ನವದೆಹಲಿ: ಎಲೋನ್ ಮಸ್ಕ್ ನೇತೃತ್ವದ ಎಕ್ಸ್ ಆಂಡ್ರಾಯ್ಡ್ ಬಳಕೆದಾರರಿಗೆ ಅಪ್ಲಿಕೇಶನ್ನಿಂದ ನೇರವಾಗಿ ಆಡಿಯೋ ಮತ್ತು ವೀಡಿಯೊ ಕರೆಗಳನ್ನು ಮಾಡುವ ವೈಶಿಷ್ಟ್ಯವನ್ನು ಆರಂಭಿಸುತ್ತಿದೆ. ಈ ಯೋಜನೆಯಲ್ಲಿ ಕೆಲಸ ಮಾಡುವ ಎಕ್ಸ್ ಎಂಜಿನಿಯರ್ ಒಬ್ಬರು ಮಾಡಿದ ಪೋಸ್ಟ್ ಪ್ರಕಾರ, ಆಂಡ್ರಾಯ್ಡ್ ಬಳಕೆದಾರರು ಅಪ್ಲಿಕೇಶನ್ ಅಪ್ಡೇಟ್ ಮಾಡಿದ ನಂತರ ಈ ವೈಶಿಷ್ಟ್ಯ ಬಳಸಲು ಸಾಧ್ಯವಾಗಲಿದೆ.
"ಎಕ್ಸ್ ನಲ್ಲಿ ಆಡಿಯೋ ಮತ್ತು ವೀಡಿಯೊ ಕರೆಗಳು ಇಂದು ಆಂಡ್ರಾಯ್ಡ್ ಬಳಕೆದಾರರಿಗೆ ನಿಧಾನವಾಗಿ ಲಭ್ಯವಾಗುತ್ತಿವೆ. ನಿಮ್ಮ ಅಪ್ಲಿಕೇಶನ್ ಅನ್ನು ಅಪ್ಡೇಟ್ ಮಾಡಿ ಮತ್ತು ನಿಮ್ಮ ತಾಯಿಗೆ ಕರೆ ಮಾಡಿ" ಎಂದು ಎಕ್ಸ್ ಎಂಜಿನಿಯರ್ ಎನ್ರಿಕ್ ಶುಕ್ರವಾರ ಪೋಸ್ಟ್ ಮಾಡಿದ್ದಾರೆ. ಆದಾಗ್ಯೂ, ಈ ವೈಶಿಷ್ಟ್ಯವು ಪ್ರೀಮಿಯಂ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ.
ಆಡಿಯೋ ಮತ್ತು ವಿಡಿಯೋ ಕರೆಯನ್ನು ಸಕ್ರಿಯಗೊಳಿಸಲು ಅಥವಾ ನಿಷ್ಕ್ರಿಯಗೊಳಿಸಲು, ಬಳಕೆದಾರರು to Settings > Privacy and Safety > Direct Messages ಮೂಲಕ ಇದನ್ನು ಸೆಟ್ ಮಾಡಿಕೊಳ್ಳಬಹುದು. ಕರೆ ಮಾಡಲು ಮೂರು ಆಯ್ಕೆಗಳು ಲಭ್ಯವಿರುತ್ತವೆ. ಅಡ್ರೆಸ್ ಬುಕ್ನಲ್ಲಿರುವ ಜನರಿಗೆ, ಅವರು ಫಾಲೋ ಮಾಡುತ್ತಿರುವ ವ್ಯಕ್ತಿಗಳಿಗೆ ಮತ್ತು ವೆರಿಫೈ ಆಗಿರುವ ಬಳಕೆದಾರರಿಗೆ ಹೀಗೆ ಮೂರು ಆಯ್ಕೆಗಳಲ್ಲಿ ಯಾರಿಗಾದರೂ ಕರೆ ಮಾಡಬಹುದು.
ಈ ತಿಂಗಳ ಆರಂಭದಲ್ಲಿ, ಎಕ್ಸ್ ವೆರಿಫೈಡ್ ಸಂಸ್ಥೆಗಳಿಗೆ ಹೊಸ ಮೂಲ ಪೇಡ್ ಸಬ್ಸ್ಕ್ರಿಪ್ಷನ್ ಯೋಜನೆಗಳನ್ನು ಪರಿಚಯಿಸಿತ್ತು. ಈ ಯೋಜನೆ ಈಗ ತಿಂಗಳಿಗೆ $ 200 ಅಥವಾ ವರ್ಷಕ್ಕೆ $ 2,000 ಗೆ ಲಭ್ಯವಿದೆ. ವೆರಿಫೈಡ್ ಸಂಸ್ಥೆಗಳ ಮೂಲ ಯೋಜನೆಯು ಈಗ ಅವರಿಗೆ ಗೋಲ್ಡ್ ಚೆಕ್-ಮಾರ್ಕ್ ಬ್ಯಾಡ್ಜ್ ಮತ್ತು ಇತರ ಕೆಲ ಪ್ರಯೋಜನಗಳನ್ನು ನೀಡುತ್ತದೆ. "ಸಣ್ಣ ವ್ಯವಹಾರಗಳಿಗಾಗಿ ವಿನ್ಯಾಸಗೊಳಿಸಲಾದ, ಚಂದಾದಾರರು ಎಕ್ಸ್ ನಲ್ಲಿ ವೇಗದ ಬೆಳವಣಿಗೆಯನ್ನು ಸಕ್ರಿಯಗೊಳಿಸಲು ಜಾಹೀರಾತು ಕ್ರೆಡಿಟ್ಗಳು ಮತ್ತು ಆದ್ಯತೆಯ ಬೆಂಬಲ ಪಡೆಯುತ್ತಾರೆ" ಎಂದು ಕಂಪನಿ ಪೋಸ್ಟ್ ಮಾಡಿದೆ.
ಎಕ್ಸ್ (ಹಿಂದೆ ಟ್ವಿಟರ್) ಆನ್ಲೈನ್ ಸುದ್ದಿ ಮತ್ತು ಸಾಮಾಜಿಕ ನೆಟ್ವರ್ಕಿಂಗ್ ಸೈಟ್ ಆಗಿದ್ದು, ಇದರಲ್ಲಿ ಜನ ಸಣ್ಣ ಸಂದೇಶಗಳ ಮೂಲಕ ಸಂವಹನ ನಡೆಸುತ್ತಾರೆ. X ಇದು ಮೈಕ್ರೋಬ್ಲಾಗಿಂಗ್ ಪ್ಲಾಟ್ ಫಾರ್ಮ್ ಆಗಿದೆ. X ಅನ್ನು ಪೋಸ್ಟರ್ ಅಥವಾ ರೀಡರ್ ಆಗಿ ಸುಲಭವಾಗಿ ಬಳಸಬಹುದು. ಇದರಲ್ಲಿ ನೀವು ಉಚಿತವಾಗಿ ಖಾತೆ ಆರಂಭಿಸಬಹುದು ಮತ್ತು ಆಗಾಗ್ಗೆ ಪೋಸ್ಟ್ ಮಾಡಬಹುದು