ವಾಲ್ಮೀಕಿ ನಿಗಮ ಹಗರಣ: ಕಾಂಗ್ರೆಸ್ ಶಾಸಕ ದದ್ದಲ್ ಮನೆಯಲ್ಲಿ ಮುಂದುವರೆದ ಇಡಿ ಶೋಧ - Valmiki Scam
🎬 Watch Now: Feature Video
Published : Jul 11, 2024, 10:16 AM IST
ರಾಯಚೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಆರೋಪ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಎರಡನೇ ದಿನವೂ ಪರಿಶೀಲನೆ ಮುಂದುವರೆಸಿದ್ದಾರೆ. ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹಾಗೂ ಮಾಜಿ ಅಪ್ತ ಸಹಾಯಕ ಪಂಪಣ್ಣ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳ ತಂಡ ಶೋಧ ಕಾರ್ಯ ನಡೆಸುತ್ತಿದೆ.
ದದ್ದಲ್ ಮಾಜಿ ಪಿಎ ಪಂಪಣ್ಣ, ರಾಯಚೂರಿನ ಬಿಚ್ಚಾಲಿ ಗ್ರಾ.ಪಂ ಪಿಡಿಒ ಆಗಿ ನಿಯೋಜನೆಗೊಂಡಿದ್ದರು. ಪಿಡಿಒ ಚಾರ್ಜ್ ತೆಗೆದುಕೊಳ್ಳದೆ ಮುಂದುವರಿದಿದ್ದ ಪಂಪಣ್ಣ, ರಾಯಚೂರು ತಾ.ಪಂ.ನಲ್ಲಿ ಕೇಸ್ ವರ್ಕರ್ ಆಗಿ ಮುಂದುವರಿದಿದ್ದರು. ನೂತನ ಎಂಎಲ್‌ಸಿವೋರ್ವರ ಪಿಎ ಆಗಲು ಓಡಾಡುತ್ತಿದ್ದ ಹಿನ್ನೆಲೆಯಲ್ಲಿ ಪಿಡಿಒ ಕೆಲಸಕ್ಕೆ ಹಾಜರಾಗಿರಲಿಲ್ಲ. ಸದ್ಯ ಮಾವಿನಕರೆ ಬಳಿಯ ನಗರದ ಆಜಾದ್ ನಗರದಲ್ಲಿ ಪ್ಲ್ಯಾಟ್ ಖರೀದಿಸಿ ವಾಸಿಸುತ್ತಿದ್ದಾರೆ. ತಾಲೂಕು ಪಂಚಾಯತ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಪಂಪಣ್ಣ, ಬಸನಗೌಡ ದದ್ದಲ್ನ ಖಾಸಗಿ ವ್ಯವಹಾರ ನೋಡಿಕೊಳ್ಳುತ್ತಿದ್ದರು ಎನ್ನಲಾಗುತ್ತಿದೆ.
ವಾಲ್ಮೀಕಿ ಹಗರಣದಲ್ಲಿ ಪಂಪಣ್ಣ 50 ಲಕ್ಷ ರೂಪಾಯಿ ಪಡೆದಿರುವ ಆರೋಪದ ಹಿನ್ನೆಲೆಯಲ್ಲಿ ಜುಲೈ 5ರಂದು ಎಸ್‌ಐಟಿ ವಿಚಾರಣೆಗೆ ಒಳಗಾಗಿದ್ದರು. ಪಂಪಣ್ಣರಿಂದ ಎಸ್‌ಐಟಿ ಮಹತ್ವದ ದಾಖಲೆಗಳು ಮತ್ತು ಮಾಹಿತಿ ಪಡೆದಿರುವ ಬೆನ್ನಲ್ಲೇ ಇಡಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಪಂಪಣ್ಣ ಮನೆಯಲ್ಲಿ ಸಿಕ್ಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಹಿರಿಯ ಅಧಿಕಾರಿಗಳಿಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು, ದದ್ದಲ್ ಮನೆ ಶೋಧಿಸುತ್ತಿರುವ ಅಧಿಕಾರಿಗಳು ಕಾರಿನಲ್ಲಿ ಮನೆಯ ಓರ್ವ ಸದಸ್ಯನನ್ನು ಬೇರೆಡೆ ಕರೆದೊಯ್ದಿದ್ದಾರೆ. ದದ್ದಲ್ ಮನೆಯಲ್ಲಿ ಸಂಬಂಧಿಕರು, ಕೆಲಸದವರು ಸೇರಿ ಒಟ್ಟು 7 ಜನರಿದ್ದಾರೆ. ಸಂಬಂಧಿಕರಿಂದ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.