ನವದೆಹಲಿ: ಬಿಲಿಯನೇರ್ ಎಲೋನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಗುರುವಾರ ತನ್ನ ನಾಲ್ಕನೇ ಪರೀಕ್ಷಾ ಹಾರಾಟವನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ. ಈ ಬಗ್ಗೆ ಎಕ್ಸ್ನಲ್ಲಿ ಮಾಹಿತಿ ನೀಡಿರುವ ಸ್ಪೇಸ್ ಎಕ್ಸ್ "ಸ್ಟಾರ್ ಶಿಪ್ ಲಿಫ್ಟ್ ಆಫ್ ಆಗಿದೆ!" ಎಂದು ಬರೆದಿದೆ. ದಕ್ಷಿಣ ಟೆಕ್ಸಾಸ್ನ ಬೊಕಾ ಚಿಕಾ ಬೀಚ್ ಬಳಿಯ ಸ್ಪೇಸ್ಎಕ್ಸ್ನ ಸ್ಟಾರ್ಬೇಸ್ ಕೇಂದ್ರದಿಂದ 400 ಅಡಿ ಎತ್ತರದ ಸ್ಟಾರ್ಶಿಪ್ ರಾಕೆಟ್ ಮತ್ತು ಹೆವಿ ಬೂಸ್ಟರ್ ಜೂನ್ 6 ರ ಸಂಜೆ 6 ಗಂಟೆಯ ನಂತರ ಉಡಾವಣೆಗೊಂಡಿತು.
ಪರೀಕ್ಷಾ ಹಾರಾಟ ನಡೆಸಲು ಅಗತ್ಯವಾದ ಎಲ್ಲ ಸುರಕ್ಷತಾ ಮತ್ತು ಇತರ ಪರವಾನಗಿ ಅವಶ್ಯಕತೆಗಳನ್ನು ಪೂರೈಸಿದ ನಂತರ ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ಮಂಗಳವಾರ ನೌಕೆಯ ಹಾರಾಟಕ್ಕೆ ಹಸಿರು ನಿಶಾನೆ ತೋರಿಸಿದೆ.
ಹಾಟ್-ಸ್ಟೇಜಿಂಗ್ ಬೇರ್ಪಡಿಸುವಿಕೆಯ ಸಮಯದಲ್ಲಿ ಬೃಹತ್ ಸ್ಟಾರ್ ಶಿಪ್ನ ರಾಪ್ಟರ್ ಎಂಜಿನ್ಗಳು ಬೆಂಕಿಯ ಚೆಂಡಿನಂತೆ ಉರಿಯುತ್ತಿದ್ದವು. ಫ್ಲೈಟ್ 4 ರಾಕೆಟ್ ಹಿಂದಿನ ಪರೀಕ್ಷಾ ಹಾರಾಟಗಳು ಮತ್ತು ಹಿಂದೂ ಮಹಾಸಾಗರದಲ್ಲಿ ಸ್ಟಾರ್ ಶಿಪ್ ಸ್ಪ್ಲಾಶ್ ಡೌನ್ನಂತೆ ಅದೇ ಪಥವನ್ನು ಬಳಸಿತು. ನಂತರ ಸೂಪರ್ ಹೆವಿ ರಾಕೆಟ್ ಗಲ್ಫ್ ಆಫ್ ಮೆಕ್ಸಿಕೊದಲ್ಲಿ ಪತಗೊಂಡಿದೆ ಎಂದು ಕಂಪನಿ ಹೇಳಿದೆ.
