ಮೈಸೂರು: ವಿಜ್ಞಾನದ ಸಂಶೋಧನೆಗಳು ಯಾರಿಗೆ ತಲುಪಬೇಕು?, ದೇಶದಲ್ಲಿ ವಿಜ್ಞಾನ ಅಧ್ಯಯನದ ಬಗ್ಗೆ ಯುವಕರೇಕೆ ಹೆಚ್ಚು ಆಸಕ್ತಿ ತೋರಬೇಕು? ಎಂಬೆಲ್ಲ ವಿಚಾರಗಳ ಕುರಿತು ಹಿರಿಯ ವಿಜ್ಞಾನಿ ಡಾ.ಟಿ.ತಿಪ್ಪೇಸ್ವಾಮಿ ಮಾತನಾಡಿದ್ದಾರೆ.
ಆಚರಣೆಯ ಹಿನ್ನೆಲೆ: ಸರ್ ಸಿ.ವಿ.ರಾಮನ್ ಅವರು ರಾಮನ್ ಎಫೆಕ್ಟ್ ಅನ್ನು ಪ್ರಪಂಚಕ್ಕೆ ಕೊಡುಗೆ ಕೊಟ್ಟ ದಿನವಿದು. ಈ ಕೊಡುಗೆಗೆ 1928ರಲ್ಲಿ ಅವರಿಗೆ ನೋಬೆಲ್ ಪ್ರಶಸ್ತಿ ಅರಸಿ ಬಂತು. ಹೀಗಾಗಿ 1986ರಲ್ಲಿ ನ್ಯಾಷನಲ್ ಟೆಕ್ನಾಲಜಿ ಫಾರ್ ಸೈನ್ಸ್ ಆ್ಯಂಡ್ ಕಮ್ಯೂನಿಕೇಶನ್ ಎಂಬ ಸ್ವಾಯತ್ತತೆ ಸಂಸ್ಥೆ ಫೆಬ್ರವರಿ 28ರಂದು ನ್ಯಾಷನಲ್ ಸೈನ್ಸ್ ಡೇ ಮಾಡಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಸರ್ಕಾರ ಅದನ್ನು ಒಪ್ಪಿ 1987 ಫೆಬ್ರವರಿ 28ರಿಂದ ವಿಜ್ಞಾನ ದಿನವನ್ನು ಆಚರಣೆ ಮಾಡಲು ಪ್ರಾರಂಭಿಸಿತು.
ವಿಜ್ಞಾನ ಮುಖ್ಯವಾಗಿ ಯಾರಿಗೆ ತಲುಪಬೇಕು?: "ನನ್ನ ಪ್ರಕಾರ, ವಿಜ್ಞಾನ ದೇಶದ ಎರಡು ಸಮುದಾಯಗಳನ್ನು ತಲುಪಬೇಕು. ಒಂದು ರೈತ ಸಮುದಾಯ, ಇನ್ನೊಂದು ವಿದ್ಯಾರ್ಥಿಗಳು. ಅವರಿಬ್ಬರನ್ನು ವಿಜ್ಞಾನ ತಲುಪಿದರೆ ಭಾರತ ಪ್ರಕರವಾಗಿ ಬೆಳವಣಿಗೆ ಹೊಂದುತ್ತದೆ. ವಿಜ್ಞಾನ ತಲುಪಬೇಕಾದವರಿಗೆ ತಲುಪಿದರೆ ಮಾತ್ರ ದೇಶ ಬೆಳವಣಿಗೆ ಆಗುತ್ತದೆ. ಯಾವುದೇ ತಾಂತ್ರಿಕತೆಯಾಗಲಿ, ಸಂಶೋಧನೆಯಯಾಗಲಿ ರೈತರಿಗೆ ಬೇಗ ತಲುಪಬೇಕು. ಯಾಕೆಂದರೆ ಅವರು ಶಾಲೆಗೆ ಹೋಗುವುದಿಲ್ಲ. ಈ ಬಗ್ಗೆ ಅವರಿಗೆ ಮಾಹಿತಿ ನೀಡಿದರೆ, ಅಗ್ರಿಕಲ್ಚರ್ ಫೀಲ್ಡ್ ಇನ್ನೂ ಮುಂದುವರೆಯಲು ಅನುಕೂಲ ಆಗುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಈ ಬಗ್ಗೆ ತಿಳಿದುಕೊಂಡಂತೆ ಆಗುತ್ತದೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮನೋಭಾವನೆಯನ್ನು ಹೆಚ್ಚಿಸುವ ಉದ್ದೇಶದಿಂದ ಶಾಲೆಗಳಿಗೆ ಪರಿಣತರನ್ನು ಕಳುಹಿಸಿ ಸೂಕ್ತ ಮಾರ್ಗದರ್ಶನ ನೀಡಬೇಕಾಗುತ್ತದೆ."
