ನವದೆಹಲಿ: ಸ್ಯಾಮ್ ಸಂಗ್ ಸೆಮಿಕಂಡಕ್ಟರ್ ಇಂಡಿಯಾ ರಿಸರ್ಚ್ (ಎಸ್ಎಸ್ಐಆರ್) ಸಂಸ್ಥೆಯು ದೇಶದಲ್ಲಿ ತನ್ನ ಹೊಸ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ &ಡಿ) ಕೇಂದ್ರವನ್ನು ಆರಂಭಿಸಿರುವುದಾಗಿ ಗುರುವಾರ ಘೋಷಿಸಿದೆ. ಇದು ಬೆಂಗಳೂರಿನಲ್ಲಿ ಎಸ್ಎಸ್ಐಆರ್ ನ ಎರಡನೇ ಕಚೇರಿಯಾಗಿದ್ದು, ಸುಮಾರು 1,600 ಉದ್ಯೋಗಿಗಳು ಕೆಲಸ ಮಾಡುವಷ್ಟು ಸ್ಥಳಾವಕಾಶ ಈ ಕೇಂದ್ರದಲ್ಲಿದೆ. ಬೆಂಗಳೂರಿನ ಬಾಗಮಾನೆ ಟೆಕ್ ಪಾರ್ಕ್ನ ಅಂಕೋರ್-ವೆಸ್ಟ್ ದಿಕ್ಕಿನಲ್ಲಿರುವ ಈ ಕೇಂದ್ರವು ನಾಲ್ಕು ಮಹಡಿಗಳಲ್ಲಿ 1,60,000 ಚದರ ಅಡಿಗಳಷ್ಟು ವ್ಯಾಪಿಸಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
"ಹೊಸ ಸಂಶೋಧನಾ ಕೇಂದ್ರವು ಭಾರತದಲ್ಲಿ ನಮ್ಮ ಹೆಜ್ಜೆಗುರುತನ್ನು ವಿಸ್ತರಿಸುವ ನಮ್ಮ ಬದ್ಧತೆಯನ್ನು ಸಾಕಾರಗೊಳಿಸುತ್ತದೆ" ಎಂದು ಎಸ್ಎಸ್ಐಆರ್ ನ ಇವಿಪಿ ಮತ್ತು ಎಂಡಿ ಬಾಲಾಜಿ ಸೌರಿರಾಜನ್ ಹೇಳಿದರು. ಎಸ್ಎಸ್ಐಆರ್ ಪ್ರಸ್ತುತ 4,500 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಈಗ ಮತ್ತೆ 700 ಹೊಸ ಪದವೀಧರರನ್ನು ಕಂಪನಿ ಇಲ್ಲಿಗೆ ನೇಮಿಸಿಕೊಳ್ಳಲಿದೆ.
ಈ ಪ್ರಯೋಗಾಲಯವು ತಾಂತ್ರಿಕ ನಾವೀನ್ಯತೆ, ಮಾನವಶಕ್ತಿ ತರಬೇತಿ ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ವಾಂಟಮ್ ಸಂಶೋಧನಾ ಸಂಸ್ಥೆಗಳ ಸಹಯೋಗದ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ತಿಳಿಸಿದೆ.
ಇತ್ತೀಚೆಗೆ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಆರಂಭಿಸಿದ ಕ್ವಾಂಟಮ್ ಟೆಕ್ನಾಲಜಿ ಲ್ಯಾಬ್ ಸ್ಥಾಪನೆಗೆ ಸ್ಯಾಮ್ ಸಂಗ್ ಸೆಮಿಕಂಡಕ್ಟರ್ ಇಂಡಿಯಾ ರಿಸರ್ಚ್ ಸಂಸ್ಥೆಯು ಕೈಜೋಡಿಸಿರುವುದು ಗಮನಾರ್ಹ. ಕ್ವಾಂಟಮ್ ಟೆಕ್ನಾಲಜಿ ಲ್ಯಾಬ್ ಕ್ರಯೋಜೆನಿಕ್ ಕಂಟ್ರೋಲ್ ಚಿಪ್ ಅನ್ನು ಕ್ಯೂಬಿಟ್ ಗಳು, ಸಿಂಗಲ್ ಫೋಟಾನ್ ಮೂಲಗಳು ಮತ್ತು ಡಿಟೆಕ್ಟರ್ ಗಳೊಂದಿಗೆ ಸಂಯೋಜಿಸುತ್ತದೆ ಮತ್ತು ಕ್ವಾಂಟಮ್ ತಂತ್ರಜ್ಞಾನಗಳಲ್ಲಿ ವಿಶ್ವಾಸಾರ್ಹತೆಯ ಸಮಸ್ಯೆಗಳನ್ನು ಪರಿಹರಿಸುತ್ತದೆ.
ಸ್ಯಾಮ್ಸಂಗ್ ಅಧ್ಯಕ್ಷರನ್ನು ಭೇಟಿಯಾದ ಜುಕರ್ ಬರ್ಗ್: ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್ ಬರ್ಗ್ ಬುಧವಾರ ಸ್ಯಾಮ್ ಸಂಗ್ ಕಂಪನಿಯ ಅಧ್ಯಕ್ಷ ಲೀ ಜೇ-ಯಾಂಗ್ ಮತ್ತು ಎಲ್ಜಿ ಕಂಪನಿಯ ಸಿಇಒ ಚೋ ಜೂ-ವಾನ್ ಅವರನ್ನು ಸಿಯೋಲ್ನಲ್ಲಿ ಭೇಟಿಯಾಗಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ವಿಸ್ತರಿತ ರಿಯಾಲಿಟಿ (ಎಕ್ಸ್ಆರ್) ಕ್ಷೇತ್ರಗಳಲ್ಲಿ ಕಾರ್ಪೊರೇಟ್ ಸಹಯೋಗವನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು. ಮಾರ್ಕ್ ಜುಕರ್ ಬರ್ಗ್ ಸಿಯೋಲ್ ನಲ್ಲಿ ದಕ್ಷಿಣ ಕೊರಿಯಾದ ಚೋ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಭೋಜನಕೂಟ ನಡೆಸಿದರು ಎಂದು ಎಲ್ಜಿ ಎಲೆಕ್ಟ್ರಾನಿಕ್ಸ್ ನ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ : ಭಾರತದ ಗಗನಯಾತ್ರಿಗಳಿಗೆ 'ವ್ಯೋಮನೌಟ್ಸ್' ನಾಮಕರಣ: ಯಾಕೆ ಗೊತ್ತಾ?