ನವದೆಹಲಿ: ತಂತ್ರಜ್ಞಾನ ಆಸಕ್ತರು ಕುತೂಹಲದಿಂದ ಕಾಯುವ ವಿಶ್ವ ಮೊಬೈಲ್ ಸಮ್ಮೇಳನ-2024 (Mobile World Congress -MWC) ಫೆ.26 ರಿಂದ 29 ರವರೆಗೆ ಸ್ಪೇನ್ನ ಬಾರ್ಸಿಲೋನಾದಲ್ಲಿ ನಡೆಯಲಿದೆ. ಪ್ರಪಂಚದಾದ್ಯಂತದ ಸಾವಿರಾರು ಟೆಕ್ ಮತ್ತು ಟೆಲಿಕಾಂ ನಾಯಕರು ಇತ್ತೀಚಿನ ಮೊಬೈಲ್ ತಂತ್ರಜ್ಞಾನಗಳನ್ನು ಪ್ರದರ್ಶಿಸುವ ಜಾಗತಿಕ ವೇದಿಕೆ ಇದಾಗಿದ್ದು, ಹತ್ತಾರು ಸಾವಿರ ತಂತ್ರಜ್ಞಾನ ಆಸಕ್ತರು ಸಮ್ಮೇಳನಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಸ್ಮಾರ್ಟ್ಫೋನ್ಗಳು, ಹೆಡ್ಸೆಟ್ಗಳು ಮತ್ತು ಧರಿಸಬಹುದಾದ ಸಾಧನಗಳಂತಹ ಎಐ ಮತ್ತು ವೈಯಕ್ತಿಕ ಕಂಪ್ಯೂಟಿಂಗ್ ಸಾಧನಗಳು ಸಮ್ಮೇಳನದ ಆಕರ್ಷಣೆಯ ಕೇಂದ್ರ ಬಿಂದುವಾಗಿರಲಿದ್ದು, ಭಾಗವಹಿಸುವವರು ಹೊಸ ಮತ್ತು ಅತ್ಯಾಕರ್ಷಕ ಉತ್ಪನ್ನಗಳ ಶ್ರೇಣಿಯನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ.
ಎಂಡಬ್ಲ್ಯೂಸಿಯಲ್ಲಿ ಗೂಗಲ್ ತನ್ನ ಅತ್ಯಾಧುನಿಕ ತಂತ್ರಜ್ಞಾನವಾದ ಬೂತ್ ಅನುಭವ (booth experience) ವನ್ನು ಪ್ರದರ್ಶಿಸಲು ಸಜ್ಜಾಗಿದೆ. ಯಾವುದೇ ಹೊಸ ಹಾರ್ಡ್ ವೇರ್ಗಳ ಅನಾವರಣಗಳನ್ನು ನಿರೀಕ್ಷಿಸಲಾಗಿಲ್ಲವಾದರೂ, ಆಂಡ್ರಾಯ್ಡ್-ಸಂಬಂಧಿತ ಹೊಸ ತಂತ್ರಜ್ಞಾನಗಳು ಪ್ರದರ್ಶನವಾಗಬಹುದು. ಕಳೆದ ವರ್ಷ ಗೂಗಲ್ ತನ್ನ ಡ್ರೈವ್, ಕೀಪ್ ಆಧರಿತ ಡ್ರಾಪ್ ಎಂಬ ವೈಶಿಷ್ಟ್ಯವನ್ನು ಪರಿಚಯಿಸಿತ್ತು.
ಮೊಟೊರೊಲಾ ಎಂಡಬ್ಲ್ಯೂಸಿಯಲ್ಲಿ ಬ್ರೇಸ್ ಲೆಟ್ನಂತೆ ಧರಿಸಬಹುದಾದ ಬೆಂಡಬಲ್ (ಮಡಚಬಹುದಾದ) ಸಾಧನವನ್ನು ಪ್ರದರ್ಶಿಸಬಹುದು ಎನ್ನಲಾಗಿದೆ. ಆದಾಗ್ಯೂ, ಇದನ್ನು ವಾಸ್ತವದಲ್ಲಿ ಬಳಕೆಯ ಉತ್ಪನ್ನವಾಗಿ ತಯಾರಿಸುವ ಬಗೆಗಿನ ವಿವರಗಳು ದೃಢಪಟ್ಟಿಲ್ಲ.