ಮಕ್ಕಳಿಗೆ ವಿಜ್ಞಾನ ತಾಣಗಳ ಬಗ್ಗೆ ತಿಳಿಸಿಕೊಡಬೇಕು: "ಮಕ್ಕಳಿಗೆ ವಿಜ್ಞಾನದ ಬಗ್ಗೆ ಹೆಚ್ಚು ಮಾಹಿತಿ ನೀಡುವಂತದ್ದು, ನಿವೃತ್ತ ವಿಜ್ಞಾನಿಗಳು ಸೂಕ್ತ ಮಾಹಿತಿಯನ್ನು ಮಕ್ಕಳಿಗೆ ನೀಡುವಂತಹದ್ದು, ಮಕ್ಕಳನ್ನು ವಿಜ್ಞಾನ ತಾಣಗಳಿಗೆ, ಸಂಗ್ರಹಾಲಯಗಳಿಗೆ, ನೆಹರೂ ತಾರಾಲಯ ಹಾಗೂ ಇಸ್ರೋ ಸೇರಿದಂತೆ ವಿಜ್ಞಾನದ ಕೇಂದ್ರಗಳಿಗೆ ಕರೆದುಕೊಂಡು ಹೋಗುವುದು. ಅವರಿಗೆ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಸಮ್ಮರ್ ಕ್ಯಾಂಪ್ ಬದಲು ವಿಜ್ಞಾನದ ಕ್ಯಾಂಪ್ ಮಾಡಬೇಕು. ವಿಜ್ಞಾನ ಜೀವನದ ದಾರಿಯೂ ಆಗಿದೆ" ಎಂದು ಅವರು ಹೇಳಿದರು.
ಭಾರತೀಯರು ಶಿಸ್ತು, ಸಂಯಮ ಬೆಳೆಸಿಕೊಳ್ಳಬೇಕು: "ನಮ್ಮ ದೇಶ ವಿಜ್ಞಾನ ಕ್ಷೇತ್ರದಲ್ಲಿ ವಿಶೇಷ ಸ್ಥಾನಮಾನ ಹೊಂದಿದೆ. ಅದು ನಮ್ಮ ಹೆಮ್ಮೆ. ಆದರೆ ನಮ್ಮಲ್ಲಿ ಕೆಲವೊಂದಿಷ್ಟು ಕೊರತೆಗಳಿವೆ. ನಾವು ಬೇರೆ ದೇಶಗಳಿಗೆ ಹೋದರೆ ಭಾರತೀಯ ಎಂದು ಗೌರವ ನೀಡುತ್ತಾರೆ. ಆದರೆ ನಾವು ಮುಖ್ಯವಾಗಿ ಡಿಸಿಪ್ಲಿನ್ ಕಲಿತುಕೊಳ್ಳಬೇಕು. ಭಾರತೀಯರು ಮುಖ್ಯವಾಗಿ ಶಿಸ್ತು ಸಂಯಮವನ್ನು ಕಲಿಯಬೇಕು. ವಿದ್ಯಾರ್ಥಿ ದೆಸೆಯಿಂದಲೇ ಇವುಗಳನ್ನು ಕಲಿತರೆ, ಮುಂದೆ ಒಳ್ಳೆಯ ಪ್ರಜೆಗಳಾಗುತ್ತಾರೆ" ಎಂದು ಸಲಹೆ ನೀಡಿದರು.
