ಚಾಮರಾಜನಗರ: ವರದಕ್ಷಿಣೆಗಾಗಿ ಪತ್ನಿಯನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ (ಪಿಡಿಒ) ಕೊಳ್ಳೇಗಾಲ ಅಪರ ಮತ್ತು ಸೆಷನ್ಸ್ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ವಿಧಿಸಿತು.
ಆನಂದ ಶ್ಯಾಂ ಕಾಂಬಳೆ ಶಿಕ್ಷೆಗೊಳಗಾದ ಅಪರಾಧಿ. ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಈತ, ಚಾಮರಾಜನಗರ ಜಿಲ್ಲೆಯಲ್ಲಿ ಪಿಡಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಜಮಖಂಡಿ ತಾಲೂಕಿನ ವಿದ್ಯಾಶ್ರೀ ಎಂಬವರನ್ನು ಮದುವೆಯಾಗಿದ್ದು, ವರದಕ್ಷಿಣೆ ಕೊಡುವಂತೆ ನಿತ್ಯ ಪೀಡಿಸುತ್ತಿದ್ದನು. ದಂಪತಿ ಕೊಳ್ಳೇಗಾಲದ ಬಸ್ತಿಪುರದಲ್ಲಿ ವಾಸವಿದ್ದರು.
2022ರ ಮಾರ್ಚ್ 14ರಂದು ವರದಕ್ಷಿಣೆಗಾಗಿ ಪೀಡಿಸಿ, ಪತ್ನಿಯನ್ನು ಕುತ್ತಿಗೆ ಹಿಸುಕಿ ಕೊಂದಿದ್ದಾನೆ. ನಂತರ ಆಕೆ ನೇಣು ಹಾಕಿಕೊಂಡಳು ಎಂದು ಕಥೆ ಕಟ್ಟಿದ್ದ. ಆದರೆ, ಮೃತಳ ಪಾಲಕರು ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದರು.
ಇದೀಗ ಪ್ರಕರಣದ ತನಿಖೆ, ವಿಚಾರಣೆ ನಡೆದು ಆನಂದ ಶ್ಯಾಂ ಕೃತ್ಯ ಸಾಬೀತಾಗಿದೆ. ಕೊಳ್ಳೇಗಾಲದ ಅಪರ ಜಿಲ್ಲಾ ಹಾಗೂ ಸೆಷನ್ಸ್ ನ್ಯಾ.ಟಿ.ಸಿ.ಶ್ರೀಕಾಂತ್, ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.