ಸ್ಯಾಮ್ ಸಂಗ್ ಗ್ಯಾಲಕ್ಸಿ ರಿಂಗ್ನ ಬಗ್ಗೆ ಹೆಚ್ಚಿನ ತಂತ್ರಜ್ಞಾನವನ್ನು ಪ್ರದರ್ಶಿಸಬಹುದು ಅಥವಾ ಸ್ಮಾರ್ಟ್ ವೇರೆಬಲ್ಸ್ ವಿಭಾಗದಲ್ಲಿ ಇತರ ಬ್ರಾಂಡ್ಗಳು ಹೊಸ ಉತ್ಪನ್ನಗಳನ್ನು ಅನಾವರಣಗೊಳಿಸಬಹುದು. ಇದು ರಿಂಗ್ಸ್, ನೆಕ್ಲೇಸ್ ಅಥವಾ ಸ್ಮಾರ್ಟ್ ಮೂಗು ಚುಚ್ಚುವಿಕೆಗಳಂತಹ (smart nose piercings) ಧರಿಸಬಹುದಾದ ಸ್ಮಾರ್ಟ್ ಸಾಧನಗಳ ಹೊಸ ಟ್ರೆಂಡ್ ಅನ್ನು ಹುಟ್ಟುಹಾಕಬಹುದು.
ಒನ್ ಪ್ಲಸ್ ತನ್ನ ಎರಡನೇ ತಲೆಮಾರಿನ ಸ್ಮಾರ್ಟ್ ವಾಚ್ ಒನ್ ಪ್ಲಸ್ ವಾಚ್ 2 ಅನ್ನು ಎಂಡಬ್ಲ್ಯೂಸಿಯಲ್ಲಿ ಬಿಡುಗಡೆ ಮಾಡಲಿದೆ ಎಂದು ದೃಢಪಡಿಸಿದೆ. ಒನ್ ಪ್ಲಸ್ ಈ ವರ್ಷ ಕಾನ್ಸೆಪ್ಟ್ ಸ್ಮಾರ್ಟ್ ಫೋನ್ ಅನ್ನು ಪ್ರದರ್ಶಿಸದಿದ್ದರೂ, ಎಂಡಬ್ಲ್ಯೂಸಿಯಲ್ಲಿ ತನ್ನ ಆಕರ್ಷಕ ಸಾಧನಗಳನ್ನು ಪ್ರದರ್ಶಿಸುವ ಇತಿಹಾಸವನ್ನು ಹೊಂದಿದೆ.
ಎಂಡಬ್ಲ್ಯೂಸಿಯಲ್ಲಿ ಶಿಯೋಮಿಯು ತನ್ನ 14 ಮತ್ತು 14 ಪ್ರೊ ಸಾಧನಗಳನ್ನು ಜಾಗತಿಕವಾಗಿ ಬಿಡುಗಡೆ ಮಾಡಲಿದೆ. ಶಿಯೋಮಿ ಈಗಾಗಲೇ ಚೀನಾದಲ್ಲಿ ತನ್ನ ಈ ಪ್ರಮುಖ ಸ್ಮಾರ್ಟ್ ಫೋನ್ ಮಾಡೆಲ್ಗಳನ್ನು ಪರಿಚಯಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಶಿಯೋಮಿ 14 ಅಲ್ಟ್ರಾ ಸಮ್ಮೇಳನದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.
ಇದನ್ನೂ ಓದಿ : ಗ್ಲಾಕೋಮಾ & ರೆಟಿನಾ ರೋಗಪತ್ತೆ: ತಜ್ಞರನ್ನೂ ಮೀರಿಸಿದ GPT-4