ಕರ್ನಾಟಕ

karnataka

ವಿಶ್ವ ಹವಾಮಾನ ಶೃಂಗಸಭೆ: ದುಬೈಗೆ ಆಗಮಿಸಿದ ಮೋದಿ, ಅದ್ಧೂರಿ ಸ್ವಾಗತ

By PTI

Published : Dec 1, 2023, 8:41 AM IST

Updated : Dec 1, 2023, 9:18 AM IST

World Climate Action Summit: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (ಯುಎಇ) ನಡೆಯುತ್ತಿರುವ ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಭಾಗವಹಿಸಲು ದುಬೈಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅನಿವಾಸಿ ಭಾರತೀಯರು ಅದ್ಧೂರಿಯಾಗಿ ಸ್ವಾಗತಿಸಿದರು.

PM Modi arrives in Dubai
ಪ್ರಧಾನಿ ಮೋದಿ ದುಬೈಗೆ ಆಗಮನ

ನವದೆಹಲಿ: ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದುಬೈಗೆ ಆಗಮಿಸಿದ್ದಾರೆ. ದೆಹಲಿಯಿಂದ ಹೊರಡುವ ಮುನ್ನ ಮೋದಿ, ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಸಕ್ರಿಯಗೊಳಿಸಲು ಹವಾಮಾನ ಹಣಕಾಸು ಮತ್ತು ತಂತ್ರಜ್ಞಾನ ವರ್ಗಾವಣೆಗೆ ಕರೆ ನೀಡಿದ್ದಾರೆ.

''ನಾನು COP-28 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದುಬೈ ತಲುಪಿದ್ದೇನೆ. ಉತ್ತಮ ಗ್ರಹವನ್ನು (ಭೂಮಿ) ನಿರ್ಮಿಸುವ ಗುರಿ ಹೊಂದಿರುವ ಶೃಂಗಸಭೆಯ ಕಾರ್ಯವೈಖರಿಯನ್ನು ಎದುರು ನೋಡುತ್ತಿದ್ದೇನೆ'' ಎಂದು ಮೋದಿ ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಹವಾಮಾನ ಬದಲಾವಣೆಗೆ ಒತ್ತು:''ಹವಾಮಾನ ಸಂರಕ್ಷಣೆಗೆ ಕ್ರಮ ಕ್ಷೇತ್ರದಲ್ಲಿ ಭಾರತದ ಪ್ರಮುಖ ಪಾಲುದಾರ ಯುಎಇ ಅಧ್ಯಕ್ಷತೆಯಲ್ಲಿ ಮಹತ್ವದ ಕಾರ್ಯಕ್ರಮ ಆಯೋಜಿಸಿರುವುದು ಸಂತೋಷವಾಗಿದೆ. ಭಾರತ ಯಾವಾಗಲೂ ಹವಾಮಾನ ವಿಚಾರವಾಗಿ ವಿಶೇಷ ಒತ್ತು ನೀಡುತ್ತಾ ಬಂದಿದೆ'' ಎಂದು ದುಬೈಗೆ ಹೊರಡುವ ಮುನ್ನ ಮೋದಿ ದೆಹಲಿಯಲ್ಲಿ ತಿಳಿಸಿದರು.

''ನಾವು ಜಿ20 ಅಧ್ಯಕ್ಷತೆ ವಹಿಸಿದ ವೇಳೆಯಲ್ಲೂ ಹವಾಮಾನ ಕುರಿತು ಪ್ರಮುಖ ಆದ್ಯತೆ ನೀಡಿದ್ದೆವು. ನವದೆಹಲಿ ಘೋಷಣೆಯಲ್ಲಿ ಹವಾಮಾನ ಕ್ರಮ ಮತ್ತು ಸುಸ್ಥಿರ ಅಭಿವೃದ್ಧಿಯ ಕುರಿತಾದ ಹಲವು ಯೋಜನೆಗಳಿವೆ. COP28ನಲ್ಲಿ ಈ ವಿಷಯಗಳ ಬಗ್ಗೆ ಒಮ್ಮತವನ್ನು ಮುಂದಕ್ಕೆ ತೆಗೆದುಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ'' ಎಂದಿದ್ದಾರೆ.

