Secret Drone Project: ರಷ್ಯಾ ತನ್ನ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಚೀನಾಕ್ಕೆ ವರ್ಗಾಯಿಸುತ್ತಿದೆಯೇ ಎಂಬ ಅನುಮಾನ ಬಲಗೊಳ್ಳುತ್ತಿವೆ. ಇತ್ತೀಚೆಗೆ, ಯುರೋಪಿಯನ್ ಗುಪ್ತಚರ ಮೂಲಗಳು ಚೀನಾದಲ್ಲಿ ರಷ್ಯಾ ಅತ್ಯಾಧುನಿಕ ಡ್ರೋನ್ ಉತ್ಪಾದನಾ ಯೋಜನೆಯನ್ನು ಸ್ಥಾಪಿಸಿದೆ ಎಂದು ಹೇಳಿವೆ. ಈ ವಿಚಾರವನ್ನು ಆಂಗ್ಲ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ.
ರಷ್ಯಾದ ಸರ್ಕಾರಿ ಸ್ವಾಮ್ಯದ ಅಲ್ಮಾಜ್-ಆಂಟೆಯ ಅಂಗಸಂಸ್ಥೆಯಾದ IEMZ ಕುಪೋಲ್, ಇತ್ತೀಚೆಗೆ ಚೀನಾದಲ್ಲಿ ತನ್ನ ಇತ್ತೀಚಿನ ಮಾದರಿ ಗಾರ್ಪಿಯಾ-3 ಡ್ರೋನ್ ಪರೀಕ್ಷಿಸಿದೆ. ಇದಕ್ಕೆ ಸ್ಥಳೀಯ ತಜ್ಞರೂ ಕೊಡುಗೆ ನೀಡಿದ್ದಾರೆ. ನಂತರ, ಕುಪೋಲ್ ಕಂಪನಿಯು ಈ ಹೊಸ ಡ್ರೋನ್‌ಗಳನ್ನು ಚೀನಾದ ಕಾರ್ಖಾನೆಯಲ್ಲಿ ಉತ್ಪಾದಿಸುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯಕ್ಕೆ ತಿಳಿಸಿದೆ. ಉಕ್ರೇನ್ ವಿರುದ್ಧದ ಇತ್ತೀಚಿನ ಕಾರ್ಯಾಚರಣೆಯಲ್ಲಿ ರಷ್ಯಾ ಹೊಸ ಅಸ್ತ್ರವನ್ನು ಬಳಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇಂತಹ ಯೋಜನೆಯ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ. ಡ್ರೋನ್‌ಗಳು ಮತ್ತು ಮಾನವರಹಿತ ವೈಮಾನಿಕ ವಾಹನಗಳ ಮಾರಾಟದ ವಿಚಾರದಲ್ಲಿ ಬೀಜಿಂಗ್ ಕಟ್ಟುನಿಟ್ಟಾದ ರಫ್ತು ಕಾರ್ಯವಿಧಾನಗಳನ್ನು ಅನುಸರಿಸುತ್ತಿದೆ ಎಂದು ಅದು ಹೇಳಿದೆ.
ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿ, ಡ್ರೋನ್ ಕಾರ್ಯಕ್ರಮದ ಬಗ್ಗೆ ಸುದ್ದಿ "ಚಿಂತನೀಯ" ಎಂದಿದೆ. ನಿರ್ಬಂಧಗಳನ್ನು ಎದುರಿಸುತ್ತಿರುವ ರಷ್ಯಾದ ಕಂಪನಿಗಳಿಗೆ ಚೀನಾ ಸಹಕರಿಸುತ್ತಿದೆ ಎಂದು ಆರೋಪಿಸಿದೆ.
G3 ಡ್ರೋನ್‌ಗಳು 2,000 ಕಿಲೋಮೀಟರ್‌ಗಳವರೆಗೆ ಹಾರಬಲ್ಲವು. 50 ಕೆ.ಜಿ ಸಿಡಿತಲೆಯಿಂದ ಶತ್ರುಗಳ ಮೇಲೆ ದಾಳಿ ಮಾಡಬಹುದು. ಡ್ರೋನ್ ಮಾದರಿಗಳು ಈಗಾಗಲೇ ಚೀನಾದಿಂದ ರಷ್ಯಾ ತಲುಪಿವೆ ಎನ್ನಲಾಗಿದೆ. ಇದಕ್ಕೆ ಪುರಾವೆ ಎಂದು ನಂಬಲಾದ ಐದು ದಾಖಲೆಗಳೂ ಸಹ ರಷ್ಯಾ ಸೇರಿವೆ. ಚೀನಾದ ತಜ್ಞರು G1 ಡ್ರೋನ್‌ಗಳ ಬ್ಲೂಪ್ರಿಂಟ್‌ಗಳ ಆಧಾರದ ಮೇಲೆ G3 ಮಾದರಿಯನ್ನು ಮಾರ್ಪಡಿಸಿದ್ದಾರೆ ಎಂದು ಹೇಳಲಾಗಿದೆ.
ಇದಕ್ಕೂ ಮೇಲಾಗಿ, ಕಶ್ಗರ್ ವಿಶೇಷ ಆರ್ಥಿಕ ವಲಯದಲ್ಲಿ ಕುಪೋಲ್, ಟಿಎಸ್‌ಕೆ ವೆಕ್ಟಾರೊ ಮತ್ತು ರೆಡ್ಲೆಪಸ್ ಕಂಪನಿಗಳು ಜಂಟಿಯಾಗಿ ರಷ್ಯಾ-ಚೀನಾ ಡ್ರೋನ್ ಸಂಶೋಧನಾ ಕೇಂದ್ರ ಸ್ಥಾಪಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ದೊರೆತಿದೆ.
ಇದನ್ನೂ ಓದಿ: ಇದೇ ಮೊದಲ ಬಾರಿಗೆ ದೇಶದಲ್ಲಿ ಓಡಲಿದೆ ಏರ್ ಟ್ರೈನ್: ಏನಿದರ ವಿಶೇಷತೆ, ಉದ್ದೇಶ? - Air Train