thumbnail

LIVE: ವಿಶ್ವವಿಖ್ಯಾತ ಮೈಸೂರು ದಸರಾ, ವಿಜಯದಶಮಿ ಮೆರವಣಿಗೆ

By ETV Bharat Karnataka Team

Published : 2 hours ago

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ನಾಡಹಬ್ಬ ದಸರಾ ಸಂಭ್ರಮ ಮನೆಮಾಡಿದೆ. ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದ ಕೋಟೆ ಆಂಜನೇಯ ದೇವಾಲಯದ ಬಳಿ ನಂದಿಧ್ವಜಕ್ಕೆ ಮುಖ್ಯಮಂತ್ರಿ ಹಾಗೂ ಗಣ್ಯರು ಪೂಜೆ ಸಲ್ಲಿಸಿದ ಬಳಿಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದ್ದಾರೆ. ನಾಡಿನ ಕಲೆ, ಸಂಸ್ಕೃತಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಬಿಂಬಿಸುವ ಸುಮಾರು 51 ಸ್ತಬ್ಧಚಿತ್ರಗಳು ಹಾಗೂ ಕಲಾ ತಂಡಗಳ ಮೆರವಣಿಗೆ ನಡೆಯುತ್ತಿದೆ. ಇದಕ್ಕೂ ಮುನ್ನ ಬೆಳಗ್ಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವಿನೊಂದಿಗೆ ದೇವರನ್ನು ಅರಮನೆಗೆ ಕರೆತರಲಾಯಿತು. ಬೆಳಗ್ಗೆ 10.15ರ ಸುಮಾರಿಗೆ ಉತ್ತರ ಪೂಜೆಯ ಬಳಿಕ ಆನೆ ಬಾಗಿಲಿನ ಮುಂಭಾಗದಲ್ಲಿ ಜಟ್ಟಿ ಕಾಳಗ ಜರುಗಿತು. ಬಳಿಕ ವಿಜಯಯಾತ್ರೆ ಹೊರಡುವ ಕನ್ನಡಾಂಬೆ ದೇವಾಲಯದ ಒಳಭಾಗದಲ್ಲಿರುವ ಬನ್ನಿ ಮರಕ್ಕೆ ಯದುವೀರ್‌ ಪೂಜೆ ಸಲ್ಲಿಸಿದರು. ತದನಂತರ ರಾಜವಂಶಸ್ಥರು ಮನೆಗೆ ಮರಳುವ ಮೂಲಕ ನವರಾತ್ರಿಯ 10 ದಿನದ ಧಾರ್ಮಿಕ ಕಾರ್ಯಗಳು ಸಂಪನ್ನಗೊಂಡವು. ಸಾಯಂಕಾಲ 4 ಗಂಟೆಯಿಂದ 4.30ರೊಳಗಿನ ಶುಭ ಕುಂಭಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಇತರ ಗಣ್ಯರು ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ. 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿರುವ ಸರ್ವಾಲಂಕಾರಭೂಷಿತೆ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುತ್ತಾರೆ. ಇದರೊಂದಿಗೆ ಜಂಬೂ ಸವಾರಿ ಆರಂಭವಾಗಲಿದೆ. ಅಂಬಾರಿ ಹೊತ್ತ ಅಭಿಮನ್ಯು ಆನೆಯೊಂದಿಗೆ ಗಜಪಡೆ ಅರಮನೆಯಿಂದ ಬನ್ನಿಮಂಟಪದವರೆಗೆ ಸುಮಾರು 5 ಕಿ.ಮೀಗೂ ಹೆಚ್ಚು ದೂರ ಸಾಗಲಿದೆ.

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.