ಮೋದಿಗೆ ಆತ್ಮೀಯ ಸ್ವಾಗತ: ಯುಎಇಗೆ ಆಗಮಿಸಿದ ನರೇಂದ್ರ ಮೋದಿ ಅವರನ್ನು ದುಬೈನಲ್ಲಿರುವ ಭಾರತೀಯ ವಲಸಿಗರ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿದರು. ಹೋಟೆಲ್ ಹೊರಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮೋದಿ, ಮೋದಿ ಎಂಬ ಘೋಷಣೆಗಳನ್ನು ಕೂಗಿದರು. ಇದರ ಜೊತೆಗೆ 'ಈ ಬಾರಿ ಮೋದಿ ಸರ್ಕಾರ' ಹಾಗೂ 'ವಂದೇ ಮಾತರಂ' ಎಂಬ ಘೋಷಣೆಗಳೂ ಕೇಳಿಬಂದವು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅನಿವಾಸಿ ಭಾರತೀಯರೊಬ್ಬರು ಮಾತನಾಡಿ, "ಯುಎಇಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ತುಂಬಾ ಸಂತೋಷವಾಯಿತು. ನಾನು 20 ವರ್ಷಗಳಿಂದ ಯುಎಇಯಲ್ಲಿ ವಾಸಿಸುತ್ತಿದ್ದೇನೆ. ಆದರೆ ಇಂದು ನನ್ನವರೊಬ್ಬರು ಈ ದೇಶಕ್ಕೆ ಬಂದಂತೆ ಭಾಸವಾಗಿದೆ. ಇಡೀ ವಿಶ್ವದಲ್ಲಿ ಭಾರತಕ್ಕೆ ಕೀರ್ತಿ ತಂದವರು ಮೋದಿ ಭಾರತದ ವಜ್ರ" ಎಂದು ಬಣ್ಣಿಸಿದರು.

ಮತ್ತೊಬ್ಬ ಅನಿವಾಸಿ ಭಾರತೀಯ ಸಂತಸ ವ್ಯಕ್ತಪಡಿಸಿ, "ಇಲ್ಲಿ ಪ್ರಧಾನಿ ಮೋದಿ ಅವರನ್ನು ನೋಡಲು ನಮಗೆ ತುಂಬಾ ಸಂತೋಷವಾಗಿದೆ. ಈ ದಿನವನ್ನು ನಾವು ನಮ್ಮ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ. ಜಗತ್ತಿಗೆ ಮೋದಿಯಂತಹ ನಾಯಕನ ಅಗತ್ಯವಿದೆ" ಎಂದರು.

ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಮೋದಿ ಶುಕ್ರವಾರ ಭಾಗವಹಿಸಲಿದ್ದಾರೆ. ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿಮೆ ಮಾಡುವ ಮತ್ತು ಹವಾಮಾನ ಬದಲಾವಣೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಮಾರ್ಗಗಳ ಕುರಿತು ಚರ್ಚಿಸಲು ಹಲವಾರು ವಿಶ್ವ ನಾಯಕರು ಹವಾಮಾನ ಕ್ರಿಯೆಯ ಶೃಂಗಸಭೆಯಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ.

ಇದನ್ನೂ ಓದಿ:ಥಾಯ್ಲೆಂಡ್​ನಲ್ಲೂ ಇದೆ ಅಯೋಧ್ಯೆ: ರಾಜರ ಹೆಸರುಗಳಲ್ಲಿ ಹಾಸುಹೊಕ್ಕಾದ ಶ್ರೀರಾಮ

Last Updated : Dec 1, 2023, 9:18 AM IST

ABOUT THE AUTHOR

...view details