ಕೇಪ್ ಕ್ಯಾನವೆರಲ್( ಅಮೆರಿಕ): ಅಮೆರಿಕದ ಖಾಸಗಿ ಲ್ಯಾಂಡರ್ ಚಂದ್ರನ ಅಂಗಳವನ್ನು ತಲುಪಿದೆ. ಅಮೆರಿಕ, ರಷ್ಯಾ, ಚೀನಾ, ಭಾರತ ಹಾಗೂ ಜಪಾನ್ಗಳ ನಂತರ ಇದೀಗ ಖಾಸಗಿ ಲ್ಯಾಂಡರ್ ಸಹ ಚಂದ್ರನ ಅಂಗಳ ಮುಟ್ಟಿದೆ. ಈ ಲ್ಯಾಂಡರ್ ಗುರುವಾರ ಚಂದಪ್ಪನ ನೆಲವನ್ನು ಸ್ಪರ್ಶಿಸಿದೆ ಎಂದು ಖಾಸಗಿ ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಸಾಫ್ಟ್ ಲ್ಯಾಂಡಿಂಗ್ ಕುರಿತಂತೆ ಹಾಗೂ ಲ್ಯಾಂಡರ್ ಕಾರ್ಯಾಚರಣೆ ಬಗ್ಗೆ ಕಂಪನಿ ಸಂವಹನ ಕೊರತೆ ಎದುರಿಸುತ್ತಿದೆ. ಸಂಕೇತಗಳು ಚಂದ್ರನದಿಂದ ಭೂಮಿಗೆ ತಡವಾಗಿ ತಲುಪುತ್ತಿವೆ ಎಂದು ತಿಳಿದು ಬಂದಿದೆ.
ಇಂಟ್ಯೂಟಿವ್ ಮಷಿನ್ಸ್‌ನಿಂದ ಲ್ಯಾಂಡರ್‌ನ ಸ್ಥಿತಿಯ ಕುರಿತು ತಕ್ಷಣಕ್ಕೆ ಯಾವುದೇ ಮಾಹಿತಿಗಳು ಸಿಕ್ಕಿಲ್ಲ. ಹೂಸ್ಟನ್‌ನಲ್ಲಿರುವ ಕಂಪನಿಯ ಕಮಾಂಡ್ ಸೆಂಟರ್‌ನಲ್ಲಿ ಈ ಸಂಬಂಧ ಗೊಂದಲಗಳು ಸೃಷ್ಟಿಯಾಗಿದ್ದವು. ಬಾಹ್ಯಾಕಾಶ ನೌಕೆಯಿಂದ ಸುಮಾರು 250,000 ಮೈಲಿಗಳಿಂದ (400,000 ಕಿಲೋಮೀಟರ್‌ಗಳು) ಸಿಗ್ನಲ್‌ಗಾಗಿ ಕಾಯಬೇಕಾಯಿತು. ಹೀಗಾಗಿ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನನ್ನು ತಲುಪಿತಾ ಇಲ್ಲವೇ ಎಂಬ ಬಗ್ಗೆ ಅನುಮಾನಗಳು ಸೃಷ್ಟಿಯಾಗಿದ್ದವು. ಆದರೆ 10 ನಿಮಿಷಗಳ ಬಳಿಕ ನೌಕೆಯಿಂದ ಸಿಗ್ನಲ್ ಸಿಕ್ಕಿದ್ದರಿಂದ ನಿಟ್ಟುಸಿರು ಬಿಡುವಂತಾಯಿತು. ಈ ಬಗ್ಗೆ ಮಾತನಾಡಿರುವ ಖಾಸಗಿ ಸಂಸ್ಥೆಯ ಮಿಷನ್ ನಿರ್ದೇಶಕ ಟಿಮ್ ಕ್ರೇನ್, ನಾವು ಆ ಸಂಕೇತವನ್ನು ಹೇಗೆ ಪರಿಷ್ಕರಿಸಬಹುದು ಎಂಬುದರ ಬಗ್ಗೆ ಮೌಲ್ಯಮಾಪನ ಮಾಡುತ್ತಿದ್ದೇವೆ" ಎಂದು ಹೇಳಿದರು. ಆದರೆ ನಮ್ಮ ಉಪಕರಣಗಳು ಚಂದ್ರನ ಅಂಗಳವನ್ನು ತಲುಪಿವೆ ಹಾಗೂ ಅದರ ಮೇಲ್ಮೈಯಲ್ಲಿ ಕಾರ್ಯಾಚರಣೆ ಮಾಡುತ್ತಿವೆ ಎಂದು ನಾವು ನಿಸ್ಸಂದೇಹವಾಗಿ ದೃಢೀಕರಿಸಬಹುದು ಅಂತಾನೂ ಅವರು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ನಾಸಾ ಕಳುಹಿಸಿರುವ ಲ್ಯಾಂಡರ್, ಒಡಿಸ್ಸಿಯಸ್ ಚಂದ್ರನ ಸ್ಕಿಮ್ಮಿಂಗ್ ಕಕ್ಷೆಯಿಂದ ಕೆಳಗಿಳಿದಿದೆ. ಆ ಬಳಿಕ ಮಷಿನ್ ಮೇಲ್ಮೈ ಕಡೆಗೆ ತನ್ನನ್ನು ತಾನೇ ಮಾರ್ಗದರ್ಶನ ಮಾಡಿಕೊಂಡು ಸಾಗಿದೆ. ಚಂದ್ರನ ದಕ್ಷಿಣ ಧ್ರುವದ ಸಮೀಪವಿರುವ ಎಲ್ಲಾ ಬಂಡೆಗಳು ಮತ್ತು ಕುಳಿಗಳ ನಡುವಣದಲ್ಲಿ ತುಲನಾತ್ಮಕವಾಗಿ ಸಮತಟ್ಟಾದ ಸ್ಥಳವನ್ನು ಹುಡುಕುತ್ತಿದೆ ಎಂದು ನಾಸಾ ತಿಳಿಸಿದೆ. ಒಡಿಸ್ಸಿಯಸ್ ಬಾಹ್ಯಾಕಾಶ ನೌಕೆ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನ ಮಾಡಿದ ಆರು ದಿನಗಳ ಬಳಿಕ ಬುಧವಾರ ಚಂದ್ರನನ್ನು ತಲುಪಿತ್ತು.
1972 ರಲ್ಲಿ ಅಪೋಲೋ 17 ಮಿಷನ್ ಚಂದ್ರನ ಅಂಗಳ ತಲುಪಿತ್ತು. ಅದಾದ ಬಳಿಕ ಈಗ ಚಂದ್ರನ ಅಧ್ಯಯನ ಜೋರಾಗಿ ಸಾಗಿದೆ. ಭಾರತ, ಜಪಾನ್ ಸೇರಿದಂತೆ ನಾಸಾ ಚಂದ್ರನಲ್ಲಿ ಜೀವಿಗಳು ವಾಸಿಸಬಹುದೇ ಎಂಬುದರ ಬಗ್ಗೆ ಅಧ್ಯಯನದಲ್ಲಿ ತೊಡಗಿಸಿಕೊಂಡಿವೆ. ದೇಶಗಳ ಬಾಹ್ಯಾಕಾಶ ಸಂಸ್ಥೆಗಳ ಜತೆಗೆ ಈಗ ಖಾಸಗಿ ಕಂಪನಿಗಳು ಚಂದ್ರನ ಅಂಗಳಕ್ಕೆ ಕಾಲಿಟ್ಟಿದ್ದು, ಸಂಶೋಧನೆಗಳು ತೀವ್ರಗೊಂಡಿವೆ.
ಇದನ್ನು ಓದಿ: ಚಂದ್ರನ ಮೇಲಿನ ಮಣ್ಣು ಭೂಮಿಗೆ ತರಲು ಇಸ್ರೋದಿಂದ ಚಂದ್ರಯಾನ-4 ಯೋಜನೆ?