ತಮಿಳುನಾಡಿನ ಅಗ್ನಿ ತೀರ್ಥ ಕಡಲತೀರದಲ್ಲಿ ಪ್ರಧಾನಿ ಮೋದಿ ಪವಿತ್ರ ಸ್ನಾನ: ವಿಶೇಷ ಪ್ರಾರ್ಥನೆ - ರಾಮೇಶ್ವರಂ ದೇಗುಲ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/20-01-2024/640-480-20555283-thumbnail-16x9-megh.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Jan 20, 2024, 8:08 PM IST
ರಾಮೇಶ್ವರಂ (ತಮಿಳುನಾಡು): ತಮಿಳುನಾಡು ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಮೇಶ್ವರಂ ಹಾಗೂ ತಿರುಚಿರಾಪಳ್ಳಿಯಲ್ಲಿ ರೋಡ್ ಶೋ ನಡೆಸಿದ್ದು, ರಸ್ತೆಗಳ ಎರಡೂ ಬದಿಗಳಲ್ಲಿ ನಿಂತಿದ್ದ ಜನ ಹೂಗಳ ಸುರಿಮಳೆ ಮಾಡಿ ಸ್ವಾಗತಿಸಿದರು. ಪ್ರಧಾನಿ ಮೋದಿ ಎರಡು ದಿನಗಳ ತಮಿಳುನಾಡು ಪ್ರವಾಸದಲ್ಲಿದ್ದು, ಇಂದು ರಾಮೇಶ್ವರಂನ ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಸ್ಥಾನ ಹಾಗೂ ತಿರುಚಿರಾಪಳ್ಳಿಯಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ರೋಡ್ ಶೋ ವೇಳೆ ಪ್ರಧಾನಿ ಅವರನ್ನು ಸ್ವಾಗತಿಸಲು ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನರು ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿದ್ದರು. ಸ್ಥಳೀಯ ನಿವಾಸಿಗಳು ಮೋದಿ ಅವರು ಸಾಗಿದ ದಾರಿ ಉದ್ದಕ್ಕೂ ಅವರ ಮೇಲೆ ಪುಷ್ಪಮಳೆ ಸುರಿಸಿದರು. ಇನ್ನೂ ಕೆಲವರು ಮೋದಿಯತ್ತ ಬಿಜೆಪಿ ಬಾವುಟವನ್ನು ಬೀಸಿದರು. ಅವರ ಅಭಿಮಾನಕ್ಕೆ ಮೋದಿ ಕೂಡ ಜನರತ್ತ, ಕೈಬೀಸಿ ಹಾಗೂ ನಮಸ್ಕರಿಸುವ ಮೂಲಕ ಸಂತೋಷ ವ್ಯಕ್ತಪಡಿಸಿದರು.
ರಾಮೇಶ್ವರಂನಲ್ಲಿ ರೋಡ್ ಶೋ ಬಳಿಕ 'ಅಗ್ನಿ ತೀರ್ಥ' ಕಡಲತೀರದಲ್ಲಿ ಸ್ನಾನ ಮಾಡಿದರು. ರುದ್ರಾಕ್ಷಿ ಮಾಲೆ ಧರಿಸಿದ್ದ ಮೋದಿ ತಮಿಳುನಾಡಿನ ಪುರಾತನ ಶಿವ ದೇವಾಲಯದ ರಾಮನಾಥಸ್ವಾಮಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪುರೋಹಿತರು ಪ್ರಧಾನಿ ಮೋದಿ ಅವರಿಗೆ ಸಾಂಪ್ರದಾಯಿಕ ಗೌರವನ್ನು ಸಲ್ಲಿಸಿದ್ದು, ಮೋದಿ ದೇಗುಲದಲ್ಲಿ ನಡೆಯುವ ಭಜನೆಯಲ್ಲಿಯೂ ಭಾವಹಿಸಿದರು.
ಇದಕ್ಕೂ ಮುನ್ನ ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಇಲ್ಲೀಯೂ ರೋಡ್ ಶೋ ನಡೆಸಿದ ಪ್ರಧಾನಿ, ದೇವಾಲಯದಲ್ಲಿ ವಿವಿಧ ವಿದ್ವಾಂಸರು ಕಂಬ ರಾಮಾಯಣದ ಪದ್ಯಗಳನ್ನು ಪಠಿಸುವುದನ್ನು ಕೆಲಹೊತ್ತು ಪ್ರಧಾನಿ ಆಲಿಸಿದರು. ಜೊತೆಗೆ ದೇವಾಲಯದ ಆವರಣದಲ್ಲಿರುವ 'ಆಂಡಾಳ್' ಎಂಬ ಆನೆಯಿಂದ ಆಶೀರ್ವಾದವನ್ನೂ ಪಡೆದರು. ಇಲ್ಲಿ ಪೂಜೆ ಸಲ್ಲಿಸಿದ ಬಳಿಕ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ರಾಮೇಶ್ವರಂಗೆ ಆಗಮಿಸಿದ ಪ್ರಧಾನಿ ಮೋದಿಗೆ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯ ಜನರು ಅದ್ಧೂರಿ ಸ್ವಾಗತ ಕೋರಿದರು.
ಇದನ್ನೂ ನೋಡಿ: ಬೆಂಗಳೂರಲ್ಲಿ ಹೊಸ ಅತ್ಯಾಧುನಿಕ ಬೋಯಿಂಗ್ ಕ್ಯಾಂಪಸ್ ಉದ್ಘಾಟನೆ: ಫೋಟೋಗಳು