ಶಿವಮೊಗ್ಗ: ತಾಲೂಕಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಕೇರಳದ ತಿರುವನಂತಪುರದಿಂದ ಐದು ಬಗೆಯ ಹೊಸ ಪ್ರಾಣಿ, ಪಕ್ಷಿಗಳು ಬಂದಿವೆ. ಮೃಗಾಲಯಗಳ ನಡುವೆ ಪ್ರಾಣಿಗಳ ವಿನಿಮಯ ಕಾರ್ಯಕ್ರಮದಡಿ ಹೊಸ ಪ್ರಾಣಿ - ಪಕ್ಷಿಗಳು ಮೃಗಾಲಯಕ್ಕೆ ಸೇರ್ಪಡೆಯಾಗಿವೆ.
ಹೊಸ ಅತಿಥಿಗಳ ವಿವರ : ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ಎರಡು ಘಡಿಯಾಲ್ ಮೊಸಳೆ (ಒಂದು ಗಂಡು, ಒಂದು ಹೆಣ್ಣು), ನಾಲ್ಕು ಲೆಸ್ಸರ್ ರಿಯ ಪಕ್ಷಿ (ಎರಡು ಗಂಡು, ಎರಡು ಹೆಣ್ಣು), ಒಂದು ಗಂಡು ಕತ್ತೆ ಕಿರುಬ, ಎರಡು ಮುಳ್ಳು ಹಂದಿ (ಒಂದು ಗಂಡು, ಒಂದು ಹೆಣ್ಣು), ಸನ್ ಕಾನ್ಯೂರ್ ಪಕ್ಷಿ (3 ಗಂಡು, ಮೂರುಹೆಣ್ಣು) ವಿನಿಮಯವಾಗಿವೆ.
ತ್ಯಾವರೆಕೊಪ್ಪದಿಂದ ಹೊರ ಹೋದ ಪ್ರಾಣಿಗಳು: ತ್ಯಾವರೆಕೊಪ್ಪ ಹುಲಿ - ಸಿಂಹಧಾಮದಿಂದ ತಿರುವನಂತಪುರಕ್ಕೆ ಎರಡು ಮೊಸಳೆ (ಒಂದು ಗಂಡು, ಒಂದು ಹೆಣ್ಣು), ಮೂರು ಹೆಣ್ಣು ಕತ್ತೆ ಕಿರುಬ, ಎರಡು ನರಿ (ಒಂದು ಗಂಡು, ಒಂದು ಹೆಣ್ಣು), ತಾಳೆಬೆಕ್ಕು (ಒಂದು ಗಂಡು, ಒಂದು ಹೆಣ್ಣು) ರವಾನೆ ಮಾಡಲಾಗಿದೆ.
![Sun Conure Birds](https://etvbharatimages.akamaized.net/etvbharat/prod-images/19-11-2024/kn-smg-01-safari-newanimal-spl-script-7204213_19112024122516_1911f_1731999316_341.jpg)
ಘಡಿಯಾಲ್ ಮೊಸಳೆ ಅಳಿವಿನಂಚಿನಲ್ಲಿರುವ ಪ್ರಭೇದವಾಗಿದೆ. ಇವುಗಳ ಸಂರಕ್ಷಣೆ ಕುರಿತು ಶಿಕ್ಷಣ ನೀಡಲು ತ್ಯಾವರೆಕೊಪ್ಪಕ್ಕೆ ತರಲಾಗಿದೆ. ಲೆಸ್ಸರ್ ರಿಯ ಪಕ್ಷಿ ಹಾಗೂ ಸನ್ ಕಾನ್ನೂರ್ ಪ್ರಭೇದಗಳು ದಕ್ಷಿಣ ಅಮೆರಿಕಕ್ಕೆ ಸಂಬಂಧಿಸಿದವು. ಇವೆರಡು ಇದೇ ಮೊದಲು ತ್ಯಾವರೆಕೊಪ್ಪದ ಮೃಗಾಲಯಕ್ಕೆ ಬಂದಿವೆ.
