ಬೆಂಗಳೂರು: ಈ ತಿಂಗಳ ಆರಂಭದಲ್ಲಿ (ಮೇ 2024) ಭೂಮಿಯ ಮೇಲೆ ಶಕ್ತಿಯುತ ಸೌರ ಮಾರುತ ಅಪ್ಪಳಿಸಿದೆ. ಇದು ಸೂರ್ಯನ ಅತ್ಯಂತ ಹೆಚ್ಚು ಸಕ್ರಿಯ ಪ್ರದೇಶವಾಗಿರುವ 'ಎಆರ್13664'ನಿಂದ ಪ್ರಚೋದಿಸಲ್ಪಟ್ಟ ವಿದ್ಯಮಾನ ಎಂದು ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ (ಇಸ್ರೋ) ಮಂಗಳವಾರ ತಿಳಿಸಿದೆ. 2003ರ ನಂತರ ಸಂಭವಿಸಿದ ಅತೀ ದೊಡ್ಡ ಸೌರ ಮಾರುತ ಇದೆಂಬುದು ಗಮನಾರ್ಹ.
ಸೂರ್ಯನ ಈ ಪ್ರದೇಶವು ಎಕ್ಸ್ (X) ವರ್ಗದ ಸೌರ ಜ್ವಾಲೆಗಳನ್ನು ಹೆಚ್ಚು ಹೊರ ಹಾಕುತ್ತಿರುತ್ತದೆ. ಮತ್ತು ಇಲ್ಲಿನ ಕೊರೊನಲ್ ಮಾಸ್ ಇಜೆಕ್ಷನ್(ಸಿಎಂಇ)ಗಳು ಭೂಮಿಯತ್ತ ಮುಖ ಮಾಡಿರುತ್ತವೆ.
ಕೊರೊನಲ್ ಮಾಸ್ ಇಜೆಕ್ಷನ್ ಎಂದರೇನು?: ಸೂರ್ಯನ ಅತ್ಯಂತ ಹೊರಭಾಗದ ವಾತಾವರಣವೇ ಕೊರೊನಾ. ಈ ಪ್ರದೇಶವು ದಟ್ಟ ಮತ್ತು ಅತ್ಯಂತ ಗಾಢವಾದ ಪ್ಲಾಸ್ಮಾವನ್ನು ಬಾಹ್ಯಾಕಾಶಕ್ಕೆ ಹೊರಸೂಸುತ್ತಿರುತ್ತದೆ. ಇದು ಭೂಮಿಯ ಮೇಲೆ ರೇಡಿಯೋ ತರಂಗಗಳು ಮತ್ತು ಕಾಂತೀಯ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಕಳೆದ ಕೆಲವು ದಿನಗಳಲ್ಲಿ ಹಲವು ಎಕ್ಸ್ ವರ್ಗದ ಸೌರ ಜ್ವಾಲೆಗಳು ಮತ್ತು ಕೊರೊನಲ್ ಮಾಸ್ ಇಜೆಕ್ಷನ್ಸ್ ಭೂಮಿಗೆ ಅಪ್ಪಳಿಸಿದೆ ಎಂದು ಇಸ್ರೋ ಹೇಳಿದೆ.
ಭೂಮಿ ಮೇಲಾಗುವ ಪರಿಣಾಮವೇನು?: ಈ ಸಿಎಂಇಗಳು ಹೆಚ್ಚು ಅಕ್ಷಾಂಶವಿರುವ ಭೂ ಪ್ರದೇಶಗಳ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಈಗಾಗಲೇ ಟ್ರಾನ್ಸ್ ಪೋಲಾರ್ (ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್ ಪ್ರದೇಶಗಳು) ಮೂಲಕ ಹಾದು ಹೋಗುವ ವಿಮಾನಗಳ ಮಾರ್ಗ ಬದಲಿಸಲಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಇಂಥ ಹಲವು ಬಾಹ್ಯಾಕಾಶ ವಿದ್ಯಮಾನಗಳು ಜರುಗುವ ಸಂಭವವಿದೆ ಎಂದು ಇಸ್ರೋ ತಿಳಿಸಿದೆ.
