ಬೆಂಗಳೂರು: ಕೆಲ ತಿಂಗಳ ಹಿಂದೆ ನಗರದ ಹೊರವಲಯ ಹೆಬ್ಬಗೋಡಿಯಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳ ವಿರುದ್ಧ ಕೇಳಿಬಂದಿರುವ ಆರೋಪ ಸಂಬಂಧ ಸೂಕ್ತ ತನಿಖೆ ನಡೆಸಿ ನ.21ರೊಳಗೆ ವರದಿ ನೀಡುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರಿಗೆ ಸೂಚನೆ ನೀಡಿದೆ.
ಆರ್‌ಟಿಐ ಕಾರ್ಯಕರ್ತ ವಿಜಯ್ ಡೆನ್ನಿಸ್ ಎಂಬವರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್‌ಗೆ ಮಾನವ ಹಕ್ಕುಗಳ ಆಯೋಗ ಸೂಚನೆ ನೀಡಿದೆ.
ಏನಿದು ಘಟನೆ?: ಮೇ 19ರಂದು ಹೊಸೂರು ಕೈಗಾರಿಕಾ ಪ್ರದೇಶದ ಗೋಪಾಲರೆಡ್ಡಿ ಫಾರ್ಮ್ ಹೌಸ್‌ನಲ್ಲಿ ಎಲ್.ವಾಸು ಎಂಬವರು ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಿದ್ದರು. ತಮಿಳುನಾಡಿನ ನಟಿ ಹೇಮಾ ಸೇರಿ ಹಲವರು ಭಾಗಿಯಾಗಿದ್ದರು. ಈ ಮಾಹಿತಿ ಮೇರೆಗೆ ಸಿಸಿಸಿ ಪೊಲೀಸರು ದಾಳಿ ನಡೆಸಿ, ಹೇಮಾ ಸೇರಿ ಐವರನ್ನು ಬಂಧಿಸಿದ್ದರು. ಈ ವೇಳೆ ಪ್ರಕರಣ ಮುಚ್ಚಿ ಹಾಕಲು ಆರೋಪಿಗಳ ಬಳಿ 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆರೋಪಿಗಳ ವಿರುದ್ಧ ಸುಳ್ಳು ವೈದ್ಯಕೀಯ ಸಾಕ್ಷ್ಯಗಳನ್ನು ಸೃಷ್ಟಿಸಿದ್ದಲ್ಲದೆ, ಪ್ರಕರಣದಲ್ಲಿದ್ದ ಅಧಿಕಾರಿಗಳ ವಿರುದ್ಧ ಮಹಿಳಾ ಆರೋಪಿಗಳನ್ನು ಮಂಚಕ್ಕೆ ಕರೆದ ಆರೋಪ ಕೂಡ ಮಾಡಲಾಗಿತ್ತು. ಸದ್ಯ ಈ ಎಲ್ಲವನ್ನೂ ಉಲ್ಲೇಖಿಸಿ ಸಿಸಿಬಿ ವಿರುದ್ಧ ವರದಿ ನೀಡುವಂತೆ ಮಾನವ ಹಕ್ಕುಗಳ ಆಯೋಗ ಆದೇಶ ನೀಡಿದೆ.
ರೇವ್ ಪಾರ್ಟಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಡ್ರಗ್ಸ್ ಬಳಕೆ ಮಾಹಿತಿ ಮೇರೆ ದಾಳಿ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಬಳಿಕ ಹೇಮಾ ಸೇರಿ 86 ಮಂದಿ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿತ್ತು. ಪಾರ್ಟಿ ಆಯೋಜಿಸಿದ್ದ ವಾಸು, ನಟಿ ಹೇಮಾ ಹಾಗೂ ಮೂವರು ಡ್ರಗ್ ಪೆಡ್ಲರ್‌ಗಳು ಸೇರಿದಂತೆ ಐವರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ರೇವ್ ಪಾರ್ಟಿ ಪ್ರಕರಣ: ನಟಿ ಹೇಮಾ ಡ್ರಗ್ಸ್ ಸೇವನೆ ದೃಢ, ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ - RAVE PARTY CASE