ನವದೆಹಲಿ: 2023ರ ನಾಲ್ಕನೇ ತ್ರೈಮಾಸಿಕದಲ್ಲಿ ತನ್ನ ಸಮುದಾಯದ ಮಾರ್ಗಸೂಚಿ (community guidelines) ಗಳನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತದಲ್ಲಿ 2.25 ದಶಲಕ್ಷಕ್ಕೂ (22.5 ಲಕ್ಷ) ಹೆಚ್ಚು ವಿಡಿಯೋಗಳನ್ನು ಯೂಟ್ಯೂಬ್ನಿಂದ ಡಿಲೀಟ್ ಮಾಡಲಾಗಿದೆ ಎಂದು ಕಂಪನಿ ಮಂಗಳವಾರ ತನ್ನ ವರದಿಯಲ್ಲಿ ಹೇಳಿದೆ. ಭಾರತದಲ್ಲಿ 2023ರ ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಪ್ಲಾಟ್ಫಾರ್ಮ್ನಿಂದ ಡಿಲೀಟ್ ಮಾಡಲಾದ ವಿಡಿಯೋಗಳ ಸಂಖ್ಯೆ 30 ದೇಶಗಳ ಪೈಕಿ ಅತ್ಯಧಿಕವಾಗಿದೆ ಎಂದು ಯೂಟ್ಯೂಬ್ ತಿಳಿಸಿದೆ.
ಸಿಂಗಾಪುರದಲ್ಲಿ 12,43,871 ಮತ್ತು ಅಮೆರಿಕದಲ್ಲಿ 7,88,354 ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದ್ದು, ಇವು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಇರಾಕ್ನಲ್ಲಿ 41,176 ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದ್ದು, ಇದು ಕೊನೆಯ ಸ್ಥಾನದಲ್ಲಿದೆ.
ಜಾಗತಿಕವಾಗಿ ನೋಡುವುದಾದರೆ- ಈ ಅವಧಿಯಲ್ಲಿ ಯೂಟ್ಯೂಬ್ 9 ಮಿಲಿಯನ್ ವಿಡಿಯೋಗಳನ್ನು ತೆಗೆದುಹಾಕಿದೆ. ಹೀಗೆ ತೆಗೆದು ಹಾಕಲಾದ 9 ಮಿಲಿಯನ್ ವಿಡಿಯೋಗಳ ಪೈಕಿ ಶೇಕಡಾ 96 ರಷ್ಟು ವಿಡಿಯೋಗಳನ್ನು ತಂತ್ರಜ್ಞಾನದ ಮೂಲಕವೇ ಮೊದಲಿಗೆ ಕಂಡು ಹಿಡಿಯಲಾಗಿದೆ. ಅಂದರೆ ಈ ವಿಡಿಯೋಗಳು ಯೂಟ್ಯೂಬ್ನ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿವೆ ಎಂಬುದನ್ನು ಸ್ವಯಂ ಚಾಲಿತವಾಗಿ ಕಂಡು ಹಿಡಿಯಲಾಗಿತ್ತು.
ಈ ಪೈಕಿ ಶೇಕಡಾ 53.46 ರಷ್ಟು ವಿಡಿಯೋಗಳು ಒಂದೇ ಒಂದು ವೀಕ್ಷಣೆ (view) ಪಡೆಯುವ ಮೊದಲೇ ತೆಗೆದು ಹಾಕಲಾಗಿದೆ ಮತ್ತು ಶೇಕಡಾ 27.07 ರಷ್ಟು ವಿಡಿಯೋಗಳು ಅವನ್ನು ತೆಗೆದುಹಾಕುವ ಮೊದಲು 1 ರಿಂದ 10 ವೀಕ್ಷಣೆಗಳನ್ನು ಪಡೆದಿದ್ದವು ಎಂದು ಯೂಟ್ಯೂಬ್ ಹೇಳಿಕೆಯಲ್ಲಿ ತಿಳಿಸಿದೆ.
"ವಿಡಿಯೋ ಅಪ್ಲೋಡ್ ಮಾಡಿದವರು ಯಾರು, ಕಂಟೆಂಟ್ ಅನ್ನು ಎಲ್ಲಿಂದ ಅಪ್ಲೋಡ್ ಮಾಡಲಾಗಿದೆ ಅಥವಾ ಕಂಟೆಂಟ್ ಅನ್ನು ಹೇಗೆ ಸೃಷ್ಟಿಸಲಾಗಿದೆ ಎಂಬ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳದೇ ಯೂಟ್ಯೂಬ್ನ ಸಮುದಾಯ ಮಾರ್ಗಸೂಚಿಗಳನ್ನು ವಿಶ್ವಾದ್ಯಂತ ನಿರಂತರವಾಗಿ ಜಾರಿಗೊಳಿಸಲಾಗುತ್ತದೆ. ನಮ್ಮ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಂಟೆಂಟ್ ಅನ್ನು ತೆಗೆದುಹಾಕಿದಾಗ, ಅದನ್ನು ಜಾಗತಿಕವಾಗಿ ತೆಗೆದುಹಾಕಲಾಗುತ್ತದೆ ಮತ್ತು ಯಂತ್ರ ಕಲಿಕೆ ಮತ್ತು ಮಾನವ ವಿಮರ್ಶಕರ ಸಂಯೋಜನೆ ಬಳಸಿಕೊಂಡು ನೀತಿಗಳನ್ನು ಜಾರಿಗೆ ತರಲಾಗುತ್ತದೆ" ಎಂದು ಯೂಟ್ಯೂಬ್ ಹೇಳಿದೆ.
ಇದಲ್ಲದೇ ಸ್ಪ್ಯಾಮ್, ದಾರಿತಪ್ಪಿಸುವ ಮೆಟಾಡೇಟಾ ಅಥವಾ ಕಿರುಚಿತ್ರಗಳು, ವಿಡಿಯೋ ಮತ್ತು ಕಾಮೆಂಟ್ಗಳ ಸ್ಪ್ಯಾಮ್ ಸೇರಿದಂತೆ ಸ್ಪ್ಯಾಮ್ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಯೂಟ್ಯೂಬ್ 2023 ರ ನಾಲ್ಕನೇ ತ್ರೈಮಾಸಿಕದಲ್ಲಿ 20 ದಶಲಕ್ಷಕ್ಕೂ ಹೆಚ್ಚು ಚಾನೆಲ್ಗಳನ್ನು ತೆಗೆದುಹಾಕಿದೆ. 1.1 ಬಿಲಿಯನ್ ಗಿಂತ ಹೆಚ್ಚು ಕಾಮೆಂಟ್ ಗಳನ್ನು ಸಹ ತೆಗೆದುಹಾಕಲಾಗಿದೆ. ಅವುಗಳಲ್ಲಿ ಹೆಚ್ಚಿನವು ಸ್ಪ್ಯಾಮ್ ಆಗಿದ್ದವು. ತೆಗೆದುಹಾಕಿದ ಕಾಮೆಂಟ್ಗಳಲ್ಲಿ ಶೇಕಡಾ 99 ಕ್ಕಿಂತ ಹೆಚ್ಚು ಸ್ವಯಂಚಾಲಿತವಾಗಿ ಪತ್ತೆಯಾಗಿವೆ ಎಂದು ಯೂಟ್ಯೂಬ್ ಹೇಳಿದೆ.
ಇದನ್ನೂ ಓದಿ : ಇಸ್ರೊದಿಂದ ಬಾಹ್ಯಾಕಾಶ ವಿಜ್ಞಾನ ತರಬೇತಿ: ನೋಂದಣಿ ಹೇಗೆ? - ISRO