ನಾಲ್ಕನೇ ಹಾರಾಟ ಪರೀಕ್ಷೆಯು ದಿಗಂತದಲ್ಲಿ ವೇಗವಾಗಿ ಮರುಬಳಕೆ ಮಾಡಬಹುದಾದ ರಾಕೆಟ್ ನಿರ್ಮಾಣದ ಭವಿಷ್ಯಕ್ಕೆ ಹತ್ತಿರವಾಗುವ ಗುರಿಯನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ. ಇದು ಇಲ್ಲಿಯವರೆಗೆ ಮೂರು ಪರೀಕ್ಷಾ ಹಾರಾಟಗಳನ್ನು ನಡೆಸಿದ್ದರೂ, ಇದನ್ನು ಎಷ್ಟರಮಟ್ಟಿಗೆ ಮರು ಬಳಕೆ ಮಾಡಬಹುದು ಎಂಬುದು ಚಿಂತೆಯ ವಿಷಯವಾಗಿ ಉಳಿದಿದೆ. 6 ತಿಂಗಳ ನಂತರ ನೌಕೆಯ ಶಾಖ ಕವಚವನ್ನು ದೊಡ್ಡ ತಜ್ಞರ ತಂಡ ಬದಲಾಯಿಸಬೇಕಾಗುತ್ತದೆ ಎಂದು ಈ ಹಿಂದೆ ಮಸ್ಕ್ ಹೇಳಿದ್ದು ಇದಕ್ಕೆ ಕಾರಣವಾಗಿದೆ.
"ಸ್ಟಾರ್ ಶಿಪ್ನ ಮೂರನೇ ಪರೀಕ್ಷಾ ಹಾರಾಟದ ಸಮಯದಲ್ಲಿ ನಾವು ಸಾಧಿಸಿದ್ದನ್ನು ಆಧರಿಸಿ, ಮರುಪ್ರವೇಶದ ಸಮಯದಲ್ಲಿ ಕಾಣಿಸಿಕೊಳ್ಳುವ ತೀವ್ರ ಶಾಖವನ್ನು ಕಡಿಮೆ ಮಾಡುವುದು ಇಂದು ನಮ್ಮ ಪ್ರಾಥಮಿಕ ಗುರಿಯಾಗಿದೆ" ಎಂದು ಕಂಪನಿ ತಿಳಿಸಿದೆ.
"ಸ್ಟಾರ್ ಶಿಪ್ ಭೂಮಿಗೆ ಮರುಪ್ರವೇಶಿಸಲು ಯಶಸ್ವಿಯಾದರೆ, ನಾವು ಹೈಪರ್ ಸಾನಿಕ್ ವೇಗದಲ್ಲಿ ಅಥವಾ ಶಬ್ದದ ವೇಗಕ್ಕಿಂತ 5 ಪಟ್ಟು ಹೆಚ್ಚು ವೇಗದಲ್ಲಿ ವಾಹನದ ಬಗ್ಗೆ ಅಮೂಲ್ಯವಾದ ಡೇಟಾ ಸಂಗ್ರಹಿಸುತ್ತೇವೆ" ಎಂದು ಕಂಪನಿಯು ಉಡಾವಣೆಗೆ ಮೊದಲು ಹೇಳಿದೆ. ಬೃಹತ್ ಸ್ಟಾರ್ ಶಿಪ್ ವಾಹನವು 2026 ರಲ್ಲಿ ಸಿಬ್ಬಂದಿ ಆರ್ಟೆಮಿಸ್ 3 ಮಿಷನ್ ಸಮಯದಲ್ಲಿ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಇಳಿಸಲು ಉದ್ದೇಶಿಸಿದೆ. ಇದು ನಂತರ ಮಂಗಳ ಮತ್ತು ಅದರಾಚೆಗೆ ತೆರಳಲಿದೆ.
ಇದನ್ನೂ ಓದಿ : ಬಾಹ್ಯಾಕಾಶ ನಿಲ್ದಾಣ ತಲುಪಿದ ಸುನೀತಾ ವಿಲಿಯಮ್ಸ್; ಡ್ಯಾನ್ಸ್ ಮಾಡಿ ಖುಷಿ ವ್ಯಕ್ತಪಡಿಸಿದ ಗಗನಯಾತ್ರಿ - Boeing Starliner Launch