ಭ್ರಾತೃತ್ವದ ಹಬ್ಬ ಈ 'ರಕ್ಷಾ ಬಂಧನ'. ಜಗಳ, ತರ್ಲೆ, ಮುದ್ದಾಟ-ಗುದ್ದಾಟಗಳು ಎಷ್ಟೇ ಇದ್ದರೂ ಸದಾ ಅಂಟಿಕೊಂಡೇ ಇರುವ ಮುದ್ದು ಮನಸ್ಸಿನ ಅಣ್ಣ-ತಂಗಿಯರಿಗೆ ಹಾಗೂ ಅಕ್ಕ-ತಮ್ಮಂದಿರಿಗೆ ರಾಖಿ ಹಬ್ಬದ ಶುಭಾಶಯಗಳು.
ಹಿಂದೂ ಧರ್ಮದ ಪ್ರತಿ ಆಚರಣೆಗೂ ಒಂದೊಂದು ಮಹತ್ವವಿದೆ. ಪ್ರತಿ ಹಬ್ಬಕ್ಕೂ ಪೌರಾಣಿಕ ಹಿನ್ನೆಲೆ ಇದೆ. ಪ್ರತಿ ಸಂಬಂಧಕ್ಕೂ ಪವಿತ್ರ ಅರ್ಥವಿದೆ. ಸಹೋದರ-ಸಹೋದರಿಯರ ಸಂಬಂಧ ಎಂದೆಂದೂ ಬಿಡಿಸಲಾಗದ ಬಂಧ. ಪ್ರೀತಿ, ಜಗಳ, ಕೋಪ, ತಾಪ, ಹರಟೆ, ಸಹನೆ ಹೀಗೆ ಎಲ್ಲ ಭಾವನೆಗಳ ಸಮ್ಮಿಶ್ರಣದ ಬಂಧನ.
ನೂಲ ಹುಣ್ಣಿಮೆಯ ದಿನ ನೂಲಿನೆಳೆಯ ಮಹತ್ವ ಅಣ್ಣ-ತಂಗಿ, ಅಕ್ಕ-ತಮ್ಮ ಎಂಬ ನಂಟಿನ ಬೆಸುಗೆ ಗಟ್ಟಿಗೊಳಿಸುವ ಹಬ್ಬವೇ ರಕ್ಷಾ ಬಂಧನ. ನೂಲಿನೆಳೆಯ ಮೂಲಕ ಭಾವನೆಗಳನ್ನ ಬಲಗೊಳಿಸುವ ಹಬ್ಬ. ರಾಖಿ ಎಂದರೆ ರಕ್ಷಣೆ ಎಂದರ್ಥ. ರಕ್ಷ ಎಂದರೆ ರಕ್ಷಿಸುವುದು, ಬಂಧನ ಎಂದರೆ ಸೂತ್ರ ಕಟ್ಟುವುದು ಎಂದರ್ಥ. ಆದ್ದರಿಂದಲೇ ಈ ಹಬ್ಬವನ್ನು ರಕ್ಷಾ ಬಂಧನ ಎಂದು ಕರೆಯಲಾಗುತ್ತದೆ.
ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ರಕ್ಷಾ ಬಂಧನ :ಹಿಂದೂ ಪಂಚಾಂಗದ ಪ್ರಕಾರ, ರಾಖಿ ಹಬ್ಬವನ್ನು ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ. ಈ ವರ್ಷ ಹುಣ್ಣಿಮೆಯ ತಿಥಿ ಭಾನುವಾರ ಅಂದರೆ ಆಗಸ್ಟ್ 22, 2021ರಂದು ಬಂದಿದೆ. ಮಾರುಕಟ್ಟೆಯಲ್ಲಿ ಸಹೋದರಿಯರು ಸೋದರರಿಗಾಗಿ ರಾಖಿ ಖರೀದಿಸುವುದರಲ್ಲಿ ನಿರತರಾಗಿದ್ದಾರೆ. ಇತ್ತ ಸಹೋದರರು ತಮ್ಮ ಮುದ್ದಿನ ಸೋದರಿಗೆ ಉಡುಗೊರೆ ಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ.
