ಲಂಡನ್ (ಬ್ರಿಟನ್): ಬ್ರಿಟನ್ನಲ್ಲಿ 14 ವರ್ಷಗಳ ಬಳಿಕ ಸರ್ಕಾರ ಬದಲಾಗಿದೆ. ಇದರೊಂದಿಗೆ ರಾಜಕೀಯ ಮಾತ್ರವಲ್ಲ, ಪ್ರಧಾನಿ ಕಚೇರಿಯಲ್ಲೂ ಆಸಕ್ತಿಕರ ಸಂಗತಿಗಳು ಗಮನ ಸೆಳೆಯುತ್ತಿವೆ. ಡೌನಿಂಗ್ ಸ್ಟ್ರೀಟ್ನ 'ಲ್ಯಾರಿ' ಬೆಕ್ಕು ತನ್ನ ಆರನೇ ಪ್ರಧಾನಿಯನ್ನು ಸ್ವಾಗತಿಸಲು ಸಿದ್ಧವಾಗಿದೆ. 'ಚೀಫ್ ಮೌಸರ್' ಇದುವರೆಗೆ ಕನ್ಸರ್ವೇಟಿವ್ ಪಕ್ಷದ ಐವರು ಪ್ರಧಾನಿಗಳನ್ನು ಕಂಡಿದೆ. ಈಗ ಲೇಬರ್ ಪಕ್ಷದ ನಾಯಕನೊಂದಿಗೆ ತನ್ನ ಮೊದಲ ಪ್ರಯಾಣ ಆರಂಭಿಸಲಿದೆ.
'10 ಡೌನಿಂಗ್ ಸ್ಟ್ರೀಟ್' ಲಂಡನ್‌ನಲ್ಲಿದೆ. ಇದು ಯುನೈಟೆಡ್ ಕಿಂಗ್‌ಡಂನ ಪ್ರಧಾನಿ ಅಧಿಕೃತ ನಿವಾಸ ಮತ್ತು ಕಚೇರಿ. ಪಿಎಂ ನಿವಾಸದ ಅಧಿಕೃತ ಬೆಕ್ಕಿನ ಹೆಸರೇ 'ಚೀಫ್ ಮೌಸರ್'. 2011ರಲ್ಲಿ ಮೊದಲ ಬಾರಿಗೆ 'ಚೀಫ್ ಮೌಸರ್' ಪರಿಚಯಿಸಲಾಗಿದೆ. 'ಚೀಫ್ ಮೌಸರ್' ಆಗಿ 'ಲ್ಯಾರಿ' ಪ್ರಸಿದ್ಧಿ ಪಡೆದಿದೆ. '10 ಡೌನಿಂಗ್ ಸ್ಟ್ರೀಟ್'ನ ಬಾಗಿಲಿನಲ್ಲಿ ಕಾಣಿಸಿಕೊಳ್ಳುವ ಬ್ರಿಟನ್ ಜನರ ಹೃದಯ ಗೆಲ್ಲುತ್ತದೆ.
ಈಗ ಡೌನಿಂಗ್ ಸ್ಟ್ರೀಟ್ನಲ್ಲಿ ಕೀರ್ ಸ್ಟಾರ್ಮರ್ ಅವರನ್ನು 'ಲ್ಯಾರಿ' ಪ್ರಧಾನಿಯಾಗಿ ನೋಡಲಿದೆ. ಇದಕ್ಕೂ ಮುನ್ನ ನಿರ್ಗಮಿತ ಪ್ರಧಾನಿ ರಿಷಿ ಸುನಕ್ ಹಾಗೂ ಈ ಹಿಂದೆ ಲ್ಯಾರಿ ಲಿಜ್ ಟ್ರಸ್, ಬೋರಿಸ್ ಜಾನ್ಸನ್, ಥೆರೆಸಾ ಮೇ ಮತ್ತು ಡೇವಿಡ್ ಕ್ಯಾಮರೂನ್ ಅವರನ್ನು ಕಂಡಿತ್ತು. ಪಿಎಂ ನಿವಾಸದಲ್ಲಿ ಅತಿಥಿಗಳನ್ನು ಸ್ವಾಗತಿಸುತ್ತಾ, ಭದ್ರತಾ ರಕ್ಷಣೆ ಪರಿಶೀಲನೆ ಹಾಗೂ ಪುರಾತನ ಪೀಠೋಪಕರಣಗಳ ಪರೀಕ್ಷಿಸುವುದು 'ಲ್ಯಾರಿ' ದಿನಚರಿಯಾಗಿದೆ.
