ಹತ್ತು ವರ್ಷಗಳ ಆರ್ಥಿಕ ಸಾಧನೆಯ ಶ್ವೇತಪತ್ರ: ಸಚಿವೆ ನಿರ್ಮಲಾ ಸೀತಾರಾಮನ್

🎬 Watch Now: Feature Video

thumbnail

By ETV Bharat Karnataka Team

Published : Feb 1, 2024, 6:48 PM IST

Updated : Feb 1, 2024, 7:13 PM IST

ನವದೆಹಲಿ: 2014ಕ್ಕಿಂತ ಮೊದಲಿನ ಹತ್ತು ವರ್ಷಗಳು ಹಾಗೂ ನಂತರದ ಹತ್ತು ವರ್ಷಗಳ ಆರ್ಥಿಕ ಸಾಧನೆಯ ಕುರಿತು ಶ್ವೇತಪತ್ರ ಹೊರಡಿಸಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಇಂದು ಮಧ್ಯಂತರ ಬಜೆಟ್ ಮಂಡನೆ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

2014ರ ಹಿಂದಿನ 10 ವರ್ಷಗಳಿಗೆ ಹೋಲಿಸಿದರೆ, ಕಳೆದ 10 ವರ್ಷಗಳ ಆರ್ಥಿಕ ಸಾಧನೆಯ ಕುರಿತು ಶ್ವೇತಪತ್ರ ತರಲಾಗುತ್ತದೆ. ಸರ್ಕಾರವು ತನ್ನ ಆಡಳಿತ (Governance), ಅಭಿವೃದ್ಧಿ (Development) ಮತ್ತು ಕಾರ್ಯಕ್ಷಮತೆ (Performance) ಎಂಬ ಜಿಡಿಪಿಯ ಮಾದರಿ ದಾಖಲೆಯ ಆಧಾರದ ಮೇಲೆ ಜನರ ನಂಬಿಕೆ, ವಿಶ್ವಾಸ ಮತ್ತು ಆಶೀರ್ವಾದವನ್ನು ಗಳಿಸಿದೆ ಎಂದು ಹೇಳಿದ್ದಾರೆ.

2024-25ರ ಬಜೆಟ್‌ಗೆ ನಾವು ಶೇ.5.1ರಷ್ಟು ವಿತ್ತೀಯ ಕೊರತೆಯ ಗುರಿ ಹೊಂದಿದ್ದೇವೆ. ಇದು 2026ರ ವೇಳೆಗೆ ಶೇ.4.5 ಅಥವಾ ಅದಕ್ಕಿಂತ ಕಡಿಮೆ ವಿತ್ತೀಯ ಕೊರತೆಯ ಪೂರೈಸುವ ಹಾದಿಯಲ್ಲಿದ್ದೇವೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ಇದು ಕೇವಲ ಚುನಾವಣೆಗೂ ಮುನ್ನ ಮಂಡಿಸಿದ ಮಧ್ಯಂತರ ಬಜೆಟ್. ಈ ಬಜೆಟ್ ನಾವು ಅಭಿವೃದ್ಧಿಯ ಬಗ್ಗೆ ಕೊಟ್ಟಿರುವ ಮಹತ್ವವನ್ನು ಸೂಚಿಸುತ್ತದೆ. ನಾವು ಆರ್ಥಿಕತೆಯನ್ನು ಸರಿಯಾದ ಉದ್ದೇಶಗಳು, ಸರಿಯಾದ ನೀತಿಗಳು ಮತ್ತು ಸರಿಯಾದ ನಿರ್ಧಾರಗಳೊಂದಿಗೆ ನಿರ್ವಹಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಇತ್ತೀಚೆಗೆ ಘೋಷಿಸಲಾದ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಕುರಿತು ಪ್ರತಿಕ್ರಿಯಿಸಿದ ಸಚಿವೆ ನಿರ್ಮಲಾ, ಇದನ್ನು ನಾವು ಮುಂದುವರಿಸುತ್ತೇವೆ. ಕೆಂಪು ಸಮುದ್ರ ಪ್ರದೇಶ ಮತ್ತು ಮಧ್ಯಪ್ರಾಚ್ಯದಲ್ಲಿ ಗಮನಾರ್ಹ ಅಡಚಣೆ ಇದೆ. ಆದರೆ, ಇದು ಯುರೋಪಿನವರೆಗಿನ ಪ್ರದೇಶಕ್ಕೆ ದೀರ್ಘಾವಧಿಯ ಪರಿಣಾಮಗಳನ್ನು ಹೊಂದಿರುವ ಯೋಜನೆಯಾಗಿದೆ. ಆದ್ದರಿಂದ, ನಾವು ಈ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ. ಈ ಬಗ್ಗೆ ಮತ್ತಷ್ಟು ಸಮಾಲೋಚನೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 58 ನಿಮಿಷಗಳ ಬಜೆಟ್ ಭಾಷಣ: ಆ ನಾಲ್ಕು ವರ್ಗಗಳ ಮೇಲೆಯೇ ವಿತ್ತ ಸಚಿವರ ಗಮನ

Last Updated : Feb 1, 2024, 7:13 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.