ನವದೆಹಲಿ: ಡಿಜಿಟಲ್ ಜಗತ್ತಿನಲ್ಲಿ ಸೈಬರ್ ದಾಳಿ ಎಂಬುದು ಸಂಸ್ಥೆಗಳ ಮಹತ್ವದ ಡೇಟಾ ಸಂರಕ್ಷಣೆಯ ಮೇಲಿನ ಬಹುದೊಡ್ಡ ಬೆದರಿಕೆ. ಆಧುನಿಕ ಸೈಬರ್ ದಾಳಿಗಳನ್ನು ಉನ್ನತ ಮಟ್ಟದಲ್ಲಿ ಯಶಸ್ವಿಯಾಗಿ ಎದುರಿಸಲು ಭಾರತದ ಶೇ.4ರಷ್ಟು ಸಂಸ್ಥೆಗಳಷ್ಟೇ ಸಾಮರ್ಥ್ಯ ಹೊಂದಿದೆ ಎಂದು ವರದಿ ತಿಳಿಸಿದೆ.
ಈ ನಿಟ್ಟಿನಲ್ಲಿ ಸಿದ್ಧತೆ ಎಂಬುದು ನಿರ್ಣಾಯಕ. ಶೇ.82ರಷ್ಟು ಮಂದಿ ತಮ್ಮ ಉದ್ಯಮದ ಮೇಲೆ ಮುಂದಿನ 12ರಿಂದ 24 ತಿಂಗಳಲ್ಲಿ ಸೈಬರ್ ದಾಳಿ ತೀವ್ರ ಅಡ್ಡಿ ಉಂಟುಮಾಡಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸಿಸ್ಕೋನ 2024ರ ಸೈಬರ್ ಸೆಕ್ಯೂರಿಟಿ ಸಿದ್ಧತೆ ಸೂಚ್ಯಂಕದ ಪ್ರಕಾರ, ಶೇ.88ರಷ್ಟು ಸಂಸ್ಥೆಗಳು ಪ್ರಸ್ತುತ ಸೂಕ್ತ ಮೂಲಸೌಕರ್ಯದ ಜತೆಗೆ ಸೈಬರ್ ದಾಳಿಗಳನ್ನು ಸಮರ್ಥವಾಗಿ ಎದುರಿಸುವ ಕುರಿತು ಆತ್ಮವಿಶ್ವಾಸ ಹೊಂದಿವೆ. ಆದರೆ, ಅತಿಯಾದ ಆತ್ವವಿಶ್ವಾಸ ಸೈಬರ್ ಬೆದರಿಕೆಗಳ ತಡೆಗೆ ಹಿನ್ನಡೆಯಾಗಬಾರದು ಎಂದು ಸಿಸ್ಕೋನ ಇವಿಪಿ ಜೀತು ಪಟೇಲ್ ತಿಳಿಸಿದ್ದಾರೆ.
ಇಂದಿನ ಸಂಸ್ಥೆಗಳು ಇಂಟಿಗ್ರೇಟೆಡ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೂಡಿಕೆಗಳಿಗೆ ಆದ್ಯತೆ ನೀಡಬೇಕು. ಹಾಗೆಯೇ ಮಷಿನ್ ಸ್ಕೇಲ್ನಲ್ಲಿ ಕಾರ್ಯನಿರ್ವಹಿಸಲು ಕೃತಕ ಬುದ್ಧಿಮತ್ತೆ (ಎಐ) ಹೊಂದಿರಬೇಕು. ಅಂತಿಮವಾಗಿ, ರಕ್ಷಣೆಯ ಪರವಾದ ಮಾಪನ ಹೊಂದಿರಬೇಕು ಎಂದು ಸಲಹೆ ನೀಡಿದ್ದಾರೆ.
