ಬೆಂಗಳೂರು: ಟೆಕ್ಕಿಯೊಬ್ಬರು ತಾವು ಹಂಚಿಕೊಂಡ ಲೊಕೇಶನ್ ಸಹಾಯದಿಂದ ತಮ್ಮ ತಂದೆಯಿಂದ ಕಳುವಾಗಿದ್ದ ಫೋನ್‌ಸಹಿತ ಕಳ್ಳನನ್ನು ಪತ್ತೆ ಹಚ್ಚಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಹೌದು, ರಾಜ್ ಭಗತ್ ಎಂಬ ತಮಿಳುನಾಡಿನ ಟೆಕ್ಕಿ ಕಳವಾಗಿದ್ದ ತಮ್ಮ ತಂದೆಯ ಫೋನ್ ಹಾಗೂ ಇತರೆ ಕದ್ದ ವಸ್ತುಗಳೊಂದಿಗೆ ಕಳ್ಳನನ್ನು ಪತ್ತೆ ಮಾಡಿದ್ದಾರೆ.
ಫೋನ್ ಪತ್ತೆ ಹಚ್ಚಿದ ಬಗ್ಗೆ ಟೆಕ್ಕಿ ರಾಜ್ ಭಗತ್ ವಿವರಿಸಿ, "ಫೆಬ್ರವರಿ 4ರ ಮಧ್ಯರಾತ್ರಿ 1.40ರ ಸುಮಾರಿಗೆ ನಾಗರ್‌ಕೋಯಿಲ್-ಕಾಚಿಗುಡ ಎಕ್ಸ್‌ಪ್ರೆಸ್‌ನಲ್ಲಿ ತಂದೆ ಫೋನ್ ಇರಿಸಿದ ಕೈಚೀಲ ಕಳುವಾಗಿತ್ತು. ಎಲ್ಲೆಡೆ ಹುಡುಕಾಡಿದರು ಫೋನ್ ಪತ್ತೆಯಾಗಿರಲಿಲ್ಲ. ಕೈಚೀಲ ಕಳವಾಗಿದೆ ಎಂದು ತಂದೆಗೆ ಗೊತ್ತಾಗುವಷ್ಟರಲ್ಲಿ ಸುಮಾರು ಎರಡು ಗಂಟೆ ಕಳೆದಿತ್ತು. ನಂತರ ಅವರು ಬೇರೊಬ್ಬರ ಫೋನ್‌ನಿಂದ ನನಗೆ ಕರೆ ಮಾಡಿ ವಿಷಯ ತಿಳಿಸಿದರು. ನಮ್ಮ ಕುಟುಂಬ ಸದಸ್ಯರು ಫೋನ್ ಮೂಲಕ ಪರಸ್ಪರ ಲೊಕೇಶನ್ ಅನ್ನು ಹಂಚಿಕೊಂಡಿದ್ದೇವೆ. ಹೀಗಾಗಿ ನನ್ನ ತಂದೆಯ ಫೋನ್ ಲೊಕೇಶನ್ ಪರಿಶೀಲಿಸಿದಾಗ, ತಿರುನೆಲ್ವೇಲಿಯ ಮೇಳಪಾಲಯಂ ಬಳಿ ಫೋನ್ ಲೊಕೇಶನ್ ಟ್ರ್ಯಾಕ್ ಆಗಿತ್ತು. ಇದರಿಂದ ಫೋನ್ ಕದ್ದ ಕಳ್ಳ ತಿರುನೆಲ್ವೇಲಿ ಜಂಕ್ಷನ್ನಲ್ಲಿ ಇಳಿದು ಮತ್ತೊಂದು ರೈಲಿನ ಮೂಲಕ ನಾಗರ್ಕೋಯಿಲ್ಗೆ ಮರಳುತ್ತಿದ್ದಾನೆ ಎಂದು ನಾನು ಊಹಿಸಿದೆ" ಎಂದು ಹೇಳಿದರು.
"ನಾನು ನನ್ನ ಸ್ನೇಹಿತನೊಂದಿಗೆ ಕಳ್ಳನನ್ನು ಹಿಡಿಯಲು ನಿರ್ಧರಿಸಿದೆ. ಇದಕ್ಕಾಗಿ ರೈಲ್ವೆ ಪೊಲೀಸರನ್ನೂ ನಮ್ಮೊಂದಿಗೆ ಕರೆದೊಯ್ದಿದ್ದೆವು. ಲೊಕೇಶನ್ ಪ್ರಕಾರ, ಕಳ್ಳ ಪ್ರಯಾಣಿಸುತ್ತಿದ್ದ ಕನ್ಯಾಕುಮಾರಿ ಎಕ್ಸ್‌ಪ್ರೆಸ್ ಒಳಗೆ ತುಂಬಾ ಜನಸಂದಣಿ ಇತ್ತು ಮತ್ತು ಕಳ್ಳ ಜನಸಮೂಹದಲ್ಲಿ ನಾಪತ್ತೆಯಾಗಿದ್ದ. ನಂತರ ಕಳ್ಳ ರೈಲು ನಿಲ್ದಾಣದ ಮುಖ್ಯ ಗೇಟ್ ಮೂಲಕ ನಿರ್ಗಮಿಸಿ ಅಲ್ಲಿಂದ ಅಣ್ಣಾ ಬಸ್ ನಿಲ್ದಾಣಕ್ಕೆ ತೆರಳುವ ಬಸ್ ಹತ್ತಿಕೊಂಡು ಹೋಗುತ್ತಿರುವುದು ಕಂಡುಬಂತು. ಆದ್ದರಿಂದ, ನಾವು ನಮ್ಮ ಬೈಕಿನಲ್ಲಿ ಬಸ್ ಅನ್ನು ಬೆನ್ನಟ್ಟಲು ಪ್ರಾರಂಭಿಸಿದೆವು. ಅಂತಿಮವಾಗಿ, ಕಳ್ಳ ಅಣ್ಣಾ ಬಸ್ ನಿಲ್ದಾಣದಲ್ಲಿ ಇಳಿದ" ಎಂದು ತಿಳಿಸಿದರು.
