ಬಣ್ಣದಲ್ಲಿ ಮಿಂದೆದ್ದು ಸಂಭ್ರಮದಲ್ಲಿ ತೇಲಿದ ಶಿವಮೊಗ್ಗ ಜನತೆ - holi festival in shivamogga - HOLI FESTIVAL IN SHIVAMOGGA
🎬 Watch Now: Feature Video
Published : Mar 26, 2024, 8:09 PM IST
ಶಿವಮೊಗ್ಗ : ನಗರದಲ್ಲಿ ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಹೋಳಿ ಹುಣ್ಣಿಮೆ ಮರುದಿನ ನಗರದಲ್ಲಿ ಹೋಳಿ ಹಬ್ಬವನ್ನು ಆಚರಿಸುವುದು ವಿಶೇಷ. ಹೋಳಿ ಹುಣ್ಣಿಮೆಯ ದಿನ ನಗರದ ದುರ್ಗಿಗುಡಿಯ ದುರ್ಗಮ್ಮ- ಮರಿಯಮ್ಮ ದೇವಿಯರ ರಥೋತ್ಸವ ಜಾತ್ರೆಯು ನಡೆಯುತ್ತದೆ. ಇದರಿಂದ ಜಾತ್ರೆಯ ಮರುದಿನ ಹೋಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.
ಇಂದು ಬೆಳಗ್ಗೆಯೇ ಸಣ್ಣ ಮಕ್ಕಳು ಬಣ್ಣವನ್ನು ಹಂಚಿಕೊಂಡು ಎಲ್ಲರಿಗೂ ಬಣ್ಣವನ್ನು ಹಚ್ಚುತ್ತಾ, ಖುಷಿ ಪಡುತ್ತಿದ್ದರು. ಅಲ್ಲದೇ ಬಣ್ಣದ ನೀರನ್ನು ಎರಚುತ್ತಾ ಸಂಭ್ರಮಿಸುತ್ತಿದ್ದರು. ಇನ್ನು ಯುವಕರು - ಯುವತಿಯರು ಸಹ ಒಬ್ಬರಿಗೊಬ್ಬರು ಬಣ್ಣವನ್ನು ಹಚ್ಚುತ್ತಾ ಹೋಳಿಯನ್ನು ಖುಷಿ ಖುಷಿಯಾಗಿ ಆಚರಿಸುತ್ತಿದ್ದರು. ನಗರದ ತುಂಬೆಲ್ಲಾ ಯುವಕರು - ಯುವತಿಯರು ಬೈಕ್ನಲ್ಲಿ ಸುತ್ತುತ್ತಾ ಸ್ನೇಹಿತರ ಮನೆಗಳಿಗೆ ತೆರಳಿ ಬಣ್ಣ ಹಚ್ಚುತ್ತಿದ್ದರು.
ಟಿ. ಎಸ್ ಶೀನಪ್ಪ ಶೆಟ್ಟಿ ವೃತ್ತದಲ್ಲಿ ಡಿಜೆ, ಶವರ್ ಡ್ಯಾನ್ಸ್: ನಗರದ ಹೃದಯ ಭಾಗದಲ್ಲಿ ಇರುವ ಟಿ. ಎಸ್ ಶೀನಪ್ಪ ಶೆಟ್ಟಿ ವೃತ್ತದಲ್ಲಿ ಹಿಂದೂ ಕೇಸರಿ ಅಲಂಕಾರ ಸಮಿತಿಯವರು ಆಯೋಜಿಸಿದ್ದ ಡಿಜೆಯಲ್ಲಿ ಯುವಕರು - ಯುವತಿಯರು ಸೇರಿದಂತೆ ಎಲ್ಲ ವಯೋಮಾನದವರು ಕುಣಿದು ಕುಪ್ಪಳಿಸುತ್ತಿದ್ದರು. ಅಲ್ಲದೇ ಶವರ್ ಡ್ಯಾನ್ಸ್ ಸಹ ಆಯೋಜಿಸಲಾಗಿತ್ತು. ಡಿಜೆಯ ಹಾಡುಗಳಿಗೆ ಯುವ ಜನತೆ ಕುಣಿದು ಕುಪ್ಪಳಿಸಿದರು.
ಈ ವೇಳೆ ಡಿಜೆಯ ಹಾಡು ನಿಲ್ಲಿಸುತ್ತಿದ್ದಂತೆಯೇ ಯುವ ಜನತೆ ಹಾಡುತ್ತಿದ್ದದ್ದು ವಿಶೇಷವಾಗಿತ್ತು. ನಗರದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಪೊಲೀಸ್ ಇಲಾಖೆಯು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಈ ವೇಳೆ ಸ್ಥಳೀಯರಾದ ನಾಗರತ್ನ ಅವರು ಮಾತನಾಡಿ, ಇಂದು ನಾವೆಲ್ಲಾ ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಎಲ್ಲರೂ ಸಹ ಬಣ್ಣ ಹಚ್ಚಿಕೊಂಡು ಸಂತೋಷ ಪಡುತ್ತಿದ್ದೇವೆ. ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು ಎಂದು ತಿಳಿಸಿದರು.