ಮೈಸೂರು: ಬೈಕ್ನಲ್ಲಿ ಬಂದು ತರಕಾರಿ ಬಂಡಿ ಕದ್ದೊಯ್ದ ಖದೀಮ; ಬಡ ವ್ಯಾಪಾರಿಯ ಕಣ್ಣೀರು - Vegetable cart theft - VEGETABLE CART THEFT
🎬 Watch Now: Feature Video
Published : Jul 18, 2024, 12:37 PM IST
ಮೈಸೂರು: ಖದೀಮನೋರ್ವ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ತರಕಾರಿ ಕೈ ಗಾಡಿಯನ್ನು ಕದ್ದು ಪರಾರಿಯಾಗಿರುವ ಘಟನೆ ನಗರದ ಜವರೇಗೌಡ ಪಾರ್ಕ್ ಬಳಿ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸರಸ್ವತಿಪುರಂನ ಜವರೇಗೌಡ ಪಾರ್ಕ್ ಬಳಿ ಕೈ ಗಾಡಿಯಲ್ಲಿ ತರಕಾರಿ ಮಾರುತ್ತಿದ್ದ ತಿಮ್ಮೇಗೌಡ ಎಂಬ ವೃದ್ಧ ಸೋಮವಾರ ಮಧ್ಯಾಹ್ನ ಕೈಗಾಡಿಗೆ ಟಾರ್ಪಲ್ ನಿಂದ ಮುಚ್ಚಿ ಊಟ ಮಾಡಲೆಂದು ಮನೆಗೆ ತೆರಳಿದ್ದರು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಚಾಲಾಕಿಯೋರ್ವ ಬೈಕ್ನಲ್ಲಿ ಬಂದು ತನ್ನ ಬೈಕ್ ಹಿಂಬದಿ ಕೈ ಗಾಡಿಯನ್ನ ಕಟ್ಟಿಕೊಂಡು ತರಕಾರಿ ಸಮೇತ ಪರಾರಿಯಾಗಿದ್ದಾನೆ. ಈ ಸಂಬಂಧ ಸರಸ್ವತಿಪುರಂ ಠಾಣೆಯಲ್ಲಿ ತಿಮ್ಮೇಗೌಡರ ಮಗ ದೂರು ದಾಖಲಿಸಿದ್ದಾರೆ.
ಘಟನೆ ಬಗ್ಗೆ ವೃದ್ಧ ತಿಮ್ಮೇಗೌಡ ಮಾತನಾಡಿ, ಕೈ ಗಾಡಿಯಲ್ಲಿ ತರಕಾರಿ ಇದ್ದ ಕಾರಣ ಊಟಕ್ಕೆ ಎಂದು ಮನೆಗೆ ಹೋದಾಗ, ಯಾರೋ ಬೈಕ್ನಲ್ಲಿ ಬಂದು ತರಕಾರಿ ಗಾಡಿಯನ್ನ ಕದ್ದುಕೊಂಡು ಹೋಗಿದ್ದಾನೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ತಿಮ್ಮೇಗೌಡರ ಮಗ ಮಾತನಾಡಿ, ನಾನು ಪಾನಿಪುರಿ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತೇನೆ. ನನ್ನ ತಂದೆ ಅವರಿಗೆ 10 ಸಾವಿರ ಸಾಲ ಮಾಡಿ ಕೈ ಗಾಡಿ ಕೊಡಿಸಿದ್ದೆ. ಸಾಲ ಮಾಡಿ ತರಕಾರಿಗಳಿಗೆ ಬಂಡವಾಳ ಹಾಕಿದ್ದೆ. ಊಟಕ್ಕೆಂದು ಬಂದ ಸಂದರ್ಭದಲ್ಲಿ ಈ ರೀತಿಯಾಗಿದೆ. ದಯವಿಟ್ಟು ಪೊಲೀಸರು ಬಂಡಿಯನ್ನು ಹುಡುಕಿ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಕಳ್ಳತನ ಪ್ರಕರಣದ ಲಾಭ ಪಡೆದು ಸುಳ್ಳು ದೂರು: ಎಟಿಎಂ ನಿರ್ವಹಣಾ ಸಿಬ್ಬಂದಿಯ ವಿರುದ್ಧ ಎಫ್ಐಆರ್, ಐವರ ಬಂಧನ - Fake Complaint