ರಕ್ಷಾಬಂಧನ ಸಹೋದರ-ಸಹೋದರಿಯರ ಪ್ರೀತಿಯ ಸಂಕೇತ. ಈ ದಿನ ಸಹೋದರಿಯರು ತಮ್ಮ ಸಹೋದರನ ಮಣಿಕಟ್ಟಿಗೆ ರಾಖಿ ಕಟ್ಟುತ್ತಾರೆ. ಸಹೋದರನ ದೀರ್ಘಾಯುಷ್ಯ ಮತ್ತು ಸಂತೋಷದ ಜೀವನಕ್ಕಾಗಿ ಪ್ರಾರ್ಥಿಸುತ್ತಾರೆ. ಪ್ರತಿಯಾಗಿ, ಸಹೋದರರು ತಮ್ಮ ಸಹೋದರಿಯರಿಗೆ ಉಡುಗೊರೆಗಳನ್ನ ನೀಡುತ್ತಾರೆ.
ಪೌರಾಣಿಕ ಕಥೆಗಳ ನಂಟು :ರಕ್ಷಾ ಬಂಧನ ಹಬ್ಬಕ್ಕೆ ಹಲವು ಪೌರಾಣಿಕ ಕಥೆಗಳ ನಂಟಿದೆ. ಭಾರತೀಯ ಪುರಾಣಗಳಲ್ಲಿ ಅತ್ಯಂತ ಜನಪ್ರಿಯ ಕಥೆಯೆಂದರೆ ಶ್ರೀಕೃಷ್ಣ ಮತ್ತು ದ್ರೌಪದಿ. ಇದು ಕೃಷ್ಣ-ದ್ರೌಪದಿಯ ಸೋದರ ವಾತ್ಸಲ್ಯದ ಕಥೆ. ಶಿಶುಪಾಲ ಎಂಬ ರಕ್ಕಸನ ವಿರುದ್ಧ ಶ್ರೀಕೃಷ್ಣ ಸಮರ ಸಾರಿದ್ದ ಸಂದರ್ಭದಲ್ಲಿ ರಕ್ಕಸ ಸಾವನ್ನಪ್ಪಿದರೂ, ಯುದ್ಧದಲ್ಲಿ ಕೃಷ್ಣನ ಕೈಗೆ ವಿಪರೀತ ಗಾಯವಾಗಿ ರಕ್ತ ಸುರಿಯತೊಡಗಿತು. ಆಗ ದ್ರೌಪದಿ ರಕ್ತಸ್ರಾವವನ್ನು ತಡೆಯಲು ಸೆರಗಿನ ತುಂಡನ್ನು ಹರಿದು ಕೃಷ್ಣನ ಬೆರಳಿಗೆ ಕಟ್ಟಿದಳು.
ನೂಲಿನೆಳೆಯ ಮೂಲಕ ಭಾವನೆಯ ಬಲಗೊಳಿಸುವ ಹಬ್ಬ ಪ್ರತಿಯಾಗಿ, ಅಗತ್ಯವಿದ್ದಾಗ ಅವಳಿಗೆ ಸಹಾಯ ಮಾಡುವುದಾಗಿ ಕೃಷ್ಣ ಭರವಸೆ ನೀಡಿದನು. ಅದರಂತೆ ಚದುರಂಗದಾಟದಲ್ಲಿ ಪಾಂಡವರು ಸೋತ ಸಂದರ್ಭದಲ್ಲಿ ದ್ರೌಪದಿಯ ವಸ್ತ್ರಾಪಹರಣಕ್ಕೆ ದುಶ್ಯಾಸನ ಮುಂದಾದಾಗ ಕೃಷ್ಣ ಆಕೆಯ ಮಾನ ಕಾಪಾಡಿದ.
