ನವದೆಹಲಿ: ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಗುರುವಾರ ನವದೆಹಲಿ ವಿಮಾನ ನಿಲ್ದಾಣ ತಲುಪಲಿದೆ. ಐಸಿಸಿ ಪುರುಷರ T20 ವಿಶ್ವಕಪ್ ಗೆದ್ದ ಭಾರತ ತಂಡವು ತವರಿಗೆ ಮರಳಲು ಸಜ್ಜಾಗಿದೆ. ಬೆರಿಲ್ ಚಂಡಮಾರುತದಿಂದಾಗಿ ಮೂರು ದಿನಗಳ ಕಾಲ ಬಾರ್ಬಡೋಸ್‌ನಲ್ಲಿ ಸಿಲುಕಿದ್ದ ಆಟಗಾರರು ಅಂತಿಮವಾಗಿ ದೆಹಲಿಗೆ ಮರಳಲಿದ್ದಾರೆ.
T20 ವಿಶ್ವಕಪ್ ವಿಜೇತ ತಂಡವು ಬುಧವಾರ ಬೆಳಗ್ಗೆ 6 ಗಂಟೆಗೆ ಬಾರ್ಬಡೋಸ್‌ನಿಂದ ತನ್ನ ಸಹಾಯಕ ಸಿಬ್ಬಂದಿ, ಹಲವಾರು ಬಿಸಿಸಿಐ ಅಧಿಕಾರಿಗಳು, ಆಟಗಾರರ ಕುಟುಂಬಗಳು ಮತ್ತು 22 ಭಾರತೀಯ ಪತ್ರಕರ್ತರೊಂದಿಗೆ ಹೊರಟಿದೆ. ರೋಹಿತ್ ಶರ್ಮಾ, ಶಿವಂ ದುಬೆ ಮತ್ತು ಮೊಹಮ್ಮದ್ ಸಿರಾಜ್ ಅವರು ಟಿ20 ವಿಶ್ವಕಪ್ ಟ್ರೋಫಿಯನ್ನು ಹಿಡಿದಿರುವ ಫೋಟೋದೊಂದಿಗೆ ತವರಿಗೆ ಹಿಂತಿರುಗುತ್ತಿದ್ದೇವೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಆಗಮದ ಬಗ್ಗೆ ತಿಳಿಸಿದ್ದಾರೆ.
ನವದೆಹಲಿ ತಲುಪಿದ ನಂತರ ಭಾರತ ತಂಡವು ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದೆ. ಪ್ರಧಾನಿಯವರನ್ನು ಭೇಟಿ ಮಾಡಿದ ತಕ್ಷಣ ತಂಡ ಮುಂಬೈಗೆ ತೆರಳಲಿದೆ. ಮುಂಬೈನಲ್ಲಿ, ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುವ ಸಮಾರಂಭದ ನಂತರ ಬಿಸಿಸಿಐ ಓಪನ್-ಟಾಪ್ ಬಸ್ ಸವಾರಿಗೆ ವ್ಯವಸ್ಥೆ ಮಾಡಿದೆ ಎಂದು ತಿಳಿದುಬಂದಿದೆ. ಬಸ್ ಸವಾರಿ ಮರೈನ್ ಡ್ರೈವ್ ಸುತ್ತಲೂ ನಡೆಯುವ ನಿರೀಕ್ಷೆಯಿದೆ ಮತ್ತು ಸಂಜೆ 4 ಗಂಟೆಗೆ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ವಿಶ್ವಕಪ್ ವಿಜೇತ ತಂಡವು ಮೂಲತಃ ಬಾರ್ಬಡೋಸ್‌ನಿಂದ ಸೋಮವಾರ ಸ್ಥಳೀಯ ಕಾಲಮಾನ ಬೆಳಗ್ಗೆ 11 ಗಂಟೆಗೆ (ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8:30) ನಿರ್ಗಮಿಸಲು ನಿರ್ಧರಿಸಿತ್ತು. ಆದರೆ ಬೆರಿಲ್ ಚಂಡಮಾರುತದಿಂದಾಗಿ ಆಗಮನ ವಿಳಂಬವಾಯಿತು.