸ್ಟ್ ಪಂದ್ಯ. ಉಗ್ರದಾಳಿ ಬಳಿಕ ಪಾಕಿಸ್ತಾನದಲ್ಲಿ ದಶಕದ ಬಳಿಕ ವೈಟ್​ಜೆರ್ಸಿ ಟೂರ್ನಿ ಆಯೋಜನೆಯಾಗಿದ್ದು, ಕುತೂಹಲ ಮೂಡಿಸಿದೆ.

2009ರ ಮಾರ್ಚ್​ನಲ್ಲಿ ಇದೇ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ತನ್ನ ನೆಲದಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನಾಡಿತ್ತು. ಹತ್ತು ವರ್ಷದ ಹಿಂದೆ ಪಾಕಿಸ್ತಾನದ ಟೆಸ್ಟ್ ತಂಡದಲ್ಲಿದ್ದ ಯೂನಿಸ್ ಖಾನ್, ಮಿಸ್ಬಾ ಉಲ್ ಹಕ್ ಹಾಗೂ ಶೋಯೆಬ್ ಮಲಿಕ್ ವಿದಾಯ ಹೇಳಿದ್ದಾರೆ. ಹೀಗಾಗಿ ಹಾಲಿ ತಂಡದ ಯಾವೊಬ್ಬ ಆಟಗಾರನೂ ತಮ್ಮ ನೆಲದಲ್ಲಿ ಟೆಸ್ಟ್ ಮ್ಯಾಚ್ ಆಡಿಲ್ಲ.

ಎರಡು ಪಂದ್ಯಗಳ ಈ ಟೆಸ್ಟ್ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ಗೆ ಒಳಪಟ್ಟಿರುವುದರಿಂದ ಶ್ರೀಲಂಕಾ ಅಂಕ ಹೆಚ್ಚಿಸಿಕೊಳ್ಳುವ ಉತ್ಸಾಹದಲ್ಲಿದ್ದರೆ, ಪಾಕಿಸ್ತಾನ ಖಾತೆ ತೆರೆಯಲು ತಯಾರಿ ನಡೆಸಿದೆ. ಈ ಸರಣಿಯನ್ನು ಶ್ರೀಲಂಕಾ ಕ್ಲೀನ್​ಸ್ವೀಪ್ ಮಾಡಿದಲ್ಲಿ 120 ಅಂಕ ದೊರೆಯಲಿದ್ದು, 180 ಅಂಕದೊಂದಿಗೆ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ದ್ವಿತೀಯ ಸ್ಥಾನಕ್ಕೆ ಜಿಗಿಯಲಿದೆ.

ಪಾಕಿಸ್ತಾನ ಸತತ ಆರು ಟೆಸ್ಟ್ ಪಂದ್ಯವನ್ನು ಸೋತು ಭಾರಿ ಹಿನ್ನಡೆಯಲ್ಲಿದೆ. 2016/17ರ ಅವಧಿಯಲ್ಲೂ ಇಷ್ಟೇ ಪ್ರಮಾಣದಲ್ಲಿ ಪಾಕಿಸ್ತಾನ ಸತತ ಸೋಲು ಕಂಡಿತ್ತು. ಶ್ರೀಲಂಕಾ ತಂಡ ಇತ್ತೀಚೆಗೆ ಚುಟುಕು ಸರಣಿಯಲ್ಲಿ ಇದೇ ಪಾಕಿಸ್ತಾನದಲ್ಲಿ ಸರಣಿ ಗೆಲುವು ದಾಖಲಿಸಿತ್ತು.

ರಾವಲ್ಪಿಂಡಿ ಟೆಸ್ಟ್ ಪಂದ್ಯದ ಎರಡು ಮತ್ತು ಮೂರನೇ ದಿನದಾಟಕ್ಕೆ ಮಳೆಯ ಸಾಧ್ಯತೆಯೂ ದಟ್ಟವಾಗಿದೆ. ಐತಿಹಾಸಿಕ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದಲ್ಲಿ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಈ ಪಿಚ್ ವೇಗಿಗಳಿಗೆ ನೆರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಪಾಕಿಸ್ತಾನ ಸಂಭಾವ್ಯ ತಂಡ:

ಅಜರ್ ಅಲಿ(ನಾಯಕ), ಶಾನ್ ಮಸೂದ್, ಇಮಾಮ್ ಉಲ್ ಹಕ್, ಬಾಬರ್ ಅಜಮ್, ಅಸಾದ್ ಶಫೀಕ್, ಹ್ಯಾರಿಸ್ ಸೊಹೈಲ್/ಫವಾದ್ ಅಲಂ, ಮೊಹಮ್ಮದ್ ರಿಜ್ವಾನ್(ವಿ.ಕೀ), ಯಾಸಿರ್ ಶಾ, ಉಸ್ಮಾನ್ ಶಿನ್ವಾರಿ, ಶಹೀನ್ ಸಾ ಅಫ್ರಿದಿ, ಮೊಹಮ್ಮದ್ ಅಬ್ಬಾಸ್

ಶ್ರೀಲಂಕಾ ಸಂಭಾವ್ಯ ತಂಡ:

ಧಿಮುತ್ ಕರುಣಾರತ್ನೆ(ನಾಯಕ), ನಿರೋಶನ್ ಡಿಕ್​ವೆಲ್ಲಾ(ವಿ.ಕೀ), ಲಹಿರು ತಿರುಮನ್ನೆ, ಕುಸಾಲ್ ಮೆಂಡಿಸ್, ಆ್ಯಂಜೆಲೋ ಮ್ಯಾಥ್ಯೂಸ್, ಕುಸಾಲ್ ಪೆರೇರಾ/ದಿನೇಶ್ ಚಂಡಿಮಾಲ್, ಧನಂಜಯ ಡಿ ಸಿಲ್ವ, ದಿಲ್ರುವಾನ್ ಪೆರೇರಾ, ಲಸಿತ್ ಎಂಬುಲ್ಡೇನಿಯಾ, ವಿಶ್ವ ಫರ್ನಾಂಡೋ, ಕಸುನ್ ರಜಿತಾ, ಲಹಿರು ಕುಮಾರ

Last Updated : Dec 11, 2019, 9:52 AM IST

ABOUT THE AUTHOR

...view details