ಆನೇಕಲ್: ನೀಲಗಿರಿ ತೋಪಿನಲ್ಲಿ ಮಣ್ಣಿನಲ್ಲಿ ಮುಚ್ಚಿಟ್ಟ ಸ್ಥಿತಿಯಲ್ಲಿ ನವಜಾತ ಶಿಶು ಪತ್ತೆಯಾಗಿದೆ. ಎಳೆ ಹಸುಳೆ ಅಳುವ ದನಿ ಕೇಳಿ ರಸ್ತೆಯಲ್ಲಿ ಚಲಿಸುತ್ತಿದ್ದ ಲಾರಿ ಚಾಲಕರು ಮಗುವಿರುವ ಕಡೆ ಧಾವಿಸಿದ್ದಾರೆ. ಎಲೆಗಳಿಂದ ಮುಚ್ಚಿದ್ದ ಮಗುವನ್ನು ರಕ್ಷಿಸಿ ಜಿಲ್ಲಾ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿದಾಗ ವಿಷಯ ಬೆಳಕಿಗೆ ಬಂದಿದೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗು ಸಿಬ್ಬಂದಿ ದೊಮ್ಮಸಂದ್ರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಆರೈಕೆಗೆ ಕಳಿಸಿಕೊಟ್ಟಿದ್ದಾರೆ.
ನೀಲಗಿರಿ ತೋಪಿನಲ್ಲಿ ರಸ್ತೆ ಸಂಚಾರಿಗಳಿಗೆ ಮಗುವಿನ ಅಳು ಕೇಳಿಸಲೆಂದು ಅನಾಮಿಕ ತಾಯಿ ಇಲ್ಲಿ ಬಿಟ್ಟು ಹೋಗಿರಬಹುದು. ಹೆರಿಗೆಯ ಸಾಕ್ಷಿಗಳು ಸ್ಥಳದಲ್ಲಿ ಕಂಡುಬಂದಿವೆ. ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮಗುವಿನ ಆರೈಕೆಗೆ ಹೆಚ್ಚಿನ ಒತ್ತು ನೀಡಲಾಗುವು ಎಂದು ಜಿಲ್ಲಾ ಮಕ್ಕಳ ರಕ್ಷಣ ಇಲಾಖಾಧಿಕಾರಿ ಆಶಾ ತಿಳಿಸಿದ್ದಾರೆ. ಸರ್ಜಾಪುರದ ನೆರಿಗಾ ಪಂಚಾಯಿತಿಯ ಕತ್ರಿಗುಪ್ಪೆ ದಿನ್ನೆಯಲ್ಲಿ ಘಟನೆ ಬೆಳಕಿಗೆ ಬಂದಿದೆ.