ವಿಜ್ಞಾನದೆಡೆ ಭಾರತೀಯರ ಆಸಕ್ತಿ ಕಡಿಮೆಯಾಗುತ್ತಿದೆ: "ವಿಜ್ಞಾನದ ಕಡೆಗೆ ಈಗಿನ ವಿದ್ಯಾರ್ಥಿಗಳು ಆಸಕ್ತಿ ತೋರಬೇಕು. ಇತ್ತೀಚೆಗೆ ವಿಜ್ಞಾನದ ಕಡೆ ಬರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಜಪಾನ್, ರಷ್ಯಾ ತುಂಬಾ ಮುಂದುವರಿದಿದೆ. ನಮ್ಮ ದೇಶದಲ್ಲಿ ಉತ್ತರ ಭಾರತದವರು ಹೆಚ್ಚಾಗಿ ವಿಜ್ಞಾನದಲ್ಲಿ ಪರಿಣಿತರಾಗುತ್ತಿದ್ದಾರೆ. ನಮ್ಮ ದಕ್ಷಿಣ ಭಾರತದವರು ಈ ಬಗ್ಗೆ ಗಮನ ಕೊಡಬೇಕು, ಆಸಕ್ತಿ ತೋರಬೇಕು. ಎಷ್ಟೆಲ್ಲಾ ಅವಕಾಶಗಳಿವೆ ಈಗಿನ ವಿಜ್ಞಾನದಲ್ಲಿ ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಹೊರ ದೇಶದಿಂದ ಬಂದ ವಿಜ್ಞಾನಗಳಿಗೆ ಫೆಲೋಶಿಪ್ ಕೊಡುತ್ತಾರೆ. ನಮ್ಮಲ್ಲಿ ವಿಜ್ಞಾನಿಗಳ ಸಂಖ್ಯೆ ಕಡಿಮೆ ಇದೆ. ಕೇವಲ ದುಡ್ಡಿನ ಆಸೆಗೋಸ್ಕರ ಬೇರೆ ದೇಶಕ್ಕೆ ಹೋಗಬಾರದು. ಬೇರೆ ದೇಶಗಳ ಪ್ರಜೆಗಳಿಗೆ ಹೋಲಿಸಿದರೆ ಭಾರತೀಯರು ತುಂಬಾ ಬುದ್ಧಿವಂತರು. ಹಾರ್ಡ್ವರ್ಕ್ನಲ್ಲೂ ಸಹ ಭಾರತೀಯರೇ ಮುಂದು. ಈ ವಿಷಯದಲ್ಲಿ ಯಾರಿಗೂ ಹೊಂದಾಣಿಕೆ ಮಾಡಲು ಸಾಧ್ಯವಿಲ್ಲ. ಭಾರತೀಯರು ರಾಕ್ಷಸನ ಥರ ಕೆಲಸ ಮಾಡುತ್ತಾರೆ. ಬೆಳಗ್ಗೆ ರಾತ್ರಿಯೆನ್ನದೇ ದುಡಿಯುತ್ತಾರೆ" ಎಂದು ವಿವರಿಸಿದರು.
"ನ್ಯಾಚುರಲ್ ಸೈನ್ಸ್ಗೆ ಈಗ ಬಹಳಷ್ಟು ಸ್ಕೋಪ್ ಇದೆ. ಅದನ್ನು ಸರಿಯಾಗಿ ಈಗಿನ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಕೇವಲ ಜಾಬ್ ಓರಿಯೆಂಟೆಡ್ ಆಗಿಯೇ ಎಲ್ಲವನ್ನೂ ಯೋಚಿಸಬಾರದು. ಸಮಾಜಮುಖಿ ಕೆಲಸಗಳನ್ನು ಸಹ ಗಮನದಲ್ಲಿಟ್ಟುಕೊಳ್ಳಬೇಕು. ದೇಶಕ್ಕೆ ನಮ್ಮದೇ ಆದ ಕೊಡುಗೆ ನೀಡಬೇಕು" ಎಂದರು.
ಇಂದಿನ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸಬೇಕು: "ನಾವು ಮುಂದಿನ ಪೀಳಿಗೆಗೆ ಮಾರಲ್ ಸೈನ್ಸ್ ಬಗ್ಗೆ ಸರಿಯಾದ ಮಾರ್ಗದರ್ಶನವನ್ನು ನೀಡಬೇಕು. ನಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಸೈನ್ಸ್ ಬಗ್ಗೆ ಅರಿವು ಮೂಡಿಸಿ ಅದರ ಬಗ್ಗೆ ತಿಳಿಸಿ, ಅವರು ಆ ದಾರಿಯನ್ನು ಅನುಸರಿಸಿದಾಗ ಮಾತ್ರ ಈ ಸೈನ್ಸ್ ಡೇ ಆಚರಣೆಗೆ ಒಂದು ಅರ್ಥ ಬರುತ್ತದೆ. ಇರುವುದನ್ನೇ ಎಕ್ಸಪರಿಮೆಂಟ್ ಮಾಡುವುದಲ್ಲ. ಹೊಸ ತರಹದ ಪ್ರಯೋಗಗಳನ್ನು ಮಕ್ಕಳಿಗೆ ಪರಿಚಯ ಮಾಡಿಸಬೇಕು. ಇನೋವೇಟಿವ್ ಆಗಿ, ಮಕ್ಕಳಿಗೆ ಪರಿಸರ ಮಾಲಿನ್ಯದ ಬಗ್ಗೆಯೂ ಅರಿವು ಮೂಡಿಸಬೇಕು. ಪರಿಸರಸ್ನೇಹಿಯಾಗಿ ಅವರನ್ನು ಬೆಳೆಸಬೇಕು" ಎಂದು ಹಿರಿಯ ವಿಜ್ಞಾನಿ ಡಾ.ಟಿ.ತಿಪ್ಪೇಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: ಹಾವೇರಿ: ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಾರ್ವಜನಿಕರ ವೀಕ್ಷಣೆಗೆ ಮುಕ್ತ