ಜಾಗತಿಕವಾಗಿ ಬಹುತೇಕ ಅಂದರೆ ಶೇ.99ರಷ್ಟು ಕಂಪನಿಗಳು, ಮುಂದಿನ 12 ತಿಂಗಳಲ್ಲಿ ತಮ್ಮ ಸೈಬರ್ ಸೆಕ್ಯೂರಿಟಿ ಬಜೆಟ್ ಹೆಚ್ಚಿಸುವ ನಿರೀಕ್ಷೆ ಇದೆ. ಶೇ.71ರಷ್ಟು ಕಂಪನಿಗಳು ತಮ್ಮ ಐಟಿ ಮೂಲಸೌಕರ್ಯವನ್ನು ಗಣನೀಯ ಪ್ರಮಾಣದಲ್ಲಿ ಮುಂದಿನ 12ರಿಂದ 24 ತಿಂಗಳಲ್ಲಿ ವೃದ್ಧಿಸಲಿದೆ.
ಹೆಚ್ಚುತ್ತಿರುವ ಬೆದರಿಕೆಗಳ ವಿರುದ್ಧ ತಮ್ಮ ರಕ್ಷಣೆಯನ್ನು ಬಲಪಡಿಸಲು, ಮೊದಲ ಹಂತದ ರಕ್ಷಣೆಯಲ್ಲಿ ಎಐ ಅನ್ನು ಅಂತರ್ಗತಗೊಳಿಸುವ ಅಗತ್ಯವಿದೆ. ಭವಿಷ್ಯದಲ್ಲಿನ ಕಾರ್ಯಾಚರಣೆ ಹೆಚ್ಚಿಸಲು ಡಿಜಿಟಲ್ ಜಗತ್ತಿನಲ್ಲಿ ಭದ್ರತೆಯ ಸ್ಥಿತಿಸ್ಥಾಪಕತ್ವಕ್ಕೆ ಇದು ಅವಶ್ಯ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ ಎಂದು ಸಿಸ್ಕೋ ಇಂಡಿಯಾ ಮತ್ತು ಸಾರ್ಕ್ ಸೆಕ್ಯೂರಿಟಿ ಬ್ಯುಸಿನೆಸ್ ನಿರ್ದೇಶಕ ಸಮೀರ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
ಭವಿಷ್ಯದಲ್ಲಿ ಎಐ ದಾಳಿ ಅಪಾಯ: ಮತ್ತೊಂದು ವರದಿ ಪ್ರಕಾರ, ಭವಿಷ್ಯದಲ್ಲಿ ಎಐ ಚಾಲಿತ ಸೈಬರ್ ದಾಳಿಗಳ ಅಪಾಯ ಹೆಚ್ಚಿದೆ. ಜಾಗತಿಕವಾಗಿ ಸೈಬರ್ ಸೆಕ್ಯೂರಿಟಿ ವೃತ್ತಿಪರರ ಸಂಘಟನೆ ಕೊರತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಎಂಡ್ ಟೂ ಎಂಡ್ ಭದ್ರತಾ ಪರಿಹಾರ ಬಲಪಡಿಸಲು ನಾವು ಒತ್ತು ನೀಡಬೇಕು. ಥರ್ಡ್ ಪಾರ್ಟಿ ರಕ್ಷಣಾ ಕಾರ್ಯ ಕೇಂದ್ರ ಮತ್ತು ಉದ್ಯೋಗಿಗಳಿಗೆ ಈ ಕುರಿತು ತರಬೇತಿ ನೀಡುವ ಮೂಲಕ ಭದ್ರತೆ ಒದಗಿಸಬೇಕಿದೆ ಎಂದು ಬರ್ರಾಕುಡಾ ನೆಟ್ವರ್ಕ್ನ ಕಂಟ್ರಿ ಮ್ಯಾನೇಜರ್ ಪರಾಗ್ ಖುರಾನಾ ಸಲಹೆ ನೀಡಿದ್ದಾರೆ.(ಐಎಎನ್ಎಸ್)
ಇದನ್ನೂ ಓದಿ: ಭಾರತ ನಮ್ಮ ವೆಬ್ಸೈಟ್ಗಳ ಮೇಲೆ ಸೈಬರ್ ದಾಳಿ ನಡೆಸುತ್ತಿದೆ; ಕೆನಡಾ ಆರೋಪ