ವಿಶ್ವಸಂಸ್ಥೆ :ಉತ್ತರ ಆಫ್ರಿಕಾದ ಸುಡಾನ್ ದೇಶದಲ್ಲಿ ಯುದ್ಧನಿರತವಾಗಿರುವ ಸುಡಾನ್ ಸಶಸ್ತ್ರ ಸೇನಾಪಡೆ ಮತ್ತು ಸುಡಾನ್ ಕ್ಷಿಪ್ರ ಬೆಂಬಲ ಪಡೆ ಈ ಎರಡೂ ಗುಂಪುಗಳ ನಾಯಕರು ಸಂಪೂರ್ಣ ಯುದ್ಧವಿರಾಮಕ್ಕೆ ಒಪ್ಪುತ್ತಿಲ್ಲ ಎಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. "ಇಬ್ಬರೂ ನಾಯಕರು ಸಂಪೂರ್ಣ ಕದನ ವಿರಾಮಕ್ಕೆ ಸಂಪೂರ್ಣವಾಗಿ ಬದ್ಧರಾಗಲು ಅಥವಾ ಯುದ್ಧ ವಿರಾಮ ಜಾರಿಗೆ ತರಲು ಒಮ್ಮತಕ್ಕೆ ಬರುತ್ತಿಲ್ಲ. ಇಬ್ಬರೂ ಸೇನಾ ಜನರಲ್ಗಳು ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ದೇಶದ ಪ್ರಮುಖ ನೆಲೆಗಳ ಮೇಲೆ ತಾವು ಅಧಿಕಾರ ಸ್ಥಾಪಿಸಿರುವುದಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ" ಎಂದು ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಅವರ ವಿಶೇಷ ಪ್ರತಿನಿಧಿ ಮತ್ತು ಸುಡಾನ್ನಲ್ಲಿ ವಿಶ್ವಸಂಸ್ಥೆಯ ಇಂಟಿಗ್ರೇಟೆಡ್ ಟ್ರಾನ್ಸಿಶನ್ ಅಸಿಸ್ಟೆನ್ಸ್ ಮಿಷನ್ ಮುಖ್ಯಸ್ಥ ವೋಲ್ಕರ್ ಪರ್ಥೆಸ್ ಹೇಳಿದರು.
ಇಬ್ಬರು ಸೇನಾ ಜನರಲ್ಗಳಾದ ಎಸ್ಎಎಫ್ ಮುಖ್ಯಸ್ಥ ಅಬ್ದೆಲ್ ಫತ್ತಾಹ್ ಅಲ್ ಬುರ್ಹಾನ್ ಮತ್ತು ಇವರ ಕೆಳಹಂತದ ನಾಯಕ ಜನರಲ್ ಮೊಹಮ್ಮದ್ ಹಮ್ದಾನ್ ದಗಾಲೊ (ಇವರು ಹೆಮೆಟಟಿ ಎಂದು ಪ್ರಖ್ಯಾತರು) ಎಪ್ರಿಲ್ 15 ರಂದು ಪ್ರಥಮ ಬಾರಿಗೆ ಆರಂಭವಾದ ಹಿಂಸಾಚಾರದ ಕೇಂದ್ರಬಿಂದುವಾಗಿದ್ದಾರೆ. ಇತ್ತೀಚಿನ ಸಂಘರ್ಷದಲ್ಲಿ ಇದುವರೆಗೆ ಕನಿಷ್ಠ 459 ಜನರು ಸಾವನ್ನಪ್ಪಿದ್ದಾರೆ, 4,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇಷ್ಟಾದರೂ ಇಬ್ಬರೂ ಸೇನಾ ನಾಯಕರು ಯುದ್ಧ ನಿಲ್ಲಿಸಲು ಗಂಭೀರ ಮಾತುಕತೆಗೆ ಸಿದ್ಧವಾಗಿರುವ ಬಗ್ಗೆ ಯಾವುದೇ ಮುನ್ಸೂಚನೆ ನೀಡುತ್ತಿಲ್ಲ. ಪರಸ್ಪರರ ಮೇಲೆ ವಿಜಯ ಸಾಧಿಸುವ ವಿಶ್ವಾಸವನ್ನು ಇಬ್ಬರೂ ಹೊಂದಿದ್ದಾರೆ ಎಂದು ವೋಲ್ಕರ್ ಪರ್ಥೆಸ್ ಹೇಳಿದರು. ಕೆಂಪು ಸಮುದ್ರದ ಪೋರ್ಟ್ ಸುಡಾನ್ನಿಂದ ವಿಡಿಯೋ ಲಿಂಕ್ ಮೂಲಕ ಅವರು ಮಾತನಾಡಿದರು. 744 ವಿಶ್ವಸಂಸ್ಥೆಯ ಸಿಬ್ಬಂದಿ ಮತ್ತು ಅವರ ಅವಲಂಬಿತರು, ಅಂತರರಾಷ್ಟ್ರೀಯ ಎನ್ಜಿಒ ಸಿಬ್ಬಂದಿ ಮತ್ತು ಹಲವಾರು ರಾಯಭಾರ ಕಚೇರಿಗಳ ರಾಜತಾಂತ್ರಿಕ ಉದ್ಯೋಗಿಗಳು ಸೇರಿದಂತೆ ಸುಮಾರು 1,200 ಜನರನ್ನು ಖಾರ್ಟೂಮ್ನಿಂದ ಸ್ಥಳಾಂತರಿಸಿ ಅವರಿಗೆ ಇದೇ ಜಾಗದಲ್ಲಿ ಆಶ್ರಯ ನೀಡಲಾಗಿದೆ.