![tyavarekoppa sanctuary](https://etvbharatimages.akamaized.net/etvbharat/prod-images/19-11-2024/kn-smg-01-safari-newanimal-spl-script-7204213_19112024122516_1911f_1731999316_817.jpg)
ಪ್ರಾಣಿ ಸಂರಕ್ಷಣೆ ಬಗ್ಗೆ ತಿಳಿಹೇಳಲು ಅನುಕೂಲ: ಈ ಕುರಿತು ಹುಲಿ - ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕರಾದ ಅಮರಕ್ಷರ ಅವರು ಮಾತನಾಡಿದ್ದು, ''ಕೇರಳದ ತಿರುವನಂತಪುರಂನ ಮೃಗಾಲಯದಿಂದ ಪ್ರಾಣಿಗಳು ಬಂದಿವೆ. ಪ್ರಾಣಿಗಳ ವಿನಿಮಯ ಕಾರ್ಯಕ್ರಮದಡಿ ನಮ್ಮಲಿರುವ ಹೆಚ್ಚುವರಿ ಪ್ರಾಣಿಗಳನ್ನ ಅವರಿಗೆ ಕೊಟ್ಟು, ಅವರಲ್ಲಿರುವ ಹೆಚ್ಚುವರಿ ಪ್ರಾಣಿಗಳನ್ನ ಶಿವಮೊಗ್ಗದ ಮೃಗಾಲಯಕ್ಕೆ ತೆಗೆದುಕೊಂಡು ಬಂದಿದ್ದೇವೆ. ಅದರಲ್ಲಿ ನಮಗೆ ಘಡಿಯಾಲ್ ಸಿಕ್ಕಿದೆ (1 ಗಂಡು- 1 ಹೆಣ್ಣು), ಇದು ಅಳಿವಿನಂಚಿನಲ್ಲಿರುವ ಪ್ರಾಣಿ. ಇದರ ಮೂಲಕ ನಾವು ಜನರಿಗೆ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಬಗ್ಗೆ ಮಾಹಿತಿ ನೀಡಲು ಹಾಗೂ ಸಂರಕ್ಷಣೆ ಕುರಿತು ತಿಳಿಹೇಳಲು ಅನುಕೂಲವಾಗುತ್ತೆ. ಅಲ್ಲಿಂದ ಮುಳ್ಳುಹಂದಿ ಸಿಕ್ಕಿವೆ. ಲೆಸ್ಸರ್ ರಿಯ ಪಕ್ಷಿ ಹಾಗೂ ಸನ್ ಕಾನ್ನೂರ್ (ಪಕ್ಷಿ) ಸಿಕ್ಕಿವೆ. ಇದರಿಂದಾಗಿ ಶಿವಮೊಗ್ಗದಲ್ಲಿ ಪ್ರಾಣಿ ಪ್ರಭೇದಗಳ ಸಂಖ್ಯೆ 37 ರಿಂದ 41ಕ್ಕೆ ಏರಿಕೆಯಾಗಿವೆ'' ಎಂದಿದ್ದಾರೆ.
![Crocodile](https://etvbharatimages.akamaized.net/etvbharat/prod-images/19-11-2024/kn-smg-01-safari-newanimal-spl-script-7204213_19112024122516_1911f_1731999316_779.jpg)
ಹೊಸದಾಗಿ ತುಂಬಾ ಪ್ರಾಣಿಗಳು ಬಂದಿವೆ: ಈ ಬಗ್ಗೆ ಪ್ರವಾಸಿಗ ಸಚಿನ್ ಅವರು ಮಾತನಾಡಿ, ''ಸಫಾರಿಗೆ ನಾವು ತಿಂಗಳಿಗೆ ಒಮ್ಮೆಯಾದರೂ ಬರ್ತಾನೆ ಇರುತ್ತೇವೆ. ಈ ಬಾರಿ ಹೊಸದಾಗಿ ತುಂಬಾ ಪ್ರಾಣಿಗಳು ಬಂದಿವೆ. ಅವುಗಳನ್ನ ನೋಡಲು ಖುಷಿಯಾಗುತ್ತಿದೆ. ಶಿವಮೊಗ್ಗದಲ್ಲಿ ಇಂತಹ ಮೃಗಾಲಯ ಬೆಳೆಯುತ್ತಿರುವುದು ನಮಗೆ ಹೆಮ್ಮೆಯ ವಿಚಾರವಾಗಿದೆ'' ಎಂದು ಹೇಳಿದ್ದಾರೆ.
![tyavarekoppa sanctuary](https://etvbharatimages.akamaized.net/etvbharat/prod-images/19-11-2024/kn-smg-01-safari-newanimal-spl-script-7204213_19112024122516_1911f_1731999316_391.jpg)
ಇಲ್ಲಿ ನಿರ್ವಹಣೆ ತುಂಬಾ ಚೆನ್ನಾಗಿದೆ : ''ನಾವು ಅವಾಗವಾಗ ಲಯನ್ ಸಫಾರಿಗೆಂದು ಬರುತ್ತಾ ಇರುತ್ತೇವೆ. ನಮ್ಮ ಮಗುಗೆ ಸಫಾರಿ ತುಂಬಾ ಇಷ್ಟ. ಮೃಗಾಲಯಕ್ಕೆ ಮೊಸಳೆ, ಮುಳ್ಳುಹಂದಿಗಳು ಬಂದಿವೆ. ಇಲ್ಲಿ ನಿರ್ವಹಣೆ ತುಂಬಾ ಚೆನ್ನಾಗಿದೆ. ಫ್ಯಾಮಿಲಿಯವರು ಇಲ್ಲಿಗೆ ಬರುವುದಕ್ಕೆ ಚೆನ್ನಾಗಿರುವ ಜಾಗ, ಎಲ್ಲರೂ ಇಲ್ಲಿಗೆ ಬನ್ನಿ'' ಎಂದು ಇನ್ನೊಬ್ಬ ಪ್ರವಾಸಿಗರಾದ ನಿಖಿತಾ ಹೇಳಿದ್ದಾರೆ.
![Lesser Rhea](https://etvbharatimages.akamaized.net/etvbharat/prod-images/19-11-2024/kn-smg-01-safari-newanimal-spl-script-7204213_19112024122516_1911f_1731999316_670.jpg)
ಇದನ್ನೂ ಓದಿ : ಶಿವಮೊಗ್ಗದ 'ರಾಣಿ' ದೇಶದ ಅತ್ಯಂತ ಹಿರಿಯ ಕರಡಿ - OLDEST BEAR IN SHIVAMOGGA