ಇದನ್ನೂ ಓದಿ: ಯುಕೆ ಚುನಾವಣಾ ಫಲಿತಾಂಶ: ಸಂಸತ್ತಿಗೆ ದಾಖಲೆ ಸಂಖ್ಯೆಯ ಭಾರತೀಯ ಮೂಲದವರು ಆಯ್ಕೆ!
ಐವರು ಪಿಎಂಗಳ ಅಧಿಕಾರಾವಧಿ: ಕನ್ಸರ್ವೇಟಿವ್ ಪಕ್ಷದಿಂದ ಡೇವಿಡ್ ಕ್ಯಾಮರೂನ್ 2010ರ ಮೇ 11ರಂದು ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಆರು ವರ್ಷ ಮತ್ತು 64 ದಿನಗಳ ಕಾಲ ಅಧಿಕಾರದಲ್ಲಿದ್ದ ಇವರು 2016ರ ಜುಲೈ 13ರಂದು ತಮ್ಮ ಆಡಳಿತ ಕೊನೆಗೊಳಿಸಿದ್ದರು. ನಂತರ ಥೆರೆಸಾ ಮೇ 2016ರ ಜುಲೈ 13ರಿಂದ 2019 ಜುಲೈ 24ರವರೆಗೆ ಅಧಿಕಾರದಲ್ಲಿದ್ದರು.
ಇವರ ಬಳಿಕ ಬೋರಿಸ್ ಜಾನ್ಸನ್ ಅಧಿಕಾರ ವಹಿಸಿಕೊಂಡಿದ್ದರು. 2019ರ ಜುಲೈ 24ರಿಂದ 2022ರ ಸೆಪ್ಟೆಂಬರ್ 6ರವರೆಗೆ ಜಾನ್ಸನ್ ಪ್ರಧಾನಿ ಆಗಿದ್ದರು. 3 ವರ್ಷ ಮತ್ತು 45 ದಿನಗಳ ಅಧಿಕಾರಾವಧಿಯನ್ನು ಹೊಂದಿದ್ದರು. ಜಾನ್ಸನ್ ನಂತರ ಲಿಜ್ ಟ್ರಸ್ 2022ರ ಸೆಪ್ಟೆಂಬರ್ 6ರಿಂದ ಅಕ್ಟೋಬರ್ 24ರವರೆಗೆ ಕೇವಲ 50 ದಿನಗಳ ಕಾಲ ಪ್ರಧಾನಿಯಾಗಿದ್ದರು. ನಂತರ ಭಾರತೀಯ ಮೂಲದ ರಿಷಿ ಸುನಕ್ ಪ್ರಧಾನಿ ಹುದ್ದೆ ಅಲಂಕರಿಸಿದ್ದರು.
ಇಂದು ಡೌನಿಂಗ್ ಸ್ಟ್ರೀಟ್ ಆಡಳಿತದಲ್ಲಿ ಬದಲಾವಣೆಯಾಗಿದೆ. ಸಂಸತ್ತಿನ 650 ಸ್ಥಾನಗಳ ಪೈಕಿ 412 ಸ್ಥಾನಗಳಲ್ಲಿ ಪ್ರತಿಪಕ್ಷ ಲೇಬರ್ ಪಾರ್ಟಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದೆ. ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷವು ಕೇವಲ 121 ಸ್ಥಾನಗಳಿಗೆ ಸೀಮಿತವಾಗಿದೆ. ಈ ಹಿಂದೆ ಗೆದ್ದಿದ್ದ 200ಕ್ಕೂ ಹೆಚ್ಚು ಸ್ಥಾನಗಳಲ್ಲೂ ಸೋಲು ಕಂಡಿದೆ. ಆದ್ದರಿಂದ 'ಲ್ಯಾರಿ' ಬೆಕ್ಕು ಹೊಸ ಪ್ರಧಾನಿಯನ್ನು ಬರಮಾಡಿಕೊಳ್ಳಲಿದೆ.
ಇದನ್ನೂ ಓದಿ: ಬ್ರಿಟನ್ನಲ್ಲಿ 14 ವರ್ಷದ ನಂತರ ಬದಲಾದ ಸರ್ಕಾರ: ಹೊಸ ಪ್ರಧಾನಿ ಕೀರ್ ಸ್ಟಾರ್ಮರ್ ಯಾರು?, ಭಾರತದ ಪರ ಒಲವು ಹೇಗಿದೆ?