ನವದೆಹಲಿ: ಗೂಗಲ್ ಒಡೆತನದ ಯೂಟ್ಯೂಬ್ ಈ ವರ್ಷದ ಜನವರಿ ವೇಳೆಗೆ ಟ್ರಯಲ್ಸ್ ಸೇರಿದಂತೆ ಜಾಗತಿಕವಾಗಿ 100 ಮಿಲಿಯನ್ ಮ್ಯೂಸಿಕ್ ಮತ್ತು ಪ್ರೀಮಿಯಂ ಚಂದಾದಾರರನ್ನು ಪಡೆದುಕೊಂಡಿದೆ. ಈ ಬಗ್ಗೆ ಮಾತನಾಡಿದ ಯೂಟ್ಯೂಬ್ ಪ್ರಾಡಕ್ಟ್ ವಿಭಾಗದ ಉಪಾಧ್ಯಕ್ಷ ಆಡಮ್ ಸ್ಮಿತ್, ಸಣ್ಣದಾಗಿ ಆರಂಭವಾದ ಯೂಟ್ಯೂಬ್ ಈಗ 100 ಕ್ಕೂ ಹೆಚ್ಚು ದೇಶಗಳಲ್ಲಿ 100 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ನಮ್ಮ ಚಂದಾದಾರರು ನೀಡಿದ ಬೆಂಬಲಕ್ಕಾಗಿ ನಾವು ಅವರಿಗೆ ಕೃತಜ್ಞರಾಗಿದ್ದೇವೆ ಎಂದು ಹೇಳಿದರು. "ನಮ್ಮ ಜಾಗತಿಕ ಯೂಟ್ಯೂಬ್ ಸಮುದಾಯಕ್ಕೆ ಅತ್ಯುತ್ತಮ ದರ್ಜೆಯ ಅನುಭವ ನೀಡುವತ್ತ ನಾವು ಗಮನ ಹರಿಸಿದ್ದೇವೆ" ಎಂದು ಅವರು ಬ್ಲಾಗ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷದಲ್ಲಿ ಯೂಟ್ಯೂಬ್ ತನ್ನ ಪ್ರೀಮಿಯಂ ಪ್ಲೇಬ್ಯಾಕ್ ಸೇವೆಗಳನ್ನು ಹೆಚ್ಚಿಸಿತ್ತು. ಸ್ಮಾರ್ಟ್ ಟಿವಿಗಳು ಮತ್ತು ಟ್ಯಾಬ್ಲೆಟ್ಗಳಂಥ ವಿವಿಧ ಸಾಧನಗಳಲ್ಲಿ ಯೂಟ್ಯೂಬ್ ವೀಕ್ಷಣೆ ಸೌಲಭ್ಯವನ್ನು ಮುಂದುವರಿಸಿದ್ದು ಇದರಲ್ಲಿ ಸೇರಿವೆ. ಅಲ್ಲದೆ 1080p HD ವರ್ಧಿತ ಆವೃತ್ತಿಯನ್ನು ಪರಿಚಯಿಸಲಾಯಿತು.
"ನಾವು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸುವ ಪ್ರಯೋಗಗಳನ್ನು ಸಹ ಮಾಡುತ್ತಿದ್ದು, ಪ್ರೀಮಿಯಂ ಬಳಕೆದಾರರಿಗೆ ಮೊದಲು ಈ ವೈಶಿಷ್ಟ್ಯಗಳು ಲಭ್ಯವಾಗಲಿವೆ" ಎಂದು ಸ್ಮಿತ್ ತಿಳಿಸಿದರು.
