ಪುಣೆ : ಭಾರತದ ವಿಡಿಯೋ ಗೇಮಿಂಗ್ ವಲಯವು ಗಮನಾರ್ಹ ಬೆಳವಣಿಗೆಗೆ ಸಜ್ಜಾಗಿರುವ ಮಧ್ಯೆ ಇ ಸ್ಪೋರ್ಟ್ಸ್ ಮತ್ತು ಗೇಮ್ ಡೆವಲಪ್ಮೆಂಟ್ ಉದ್ಯಮದಲ್ಲಿ ದೇಶದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು ಎಂದು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ತಜ್ಞರು ಹೇಳಿದ್ದಾರೆ. "ಬೌದ್ಧಿಕ ಆಸ್ತಿಯ ಬೆಳವಣಿಗೆಯಲ್ಲಿ ಹೊಸ ಮಾರ್ಗಗಳನ್ನು ರೂಪಿಸಲು ಭಾರತಕ್ಕೆ ಅಪಾರ ಸಾಮರ್ಥ್ಯವಿದೆ. ಇದು ಇ - ಸ್ಪೋರ್ಟ್ಸ್ ಮತ್ತು ಗೇಮಿಂಗ್ ಡೆವಲಪ್ಮೆಂಟ್ ನಲ್ಲಿ ಹೆಚ್ಚಿನ ಉದ್ಯೋಗಗಳ ಸೃಷ್ಟಿಗೆ ದಾರಿ ಮಾಡಿಕೊಡುತ್ತದೆ" ಎಂದು ಸಿಐಐ ಅಧ್ಯಕ್ಷ ಆರ್ ದಿನೇಶ್ ಇತ್ತೀಚೆಗೆ ಪುಣೆಯಲ್ಲಿ ಮುಕ್ತಾಯಗೊಂಡ ಇಂಡಿಯಾ ಗೇಮಿಂಗ್ ಶೋನಲ್ಲಿ ಹೇಳಿದರು.
ಬೆಳೆಯುತ್ತಿರುವ ಈ ಕ್ಷೇತ್ರದ ಮಹತ್ವವನ್ನು ದಿನೇಶ್ ಒತ್ತಿಹೇಳಿದರು ಮತ್ತು ಮುಂಬರುವ ವರ್ಷಗಳಲ್ಲಿ ಈ ವಲಯದಲ್ಲಿ ಅಗಾಧ ಬೆಳವಣಿಗೆಯಾಗಲಿದೆ ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ರಂಗಗಳಲ್ಲಿ ವಿಡಿಯೋ ಗೇಮ್ ಮತ್ತು ಇ- ಸ್ಪೋರ್ಟ್ಸ್ ಕ್ಷೇತ್ರದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಅವರು ಪ್ರತಿಪಾದಿಸಿದರು.
ಇಂಡಿಯಾ ಗೇಮಿಂಗ್ ಶೋನ ಆರನೇ ಆವೃತ್ತಿಯಲ್ಲಿ 10 ದೇಶಗಳನ್ನು ಪ್ರತಿನಿಧಿಸುವ 70 ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿದ್ದರು. ಇಂಡೋನೇಷ್ಯಾ ಅತಿಥಿ ದೇಶವಾಗಿ ಇಂಡಿಯಾ ಗೇಮಿಂಗ್ ಶೋನಲ್ಲಿ ಇದೇ ಪ್ರಥಮ ಬಾರಿಗೆ ಪದಾರ್ಪಣೆ ಮಾಡಿತು.
ಪ್ರಸ್ತುತ ಶೇಕಡಾ 1 ಕ್ಕಿಂತ ಕಡಿಮೆ ಮಾರುಕಟ್ಟೆ ಪಾಲು ಹೊಂದಿದ್ದರೂ, ಭಾರತದ ಗೇಮಿಂಗ್ ವಲಯವು ಅಪಾರ ವಿಸ್ತರಣಾ ಸಾಮರ್ಥ್ಯ ಹೊಂದಿದೆ. ಇದು ಪಿಸಿ, ಮೊಬೈಲ್ ಮತ್ತು ಕನ್ಸೋಲ್ ಗೇಮಿಂಗ್ನಲ್ಲಿ ಚಾಲ್ತಿಯಲ್ಲಿರುವ ಪ್ರವೃತ್ತಿಗಳಿಂದ ಪ್ರೇರಿತವಾಗಿದೆ. ಜಾಗತಿಕ ಮತ್ತು ದೇಶೀಯ ಉತ್ಪನ್ನಗಳು ಜಾಗತಿಕ ಮನ್ನಣೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಸೂಕ್ತವಾದ ಗೇಮ್ಗಳ ಅಭಿವೃದ್ಧಿಯನ್ನು ಮುನ್ನಡೆಸಲು ಭಾರತಕ್ಕೆ ಅನನ್ಯ ಅವಕಾಶವಿದೆ ಎಂದು ಸಿಐಐ ಅಧ್ಯಕ್ಷ ದಿನೇಶ್ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಐಐ ಮಹಾನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ, ಮುಖ್ಯವಾಗಿ ಬೆಳೆಯುತ್ತಿರುವ ಗೇಮಿಂಗ್ ವಲಯಕ್ಕೆ ಜವಾಬ್ದಾರಿಯುತ ನೀತಿ ನಿಯಮಾವಳಿಗಳನ್ನು ರೂಪಿಸುವುದು ಅಗತ್ಯವಿದೆ ಎಂದು ಹೇಳಿದರು. ಜನರಿಗೆ ಶಿಕ್ಷಣ ನೀಡಲು ಮತ್ತು ನೈತಿಕ ಬಳಕೆಯನ್ನು ಉತ್ತೇಜಿಸಲು ಜವಾಬ್ದಾರಿಯುತ ಗೇಮಿಂಗ್ ಅಭ್ಯಾಸಗಳನ್ನು ಬೆಳೆಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಗೇಮಿಂಗ್ ಕ್ಷೇತ್ರದಲ್ಲಿ ಪ್ರತಿಭಾವಂತರ ಸಂಖ್ಯೆಯನ್ನು ಹೆಚ್ಚಿಸಲು ಉದ್ಯಮದಲ್ಲಿ ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಯ ಮಹತ್ವವನ್ನು ಬ್ಯಾನರ್ಜಿ ಎತ್ತಿ ತೋರಿಸಿದರು.
ಇದನ್ನೂ ಓದಿ : ಮೊಮ್ಮಗನಿಗೆ 240 ಕೋಟಿ ರೂ. ಮೌಲ್ಯದ ಷೇರು ಉಡುಗೊರೆ ನೀಡಿದ ಇನ್ಪೋಸಿಸ್ ನಾರಾಯಣಮೂರ್ತಿ