ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ವಿಭೂತಿಹಳ್ಳಿಯ ಮೀಸಲು ಅರಣ್ಯ ಪ್ರದೇಶದಲ್ಲಿ ಉಡಗಳನ್ನು ಬೇಟೆಯಾಡಿದ ಮೂವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವೆಂಗಳಾಪುರದ ಅಂಬ್ರೇಶ (19) ಹಾಗೂ ಇಬ್ಬರು ಅಪ್ರಾಪ್ತರು ಬಂಧಿತ ಆರೋಪಿಗಳಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ, ಸುರಪುರ ಅರಣ್ಯ ವಲಯ ಅಧಿಕಾರಿ ಬುರನುದ್ದೀನ್ ನೇತೃತ್ವದ ತಂಡ ದಾಳಿ ನಡೆಸಿ, ಒಂದು ದ್ವಿಚಕ್ರ ವಾಹನ ಹಾಗೂ ಎರಡು ಉಡಗಳನ್ನು ವಶಪಡಿಸಿಕೊಂಡಿದೆ. ಓರ್ವನನ್ನು ಸುರಪುರ ಸಬ್ ಜೈಲು ಹಾಗೂ ಇಬ್ಬರು ಅಪ್ರಾಪ್ತರನ್ನು ಕಲಬುರಗಿ ಜೈಲಿಗೆ ಕಳುಹಿಸಿಕೊಡಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
''ಪ್ರಾಣಿಗಳು ಬೇಟೆಯಾಡುವುದನ್ನು ನಿಷೇಧಿಸಲಾಗಿದೆ. ಪ್ರಾಣಿ ಸಂಕುಲವನ್ನು ಉಳಿಸಬೇಕೆ ಹೊರತು, ನಾಶ ಮಾಡಬಾರದು. ಬೇಟೆ ಕಂಡುಬಂದರೆ ಮಾಹಿತಿ ನೀಡಬೇಕು. ಕಾಡು ಜೀವಿಗಳ ಹಂತಕರನ್ನು ಮುಲಾಜಿಲ್ಲದೇ ಸೆರೆಮನೆಗೆ ಕಳುಹಿಸಲಾಗುವುದು'' ಎಂದು ಆರ್‌ಎಫ್‌ಒ ಬುರನುದ್ದೀನ್ ಎಚ್ಚರಿಕೆ ನೀಡಿದ್ದಾರೆ. ಉಪವಲಯ ಅರಣ್ಯಾಧಿಕಾರಿ ಕಾಶಪ್ಪ, ಗಸ್ತು ಅರಣ್ಯಪಾಲಕ ದುರ್ಗಣ್ಣ ಸೇರಿದಂತೆ ಇತರರಿದ್ದರು.
ಓದಿ: ಬೆಂಗಳೂರಲ್ಲಿ ಡ್ರಗ್ಸ್ ಮಾರುತ್ತಿದ್ದ ವಿದೇಶಿ ಪ್ರಜೆ ಸಹಿತ ಇಬ್ಬರ ಬಂಧನ