"ಗೂಗಲ್ ಲೊಕೇಶನ್ ನನಗೆ ಎರಡು ಮೀಟರ್ ದೂರದಲ್ಲಿ ನಿಖರವಾದ ಸ್ಥಳ ತೋರಿಸಿತು. ನಾನು ಕಳ್ಳನ ಮುಂದೆಯೇ ನಿಂತಿದ್ದೆ. ನಂತರ ಅವನು ಹಿಡಿದಿರುವ ಕೈಚೀಲ ನನ್ನ ತಂದೆಯದ್ದೇ ಎಂದು ಖಚಿತಪಡಿಸಿಕೊಂಡೆ. ಬಳಿಕ ಸುತ್ತಮುತ್ತಲಿನ ಜನರ ಸಹಾಯದಿಂದ ನಾವು ಕಳ್ಳನನ್ನು ಸೆರೆಹಿಡಿದೆವು. ಕಳ್ಳನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದಾಗ, ಪೊಲೀಸರು ಅವನು ಕದ್ದ ಇತರ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡರು. ಅವನ ಬಳಿ ಸೆಲ್ ಫೋನ್ ಚಾರ್ಜರ್, ಬ್ಲೂಟೂತ್ ಇಯರ್‌ಫೋನ್‌ಗಳು, ಲಾಕ್ ಅಂಡ್ ಕೀ, ರೈಲು ಸರಪಳಿ ಮತ್ತು ಒಂದು ಸಾವಿರ ಹಣ ಪತ್ತೆಯಾಗಿತ್ತು" ಎಂದರು.
"ಲೊಕೇಶನ್ ಟ್ರ್ಯಾಕಿಂಗ್‌ನಂತಹ ತಂತ್ರಜ್ಞಾನವು ಒಬ್ಬರ ಗೌಪ್ಯತೆಗೆ ಭಂಗ ತರುತ್ತದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ನನ್ನ ಕುಟುಂಬದ ಎಲ್ಲರೂ ಯಾವುದೇ ಸಮಯದಲ್ಲಿ ಯಾರು ಎಲ್ಲಿದ್ದಾರೆ ಎಂದು ನಿಖರವಾಗಿ ತಿಳಿದುಕೊಳ್ಳುವುದಕ್ಕೆ ಲೊಕೇಶನ್ ಹಂಚಿಕೊಂಡಿದ್ದೇವೆ. ಇದರಿಂದಾಗಿ ನನ್ನ ತಾಯಿಗೆ ನಾನು ಎಲ್ಲಿದ್ದೇನೆ ಎಂಬ ಚಿಂತೆ ಇರವುದಿಲ್ಲ" ಎಂದು ಹೇಳಿದರು.
ಭಗತ್ ಅವರು ಸರ್ಕಾರಕ್ಕೆ ಸಹಾಯ ಮಾಡಲು ಡೇಟಾ ಮತ್ತು ಲೊಕೇಶನ್ಗಳನ್ನು ವೃತ್ತಿಪರವಾಗಿ ಟ್ರ್ಯಾಕ್ ಮಾಡುತ್ತಾರೆ. ಅವರ ಮ್ಯಾಪಿಂಗ್ ಪರಿಣತಿಯನ್ನು ಚಲನಚಿತ್ರ ನಿರ್ಮಾಪಕ ಮಣಿರತ್ನಂ ಅವರು ತಮ್ಮ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಬಳಸಿದ್ದಾರೆ. ಈ ಮೂಲಕ ಚೋಳ ಸಾಮ್ರಾಜ್ಯದ ಪ್ರದೇಶಗಳನ್ನು ಸಿನಿಮಾದಲ್ಲಿ ತೋರಿಸಿದ್ದಾರೆ.
ಇದನ್ನೂ ಓದಿ: ಟೆಕ್ಕಿಗಳಿಗೆ ಕಹಿಯಾದ 2024; ವರ್ಷಾರಂಭದಿಂದಲೇ ಕಂಪನಿಗಳಿಂದ 30 ಸಾವಿರ ಉದ್ಯೋಗಿಗಳು ವಜಾ