ಕೇಳುಗರಿಗಾಗಿ ಯೂಟ್ಯೂಬ್ 'ಸ್ಯಾಂಪಲ್ಸ್ ಟ್ಯಾಬ್' ವೈಶಿಷ್ಟ್ಯವನ್ನು ಹೊರತಂದಿದೆ. ಇದನ್ನು ಬಳಸಿ ಮಿಂಚಿನ ವೇಗದಲ್ಲಿ ನಿಮಗೆ ಬೇಕಾದ ಮ್ಯೂಸಿಕ್ ಅನ್ನು ಹುಡುಕಬಹುದು. ಸಂಪೂರ್ಣವಾಗಿ ಕಸ್ಟಮೈಸ್ ಮಾಡಿದ ರೇಡಿಯೋ ಬಿಲ್ಡಿಂಗ್ ಮತ್ತು ಪಾಡ್ಕಾಸ್ಟ್ಗಳನ್ನು ಸಹ ಯೂಟ್ಯೂಬ್ ತನ್ನ ಮ್ಯೂಸಿಕ್ ವಿಭಾಗಕ್ಕೆ ಸೇರಿಸಿದೆ.
ಈ ಕುರಿತು ಮಾತನಾಡಿದ ಟಿ-ಸೀರೀಸ್ ಅಧ್ಯಕ್ಷ ನೀರಜ್ ಕಲ್ಯಾಣ್, ಯೂಟ್ಯೂಬ್ ಪ್ರೀಮಿಯಂ ಮತ್ತು ಮ್ಯೂಸಿಕ್ 100 ಮಿಲಿಯನ್ ಚಂದಾದಾರರ ಮೈಲಿಗಲ್ಲನ್ನು ದಾಟಿರುವುದು ಸಂಗೀತ ಉದ್ಯಮಕ್ಕೆ ಒಂದು ದೊಡ್ಡ ಮೈಲಿಗಲ್ಲಿನ ಕ್ಷಣವಾಗಿದೆ ಎಂದರು. "ಸಬ್ಸ್ಕ್ರಿಪ್ಷನ್ ವ್ಯವಹಾರ ಬೆಳೆಸಲು, ಅಭಿಮಾನಿಗಳ ಅನುಭವಗಳನ್ನು ಹೆಚ್ಚಿಸಲು ಮತ್ತು ಭಾರತೀಯ ಸಂಗೀತ ವ್ಯವಸ್ಥೆಯ ಬೆಳವಣಿಗೆಗೆ ಕೊಡುಗೆ ನೀಡಲು ಸಹಾಯ ಮಾಡುವ ಗೂಗಲ್ನೊಂದಿಗೆ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ" ಎಂದು ಕಲ್ಯಾಣ್ ಹೇಳಿದರು.
ಯೂಟ್ಯೂಬ್ ಲಕ್ಷಾಂತರ ಹೊಸ ಪ್ರೀಮಿಯಂ ಮತ್ತು ಮ್ಯೂಸಿಕ್ ಬಳಕೆದಾರರನ್ನು ಪಡೆಯುವುದು ಮಾತ್ರವಲ್ಲದೆ ಆ ಚಂದಾದಾರರಿಂದ ಗಳಿಸುವ ಆದಾಯದ ಪ್ರಮಾಣವನ್ನು ಕೂಡ ಹೆಚ್ಚಿಸಿಕೊಳ್ಳುತ್ತಿದೆ. ಪ್ರೀಮಿಯಂ ಚಂದಾದಾರರು ಮಾತ್ರ ಯೂಟ್ಯೂಬ್ನ ಪ್ರಾಯೋಗಿಕ ವೈಶಿಷ್ಟ್ಯಗಳನ್ನು ಮೊದಲಿಗೆ ಬಳಸಲು ಸಾಧ್ಯವಾಗಲಿದೆ.
ಇದನ್ನೂ ಓದಿ: ಆನ್ಲೈನ್ನಲ್ಲಿ ಮಕ್ಕಳಿಗೆ ಕಿರುಕುಳ; ಪೋಷಕರ ಕ್ಷಮೆಯಾಚಿಸಿದ ಮಾರ್ಕ್ ಜುಕರ್ಬರ್ಗ್