ಇನ್ನೊಂದು ಪೌರಾಣಿಕ ಕಥೆ ಎಂದರೆ, ರಕ್ಕಸರ ರಾಜ ಮಹಾಬಲಿಯು ವಿಷ್ಣು ಪರಮಾತ್ಮನ ಮಹಾ ಭಕ್ತನಾಗಿದ್ದನು. ಅವನ ಭಕ್ತಿಗೆ ಒಲಿದ ವಿಷ್ಣು, ಬಲಿಯ ರಾಜಧಾನಿಯನ್ನು ಕಾಪಾಡುವ ಭರವಸೆ ದಯಪಾಲಿಸುತ್ತಾನೆ. ಇದಕ್ಕಾಗಿ ವಿಷ್ಣು ವೈಕುಂಠ ಬಿಡುವ ನಿರ್ಧಾರಕ್ಕೆ ಬರುತ್ತಾನೆ. ಇದರಿಂದ ವಿಷ್ಣುವಿನ ಪತ್ನಿ ಲಕ್ಷ್ಮಿ ಬಹಳ ಸಂಕಷ್ಟಕ್ಕೆ ಒಳಗಾಗುತ್ತಾಳೆ. ಅದು ಶ್ರಾವಣ ಹುಣ್ಣಿಮೆಯ ದಿನವಾಗಿರುತ್ತದೆ.
ಪತಿಯನ್ನು ವೈಕುಂಠದಲ್ಲಿಯೇ ಉಳಿಸಿಕೊಳ್ಳಲು ಇಚ್ಛಿಸಿದ ಲಕ್ಷ್ಮಿ ಬಲಿಗೆ ರಾಖಿ ಕಟ್ಟುತ್ತಾಳೆ. ಬಳಿಕ ತನ್ನ ಉದ್ದೇಶ ವಿವರಿಸುತ್ತಾಳೆ. ಲಕ್ಷ್ಮಿಯ ವಾತ್ಸಲ್ಯಕ್ಕೆ ಮನಸೋತ ಬಲಿ, ವೈಕುಂಠದಲ್ಲಿಯೇ ನೆಲೆಸುವಂತೆ ವಿಷ್ಣುವಿನ ಮನವೊಲಿಸುತ್ತಾನೆ. ಇದರಿಂದ ಈ ದಿನ `ಬಲೇವಾ ಅಂದರೆ ವಿಷ್ಣುವಿನ ಮೇಲೆ ಬಲಿ ಇಟ್ಟಿರುವ ಸ್ನೇಹ ಎಂದು ಉತ್ತರ ಭಾರತದಲ್ಲಿ ಈ ಹಬ್ಬ ಪ್ರಸಿದ್ಧಿ ಪಡೆದಿದೆ.
ನೂಲ ಹುಣ್ಣಿಮೆಯ ದಿನ ನೂಲಿನೆಳೆಯ ಮಹತ್ವ :ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ಸೋದರಿಯರು ಸೋದರನ ಬಳಿ ತೆರಳಿ ರಾಖಿ ಕಟ್ಟುವುದು ಸಾಧ್ಯವಿಲ್ಲದೇ ಇರಬಹುದು. ಈಗ ಇ-ಕಾಮರ್ಸ್ ಕಾಲ. ನಾವು ನಮ್ಮ ಮನೆಯಲ್ಲಿಯೇ ಕುಳಿತು ದೂರದ ಅಣ್ಣನಿಗೆ ರಾಖಿ ಕಳುಹಿಸಬಹುದು.
ಭ್ರಾತೃತ್ವದ ಹಬ್ಬ 'ರಕ್ಷಾ ಬಂಧನ' ಹಿಂದೆಲ್ಲಾ ರಕ್ಷಾಬಂಧನದ ದಿನ ಕೇಸರಿ-ಕೆಂಪು-ಹಳದಿ ಬಣ್ಣಗಳಿಂದ ಕೂಡಿದ ರೇಷ್ಮೆ ನೂಲನ್ನು ರಾಖಿಯನ್ನಾಗಿ ನೇಯ್ದು ಕಟ್ಟುತ್ತಿದ್ದರು. ಆದರೆ, ಈಗ ಮಾರುಕಟ್ಟೆಯಲ್ಲಿ ಚೀನಾ ರಾಖಿಗಳದ್ದೇ ಕಾರುಬಾರು ಜೋರಾಗಿದೆ. ನೂಲ ಹುಣ್ಣಿಮೆಯ ದಿನ ನೂಲಿನೆಳೆಯಿಂದ ಸಹೋದರ-ಸಹೋದರಿಯರ ಸಂಬಂಧ ಗಟ್ಟಿಗೊಳಿಸುವ ಸುಂದರ ಹಬ್ಬವೇ ರಕ್ಷಾ ಬಂಧನ. ಎಲ್ಲರಿಗೂ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು.