ನವದೆಹಲಿ: ಟ್ರೈನೈಟ್ರೊ ಟಾಲೀನ್ಗಿಂತ (ಟಿಎನ್ಟಿ) ಹೆಚ್ಚು ಶಕ್ತಿಶಾಲಿಯಾದ ಹೊಸ ಸ್ಫೋಟಕವನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಸೆಬೆಕ್ಸ್ 2 (SEBEX 2) ಎಂದು ಕರೆಯಲ್ಪಡುವ ಈ ದೇಶೀಯವಾಗಿ ತಯಾರಿಸಿದ ಸ್ಫೋಟಕವು ಭಾರತೀಯ ನೌಕಾಪಡೆ ನಡೆಸಿದ ಪ್ರಮಾಣೀಕರಣ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗಿದೆ.
"ಮೇಕ್ ಇನ್ ಇಂಡಿಯಾ" ಉಪಕ್ರಮದ ಅಡಿಯಲ್ಲಿ ಸೋಲಾರ್ ಇಂಡಸ್ಟ್ರೀಸ್ ಕಂಪನಿಯ ಅಂಗಸಂಸ್ಥೆಯಾದ ನಾಗ್ಪುರದ ಎಕನಾಮಿಕ್ ಎಕ್ಸ್ಪ್ಲೋಸಿವ್ಸ್ ಲಿಮಿಟೆಡ್ (ಇಇಎಲ್) ಅಭಿವೃದ್ಧಿಪಡಿಸಿದ ಸೆಬೆಕ್ಸ್ 2 ಸ್ಫೋಟಕವು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ಪರಿಣಾಮಕಾರಿತ್ವ ಮತ್ತು ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಭಾರತೀಯ ನೌಕಾಪಡೆಯಿಂದ ಪ್ರಮಾಣೀಕರಿಸಲ್ಪಟ್ಟ ಈ ಉನ್ನತ ಕಾರ್ಯಕ್ಷಮತೆಯ ಸ್ಫೋಟಕವು ವಿಶ್ವದ ಅತ್ಯಂತ ಶಕ್ತಿಶಾಲಿ ಪರಮಾಣು ರಹಿತ ಸ್ಫೋಟಕಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ. ಸ್ಟ್ಯಾಂಡರ್ಡ್ ಟಿಎನ್ಟಿಗಿಂತ ಸರಿಸುಮಾರು 2.01 ಪಟ್ಟು ಮಾರಕತೆಯನ್ನು ಹೊಂದಿರುವ ಇದು, ಬಾಂಬ್ಗಳು, ಫಿರಂಗಿ ಶೆಲ್ಗಳು ಮತ್ತು ಸಿಡಿತಲೆಗಳ ಸ್ಪೋಟಕ ಶಕ್ತಿಯನ್ನು ವಿನಾಶಕಾರಿ ಮಟ್ಟಕ್ಕೆ ಹೆಚ್ಚಿಸಲಿದೆ. ಅಲ್ಲದೆ ಇದು ಹಗುರವಾಗಿರುವುದರಿಂದ ಶಸ್ತ್ರಾಸ್ತ್ರಗಳಿಗೆ ಹೆಚ್ಚಿನ ಭಾರ ಹೊರಿಸುವುದಿಲ್ಲ. ಇನ್ನು ಈ ಸ್ಪೋಟಕವು ಅಪಾರ ರಫ್ತು ಮೌಲ್ಯವನ್ನು ಸಹ ಪಡೆಯಲಿದೆ.
ಸ್ಫೋಟಕಗಳ ಕಾರ್ಯಕ್ಷಮತೆಯನ್ನು ಸಾಮಾನ್ಯವಾಗಿ ಟಿಎನ್ಟಿಯ ಸಾಮರ್ಥ್ಯಕ್ಕೆ ಹೋಲಿಸಿ ಅಳೆಯಲಾಗುತ್ತದೆ. ಹೆಚ್ಚಿನ ಮೌಲ್ಯಗಳು ಹೆಚ್ಚಿನ ಮಾರಕತೆಯನ್ನು ಸೂಚಿಸುತ್ತವೆ. ಬ್ರಹ್ಮೋಸ್ ಸಿಡಿತಲೆಯಲ್ಲಿ ಭಾರತದಲ್ಲಿ ಪ್ರಸ್ತುತ ಬಳಸಲಾಗುವ ಅತ್ಯಂತ ಪ್ರಬಲ ಸಾಂಪ್ರದಾಯಿಕ ಸ್ಫೋಟಕವು ಸುಮಾರು 1.50 ಟಿಎನ್ಟಿ ಸಮಾನತೆಯನ್ನು ಹೊಂದಿದೆ. ಇದಕ್ಕೆ ವ್ಯತಿರಿಕ್ತವಾಗಿ, ಹೊಸ ಸೆಬೆಕ್ಸ್ 2 ಟಿಎನ್ಟಿ 2.01 ಸಮಾನತೆಯನ್ನು ಹೊಂದಿದೆ. ಇದು ವಿಶ್ವಾದ್ಯಂತ ಸಾಂಪ್ರದಾಯಿಕ ಸಿಡಿತಲೆಗಳಲ್ಲಿ ಬಳಸುವ ಹೆಚ್ಚಿನ ಸ್ಫೋಟಕಗಳಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಸಾಂಪ್ರದಾಯಿಕ ಸಿಡಿತಲೆಗಳಲ್ಲಿ ಬಳಸುವ ಹೆಚ್ಚಿನ ಸ್ಫೋಟಕಗಳ ಟಿಎನ್ಟಿ ಸಮಾನತೆ ಸಾಮಾನ್ಯವಾಗಿ 1.25 ರಿಂದ 1.30 ರವರೆಗೆ ಇರುತ್ತದೆ.
ಇದು ಮಾತ್ರವಲ್ಲದೆ ಎಕನಾಮಿಕ್ ಎಕ್ಸ್ಪ್ಲೋಸಿವ್ಸ್ ಲಿಮಿಟೆಡ್ ಕಂಪನಿಯ ಮೊದಲ ಥರ್ಮೋಬಾರಿಕ್ ಸ್ಫೋಟಕವಾದ ಎಸ್ಐಟಿಬಿಇಎಕ್ಸ್ 1 (SITBEX 1) ಅನ್ನು ಕೂಡ ನೌಕಾಪಡೆ ಪ್ರಮಾಣೀಕರಿಸಿದೆ. ಇತ್ತೀಚಿನ ಸಂಘರ್ಷಗಳಲ್ಲಿ ಯುದ್ಧಭೂಮಿಯಲ್ಲಿ ವ್ಯಾಪಕವಾದ ಹಾನಿಯನ್ನು ಸೃಷ್ಟಿಸಲು SITBEX 1 ಅನ್ನು ಬಳಸಲಾಗಿದೆ. SITBEX 1 ನ ದೀರ್ಘಕಾಲದ ಸ್ಫೋಟದ ಅವಧಿಯನ್ನು ಹೊಂದಿದ್ದು, ತೀವ್ರ ಶಾಖದ ಉತ್ಪಾದನೆಯ ಮೂಲಕ ಶತ್ರುಗಳ ಬಂಕರ್ಗಳು, ಸುರಂಗಗಳು ಮತ್ತು ಇತರ ನೆಲೆಗಳನ್ನು ನಾಶಪಡಿಸಲು ಸೂಕ್ತವಾಗಿದೆ.
ಕಂಪನಿ ತಯಾರಿಸಿದ ಮತ್ತೊಂದು ಸ್ಫೋಟಕ ಸಿಮೆಕ್ಸ್ 4 ಸಹ ನೌಕಾಪಡೆಯಿಂದ ಪ್ರಮಾಣೀಕರಣವನ್ನು ಪಡೆದಿದೆ. ಸಿಮೆಕ್ಸ್ 4 ಸಂವೇದನಾರಹಿತ ಶಸ್ತ್ರಾಸ್ತ್ರವಾಗಿದ್ದು, ಪ್ರಮಾಣಿತ ಸ್ಫೋಟಕಗಳಿಗೆ ಹೋಲಿಸಿದರೆ ಸಂಗ್ರಹಿಸಲು, ಸಾಗಿಸಲು ಮತ್ತು ಕಾರ್ಯನಿರ್ವಹಿಸಲು ಸುರಕ್ಷಿತವಾಗಿದೆ. ಈ ಬೆಳವಣಿಗೆಗಳು ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳ ಅಭಿವೃದ್ಧಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ತನ್ನ ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸುವ ಭಾರತದ ಬದ್ಧತೆಯನ್ನು ಎತ್ತಿ ತೋರಿಸುತ್ತವೆ.
ಇದನ್ನೂ ಓದಿ: ಸಣ್ಣ ರೈತರಿಗಾಗಿ ಕಡಿಮೆ ಬೆಲೆಯ ಕಾಂಪ್ಯಾಕ್ಟ್ ಟ್ರ್ಯಾಕ್ಟರ್ ತಯಾರಿಸಿದ ಸಿಎಸ್ಐಆರ್ - Low Cost Compact Tractor