ನವದೆಹಲಿ: 2023ರ 4ನೇ ತ್ರೈಮಾಸಿಕದಲ್ಲಿ ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆ ವರ್ಷದಿಂದ ವರ್ಷಕ್ಕೆ ಶೇಕಡಾ 19ರಷ್ಟು ಬೆಳೆದಿದೆ. ಒಟ್ಟಾರೆ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಶಿಯೋಮಿ ಅಗ್ರಸ್ಥಾನದಲ್ಲಿದ್ದರೆ, ಸ್ಯಾಮ್ಸಂಗ್ ನಂತರದ ಸ್ಥಾನದಲ್ಲಿದೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ.
ಏತನ್ಮಧ್ಯೆ ಭಾರತದ ಮಾರುಕಟ್ಟೆಯಲ್ಲಿ 5 ಜಿ ಸ್ಮಾರ್ಟ್ಪೋನ್ ಪಾಲು ಶೇಕಡಾ 65ಕ್ಕೆ ಏರಿಕೆಯಾಗಿದೆ. ಇದು ಶೇಕಡಾ 122ರಷ್ಟು ಬೆಳವಣಿಗೆಯಾಗಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ ಸೈಬರ್ ಮೀಡಿಯಾ ರಿಸರ್ಚ್ (ಸಿಎಂಆರ್) ವರದಿಯ ಪ್ರಕಾರ, ಸ್ಯಾಮ್ಸಂಗ್ 5ಜಿ ಸ್ಮಾರ್ಟ್ಪೋನ್ ಮಾರುಕಟ್ಟೆಯಲ್ಲಿ ಶೇಕಡಾ 22ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದರೆ, ವಿವೋ ಶೇಕಡಾ 18ರಷ್ಟು ಪಾಲು ಹೊಂದಿದೆ.
ಹಾಗೆಯೇ ಒಟ್ಟಾರೆ ಮೊಬೈಲ್ ಮಾರುಕಟ್ಟೆಯು ಶೇಕಡಾ 29ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಶಿಯೋಮಿ ಶೇ 19, ಸ್ಯಾಮ್ಸಂಗ್ ಶೇ 18.9 ಮತ್ತು ವಿವೋ ಶೇ 16ರಷ್ಟು ಪಾಲಿನೊಂದಿಗೆ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. ರಿಯಲ್ ಮಿ ಶೇ 12 ಮತ್ತು ಒಪ್ಪೋ ಶೇ 8ರಷ್ಟು ಪಾಲಿನೊಂದಿಗೆ ನಂತರದ ಸ್ಥಾನಗಳಲ್ಲಿವೆ.
"5 ಜಿ ಮತ್ತು ದೃಢವಾದ ಪ್ರೀಮಿಯಂ ಫೋನ್ಗಳ ಮಾರಾಟವು ಭಾರತದಲ್ಲಿ ಸ್ಮಾರ್ಟ್ಫೋನ್ ಮಾರುಕಟ್ಟೆಯ ಬೆಳವಣಿಗೆಯನ್ನು ತೋರಿಸಿತ್ತು. ಸುಮಾರು 58 ಪ್ರತಿಶತದಷ್ಟು 5ಜಿ ಸ್ಮಾರ್ಟ್ಪೋನ್ಗಳು ಕಡಿಮೆ ದರದಲ್ಲಿ (7,000-25,000 ರೂ.) ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡುವ ಫೋನ್ಗಳಾಗಿವೆ. ಇದು 2022ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 47 ರಷ್ಟಿತ್ತು" ಎಂದು ಸಿಎಂಆರ್ನ ಇಂಡಸ್ಟ್ರಿ ಇಂಟೆಲಿಜೆನ್ಸ್ ಗ್ರೂಪ್ನ ವಿಶ್ಲೇಷಕ ಶಿಪ್ರಾ ಸಿನ್ಹಾ ಹೇಳಿದ್ದಾರೆ.
ಇದಲ್ಲದೆ 50,000 ರೂ. ಶ್ರೇಣಿಯ ಸೂಪರ್ ಪ್ರೀಮಿಯಂ ಸ್ಮಾರ್ಟ್ಫೋನ್ ವಿಭಾಗವು 65 ಪ್ರತಿಶತದಷ್ಟು ಗಮನಾರ್ಹ ಬೆಳವಣಿಗೆ ದಾಖಲಿಸಿದೆ. "4ಜಿ ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಮುಖ್ಯವಾಗಿ ಇದು ಜಿಯೋದಿಂದ ಬಂದಿದ್ದಾಗಿದೆ" ಎಂದು ಅವರು ಹೇಳಿದರು.
ಇನ್ನು ಇಡೀ ವರ್ಷದ ಅಂಕಿ ಅಂಶಗಳನ್ನು ನೋಡಿದರೆ ಒಂದು ವರ್ಷದಲ್ಲಿ ಸ್ಮಾರ್ಟ್ಫೋನ್ ಮಾರುಕಟ್ಟೆಯು ಶೇಕಡಾ 2ರಷ್ಟು ಕುಸಿತ ದಾಖಲಿಸಿದೆ. ಮತ್ತೊಂದೆಡೆ, 5 ಜಿ ಸ್ಮಾರ್ಟ್ಫೋನ್ ಮಾರಾಟ 2023 ರಲ್ಲಿ ಶೇಕಡಾ 67ರಷ್ಟು ಹೆಚ್ಚಾಗಿದೆ. ಸ್ಯಾಮ್ಸಂಗ್ ಶೇಕಡಾ 18 ಮಾರುಕಟ್ಟೆ ಪಾಲನ್ನು ಉಳಿಸಿಕೊಂಡರೆ, ವಿವೋ 2023 ರಲ್ಲಿ ಶೇಕಡಾ 16 ರಷ್ಟು ಪಾಲನ್ನು ಹೊಂದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಜನವರಿಯಲ್ಲಿ ಎಐ, ಎಫ್ಎಂಸಿಜಿ ವಲಯದ ನೇಮಕಾತಿ ಹೆಚ್ಚಳ: ವರದಿ