ಆದರೆ, ಇಸ್ರೋ ಪ್ರಕಾರ, ಈ ಸೌರ ವಿದ್ಯಮಾನದಿಂದ ಭಾರತ ವಲಯ ಕಡಿಮೆ ಪ್ರಭಾವಕ್ಕೊಳಗಾಗಿದೆ. ಏಕಂದರೆ ಮುಖ್ಯ ಸೌರ ಬೆಳವಣಿಗೆಯು ಮೇ 11 ಮುಂಜಾವಿನ ವೇಳೆ ನಡೆದಿದ್ದು, ಈ ಸಂದರ್ಭದಲ್ಲಿ ಅಯನೋಸ್ಪಿಯರ್ ಸಂಪೂರ್ಣವಾಗಿ ಬೆಳವಣಿಗೆ ಹೊಂದಿರುವುದಿಲ್ಲ. ಕಡಿಮೆ ಅಕ್ಷಾಂಶ ಪ್ರದೇಶದಲ್ಲಿರುವ ಭಾರತದಲ್ಲಿ ಯಾವುದೇ ರೀತಿಯ ದೊಡ್ಡ ಪ್ರಮಾಣದ ಸಮಸ್ಯೆಗಳು ಉಂಟಾಗಿರುವ ಕುರಿತು ವರದಿಯಾಗಿಲ್ಲ. ಈ ಅಯನೋಸ್ಪಿಯರ್ ಪೆಸಿಫಿಕ್ ಮತ್ತು ಅಮೆರಿಕ ವಲಯಗಳಲ್ಲಿ ಹೆಚ್ಚು ಪ್ರಕ್ಷುಬ್ಧವಾಗಿರುತ್ತದೆ ಎಂದು ಇಸ್ರೋ ಹೇಳಿದೆ.
ಅಯನೋಸ್ಪಿಯರ್ ಎಂದರೇನು?: ಅಯನೋಸ್ಪಿಯರ್ ಭೂ ವಾತಾವರಣದ ಅತ್ಯಂತ ಮೇಲ್ಭಾಗ. ಇದು ಸುಮಾರು 80ರಿಂದ 600 ಕಿಲೋ ಮೀಟರ್ ವ್ಯಾಪ್ತಿಯಲ್ಲಿದೆ. ಇಲ್ಲಿ ಆಲ್ಟ್ರಾವಯಲೆಟ್ ಮತ್ತು ಎಕ್ಸ್ ರೇ ಸೋಲಾರ್ ರೇಡಿಯೇಶನ್ ಅಯಾನುಗಳು ಅತ್ಯಂತ ಹೆಚ್ಚು. ಹೀಗಾಗಿ ಇಲ್ಲಿ ಎಲೆಕ್ಚ್ರಾನುಗಳ ಪದರ ನಿರ್ಮಾಣವಾಗುತ್ತದೆ.
ಅಯನೋಸ್ಪಿಯರ್ ಯಾಕೆ ಬೇಕು?: ಅಯನೋಸ್ಪಿಯರ್ ಮಹತ್ವದ್ದು. ಏಕೆಂದರೆ, ಇದು ರೇಡಿಯೋ ತರಂಗಗಳನ್ನು ಪ್ರತಿಫಲಿಸುತ್ತದೆ ಮತ್ತು ಮಾರ್ಪಡಿಸುವ ಸಾಮರ್ಥ್ಯ ಹೊಂದಿದೆ. ಹಾಗಾಗಿ, ಇದರಿಂದ ದೂರ ಸಂಪರ್ಕ ಪ್ರಸರಣ, ಸಂಚಾರಕ್ಕೆ ಬಹಳ ಪ್ರಯೋಜನವಿದೆ.
ಇದನ್ನೂ ಓದಿ: ಲಿಕ್ವಿಡ್ ರಾಕೆಟ್ ಎಂಜಿನ್ PS-4 ಯಶಸ್ವಿಯಾಗಿ ಪರೀಕ್ಷಿಸಿದ ಇಸ್ರೋ! - Liquid Rocket Engine