ಕರ್ನಾಟಕ

karnataka

ಪಾಕಿಸ್ತಾನದಲ್ಲಿ ಉಗ್ರವಾದ ಹೆಚ್ಚಳ: ಮೂಲಭೂತವಾದ, ಆರ್ಥಿಕ ಬಿಕ್ಕಟ್ಟು ಕಾರಣ!

By

Published : Mar 31, 2023, 4:07 PM IST

ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಉಲ್ಬಣಿಸುವುದರ ಜೊತೆಗೆ ಉಗ್ರವಾದವೂ ಹೆಚ್ಚಾಗುತ್ತಿದೆ. ಇದರಿಂದ ಭಾರತ ಸೇರಿದಂತೆ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಎದುರಾಗಿವೆ.

ಪಾಕಿಸ್ತಾನದಲ್ಲಿ ಉಗ್ರವಾದ ಹೆಚ್ಚಳ: ಮೂಲಭೂತವಾದ, ಆರ್ಥಿಕ ಬಿಕ್ಕಟ್ಟು ಕಾರಣ!
Rise of terrorism in Pakistan: Youth radicalisation, poor economy responsible

ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದನೆ ವಿಪರೀತ ಹೆಚ್ಚಾಗುತ್ತಿದೆ. ಇದು ನೆರೆಹೊರೆ ರಾಷ್ಟ್ರಗಳು ಮಾತ್ರವಲ್ಲದೆ ಇಡೀ ದಕ್ಷಿಣ ಏಷ್ಯಾದ ದೇಶಗಳ ಜನರ ಆತಂಕಕ್ಕೆ ಕಾರಣವಾಗಿದೆ. ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ಉಗ್ರಗಾಮಿ ಸಂಘಟನೆಗಳು ದೇಶದ ಯುವಕರನ್ನು ಧರ್ಮದ ಹೆಸರಿನಲ್ಲಿ ಮತಿಭ್ರಮಣೆಗೊಳಿಸಿ ತಮ್ಮ ಗುಂಪಿಗೆ ಸೇರಿಸಿಕೊಳ್ಳುವುದನ್ನು ಮುಂದುವರೆಸಿವೆ. ಇದಲ್ಲದೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರತೆ ಮತ್ತು ಕುಸಿಯುತ್ತಿರುವ ಆರ್ಥಿಕತೆ ಕೂಡ ದೇಶದಲ್ಲಿ ಉಗ್ರವಾದ ಹೆಚ್ಚಾಗಲು ಕಾರಣವಾಗಿವೆ.

ಈ ಉಗ್ರಗಾಮಿ ಗುಂಪುಗಳಿಗೆ ಸಿಗುತ್ತಿರುವ ಹಣಕಾಸು ಮೂಲಗಳನ್ನು ಪತ್ತೆ ಮಾಡಿ ಅವನ್ನು ತಟಸ್ಥಗೊಳಿದರೆ ಉಗ್ರವಾದಿಗಳ ಸಮಸ್ಯೆಯನ್ನು ಮಟ್ಟ ಹಾಕಲು ಸಾಧ್ಯವಾಗಬಹುದು. ತಾಲಿಬಾನ್, ಅಲ್-ಖೈದಾ ಮತ್ತು ಹಕ್ಕಾನಿ ನೆಟ್‌ವರ್ಕ್‌ ಸಂಘಟನೆಗಳು ಪಾಕಿಸ್ತಾನದಿಂದ ಆರ್ಥಿಕ ಸಹಾಯ ಪಡೆಯುತ್ತಿವೆ. ಅಲ್ಲದೆ ಪಾಕಿಸ್ತಾನ ಈ ಸಂಘಟನೆಗಳಿಗೆ ಸುರಕ್ಷಿತ ತಾಣವಾಗಿದ್ದು, ಪಾಕ್ ಸರ್ಕಾರದ ಇಲಾಖೆಗಳು ಇವಕ್ಕೆ ಲಾಜಿಸ್ಟಿಕಲ್ ಬೆಂಬಲ ನೀಡುತ್ತಿವೆ ಎಂದು ಆರೋಪಿಸಲಾಗಿದೆ. ಇಸ್ಲಾಮಿಕ್ ಮೂಲಭೂತವಾದವನ್ನು ಮಟ್ಟ ಹಾಕಲು ಪಾಕಿಸ್ತಾನ ಏನನ್ನೂ ಮಾಡುತ್ತಿಲ್ಲ ಎಂಬುದು ಈಗ ಜಗತ್ತಿನ ಗಮನಕ್ಕೆ ಬರುತ್ತಿದೆ. ಉಗ್ರವಾದಿಗಳು ತಮ್ಮ ಸಿದ್ಧಾಂತವನ್ನು ಹರಡಲು ಮತ್ತು ಭಯೋತ್ಪಾದನೆಯಲ್ಲಿ ತೊಡಗಿಸಿಕೊಳ್ಳಲು ಪಾಕಿಸ್ತಾನ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಲಾಗಿದೆ.

