ನವದೆಹಲಿ: ಅಮೆರಿಕ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿ ಹಬಲ್ ನೆಟ್ ವರ್ಕ್ ಇದೇ ಪ್ರಥಮ ಬಾರಿಗೆ 600 ಕಿಲೋಮೀಟರ್ ದೂರದಲ್ಲಿರುವ ಉಪಗ್ರಹದೊಂದಿಗೆ ನೇರವಾಗಿ ಬ್ಲೂಟೂತ್ ಮೂಲಕ ಸಂಪರ್ಕ ಸ್ಥಾಪಿಸಿದೆ. ಈ ಆವಿಷ್ಕಾರದಿಂದ ದೂರ ದೂರದಲ್ಲಿರುವ ಕೋಟ್ಯಂತರ ಸಾಧನಗಳನ್ನು ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದಾದ ಸಾಧ್ಯತೆಗಳು ಹೆಚ್ಚಾಗಿವೆ.
ಸಿಯಾಟಲ್ ಮೂಲದ ಸ್ಟಾರ್ಟ್ಅಪ್ ಆಗಿರುವ ಹಬಲ್ ನೆಟ್ ವರ್ಕ್ಗೆ ಟ್ರಾನ್ಸ್ಪೋಸ್ ಪ್ಲಾಟ್ಫಾರ್ಮ್ ಮತ್ತು ವೈ ಕಂಬೈನೇಟರ್ಳಿಂದ 20 ಮಿಲಿಯನ್ ಡಾಲರ್ ಸ್ಟಾರ್ಟ್ಅಪ್ ಫಂಡಿಂಗ್ ಲಭ್ಯವಾಗಿದೆ. ಮಾರ್ಚ್ 4, 2024 ರಂದು ಅಮೆರಿಕದ ವ್ಯಾಂಡೆನ್ಬರ್ಗ್ ಬಾಹ್ಯಾಕಾಶ ಪಡೆ ನೆಲೆಯಿಂದ ಹಬಲ್ ನೆಟ್ವರ್ಕ್ ತನ್ನ ಮೊದಲ ಎರಡು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
"ಈ ಎರಡು ಉಪಗ್ರಹಗಳು ಯಾವುದೋ ಸಾಮಾನ್ಯ ಉಪಗ್ರಹಗಳಂತೆ ಅಲ್ಲ. ಯಶಸ್ವಿಯಾಗಿ ತಮ್ಮ ಕಕ್ಷೆ ತಲುಪಿರುವ ಇವು 600 ಕಿ.ಮೀ ದೂರದಲ್ಲಿದ್ದುಕೊಂಡು ಸರಳ 3.5 ಎಂಎಂ ಬ್ಲೂಟೂತ್ ಚಿಪ್ನಿಂದ ಸಂಕೇತಗಳನ್ನು ಸ್ವೀಕರಿಸುವಲ್ಲಿ ಯಶಸ್ವಿಯಾಗಿವೆ" ಎಂದು ಹಬಲ್ ನೆಟ್ ವರ್ಕ್ ಕಂಪನಿಯು ಬ್ಲಾಗ್ ಪೋಸ್ಟ್ನಲ್ಲಿ ತಿಳಿಸಿದೆ.
"ಈ ಆವಿಷ್ಕಾರದ ಮೂಲಕ ಈ ಬಗ್ಗೆ ಸಂಶಯ ಪಡುತ್ತಿದ್ದ ಸಾವಿರಾರು ಜನರ ಅಭಿಪ್ರಾಯ ತಪ್ಪೆಂದು ಸಾಬೀತುಪಡಿಸಿದ್ದೇವೆ. ಬ್ಲೂಟೂತ್ ಚಿಪ್ ಗಳಿಂದ ನೇರವಾಗಿ ಸಂಕೇತಗಳನ್ನು ಕಳುಹಿಸಬಹುದು ಮತ್ತು ಅವುಗಳನ್ನು 600 ಕಿ.ಮೀ ದೂರದಲ್ಲಿ ಬಾಹ್ಯಾಕಾಶದಲ್ಲಿ ಸ್ವೀಕರಿಸಬಹುದು ಎಂಬುದನ್ನು ತೋರಿಸುವ ಮೂಲಕ ನಾವು ಹೊಸ ಸಾಧ್ಯತೆಗಳ ಆಯಾಮವನ್ನು ತೆರೆದಿದ್ದೇವೆ" ಎಂದು ಹಬಲ್ ನೆಟ್ ವರ್ಕ್ ನ ಸಹ-ಸಂಸ್ಥಾಪಕ ಮತ್ತು ಸಿಇಒ ಅಲೆಕ್ಸ್ ಹರೋ ಹೇಳಿದರು.
ಸೆಲ್ಯುಲಾರ್ ರಿಸೆಪ್ಷನ್ ಇಲ್ಲದೇ ಉಪಗ್ರಹ ನೆಟ್ ವರ್ಕ್ನೊಂದಿಗೆ ಸಂಪರ್ಕಿಸಲು ಕೇವಲ ಸಾಫ್ಟ್ವೇರ್ ಅಪ್ಡೇಟ್ನಿಂದ ಮಾತ್ರ ಯಾವುದೇ ಆಫ್-ದಿ-ಶೆಲ್ಫ್ ಬ್ಲೂಟೂತ್ ಸಾಧನವನ್ನು ಸಕ್ರಿಯಗೊಳಿಸುವ ಮೂಲಕ ನಾವು ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ನಲ್ಲಿ ಕ್ರಾಂತಿಗೆ ದಾರಿ ಮಾಡಿಕೊಡುತ್ತಿದ್ದೇವೆ ಎಂದು ಅವರು ತಿಳಿಸಿದರು.
"20 ಪಟ್ಟು ಕಡಿಮೆ ಬ್ಯಾಟರಿ ಬಳಕೆ ಮತ್ತು 50 ಪಟ್ಟು ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಇಡೀ ಜಗತ್ತನ್ನು ಸಂಪರ್ಕಿಸುವ ವ್ಯವಸ್ಥೆಯನ್ನು ಒಂದು ಬಾರಿ ಕಲ್ಪಿಸಿಕೊಂಡು ನೋಡಿ. ಇದು ಕೇವಲ ಒಂದು ಸಂಶೋಧನೆಯಲ್ಲ, ಇದೊಂದು ಮಹಾನ್ ಪರಿವರ್ತನೆ" ಎಂದು ಕಂಪನಿ ಹೇಳಿದೆ. ಹಬಲ್ ಈ ವರ್ಷ ಸ್ಪೇಸ್ ಎಕ್ಸ್ ಮಿಷನ್ ರಾಕೆಟ್ ಮೂಲಕ ಮೂರನೇ ಉಪಗ್ರಹವನ್ನು ಉಡಾವಣೆ ಮಾಡುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ : ಚಂದ್ರನ ಮೇಲೆ ಅಗೆದು ನೋಡಬಹುದಾದಷ್ಟು ಆಳದಲ್ಲಿ ಮತ್ತಷ್ಟು ಮಂಜುಗಡ್ಡೆ ನಿಕ್ಷೇಪ: ಇಸ್ರೋ ಸಂಶೋಧನೆ - ICE ON MOON