ಇದಲ್ಲದೆ ಪಾಕಿಸ್ತಾನದಲ್ಲಿ ಮಿಲಿಟರಿ ಸರ್ವಾಧಿಕಾರ ಸರ್ಕಾರಗಳು ಜನರ ಬೆಂಬಲ ಗಳಿಸಲು ಧಾರ್ಮಿಕ ಪಕ್ಷಗಳ ಮೇಲೆ ಅವಲಂಬಿತವಾಗಿವೆ ಮತ್ತು ಪಾಕಿಸ್ತಾನದಲ್ಲಿ ಸರ್ಕಾರಗಳ ಯಶಸ್ಸು ಈ ಸಂಘಟನೆಗಳ ಮೇಲೆ ಅವಲಂಬಿತವಾಗಿದೆ. ಇಸ್ಲಾಮಿಕ್ ಜಮಾತ್-ಎ-ಇಸ್ಲಾಮಿಯ ನಾಯಕ ಸೈಯ್ಯದ್ ಅಬುಲ್ ಅಲಾ ಮೌದಿದಿಯ ಕೃತ್ಯಗಳ ಕಾರಣದಿಂದ ಪಾಕಿಸ್ತಾನದಲ್ಲಿ ಭಾರತ ವಿರೋಧಿ ಭಾವನೆ ಅಥವಾ ಇಂಡೋಫೋಬಿಯಾ ಹೆಚ್ಚಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಫೆಡರಲ್ ಆಡಳಿತವಿರುವ ಉತ್ತರ ದಿಕ್ಕಿನ ಪ್ರದೇಶಗಳು ಮತ್ತು ವಾಯುವ್ಯ ಮತ್ತು ಈಶಾನ್ಯದಲ್ಲಿರುವ ಫೆಡರಲ್ ಆಡಳಿತದ ಬುಡಕಟ್ಟು ಪ್ರದೇಶಗಳು (Federally Administered Tribal Areas-FATA) ಧಾರ್ಮಿಕ ಹಿಂಸಾಚಾರದ ಆಶ್ರಯ ತಾಣಗಳಾಗಿವೆ.

ಇತ್ತೀಚಿನ ದಿನಗಳಲ್ಲಿ ಯುರೋಪಿಯನ್ ದೇಶಗಳಲ್ಲಿ ಇಸ್ಲಾಮಿಕ್ ಮೂಲಭೂತವಾದ ಹರಡುವುದು ಮತ್ತು ಉಗ್ರರ ಸ್ಲೀಪ್ ಸೆಲ್ ಸ್ಥಾಪನೆ ವಿಚಾರದಲ್ಲಿ ಪಾಕಿಸ್ತಾನದ ಪಾತ್ರವಿರುವ ಬಗ್ಗೆ ಶಂಕೆಗಳು ವ್ಯಕ್ತವಾಗಿವೆ. ಗ್ರೀಸ್​​ನಲ್ಲಿ ಚರ್ಚ್​ಗಳ ಮೇಲೆ ದಾಳಿ ಮಾಡಲು ಯೋಜಿಸಿದ್ದ ಪಾಕಿಸ್ತಾನಿ ಪ್ರಜೆಗಳನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಅಲ್ಲದೆ ಕಳೆದ ವರ್ಷ ಇಟಲಿಯಲ್ಲಿ ಗಬರ್ ಗ್ರೂಪ್ ಎಂಬ ಸುಸಜ್ಜಿತವಾದ ಉಗ್ರವಾದಿಗಳ ಸಂಘಟನೆಯನ್ನು ಪತ್ತೆ ಮಾಡಲಾಗಿತ್ತು. ಸಂಪೂರ್ಣವಾಗಿ ಪಾಕಿಸ್ತಾನಿ ಯುವಕರೇ ಈ ಸಂಘಟನೆಯನ್ನು ನಡೆಸುತ್ತಿದ್ದರು. ಈ ಎಲ್ಲ ಬೆಳವಣಿಗೆಗಳು ಪಾಕಿಸ್ತಾನವೇ ಉಗ್ರವಾದಿಗಳ ತಾಣ ಎಂಬುದರತ್ತ ಬೊಟ್ಟು ಮಾಡುತ್ತಿವೆ.

ಪ್ರಸ್ತುತ ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಮೇರೆ ಮೀರಿದ್ದು ಜನ ಊಟಕ್ಕೂ ಗತಿಯಿಲ್ಲದೆ ಪರದಾಡುವಂತಾಗಿದೆ. ಈ ಸ್ಥಿತಿಯಲ್ಲಿ ಪಾಕಿಸ್ತಾನದ ಅನೇಕ ನಗರಗಳಲ್ಲಿ ದರೋಡೆ ಕಳ್ಳತನಗಳ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಒಟ್ಟಾರೆಯಾಗಿ ಬೆಳೆಯುತ್ತಿರುವ ಉಗ್ರವಾದವನ್ನು ಪಾಕಿಸ್ತಾನ ಹೇಗೆ ಮಟ್ಟ ಹಾಕಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ಉಗ್ರವಾದ - ಭಯೋತ್ಪಾದನೆ ಇಸ್ಲಾಂನ ತತ್ತ್ವಕ್ಕೆ ವಿರುದ್ಧ: ಎನ್​ಎಸ್​ಎ ದೋವಲ್

ABOUT THE AUTHOR

...view details