ಹೈದರಾಬಾದ್: "ಭವಿಷ್ಯದ ಮಾನವಸಹಿತ ಬಾಹ್ಯಾಕಾಶ ಯೋಜನೆಗಳಲ್ಲಿ ಗಗನಯಾತ್ರಿಗಳಾಗಲು ಮಹಿಳಾ ವಿಜ್ಞಾನಿಗಳಿಗೂ ಅವಕಾಶವಿದೆ. ಆ ಅವಕಾಶಕ್ಕಾಗಿ 2040ರವರೆಗೆ ಕಾಯಬೇಕೆಂದಿಲ್ಲ. ಇನ್ನು ಕೆಲವೇ ವರ್ಷಗಳಲ್ಲಿ ಆ ಕನಸು ಸಾಕಾರಗೊಳ್ಳಲಿದೆ" ಎಂದು ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ್ ಹೇಳಿದ್ದಾರೆ.
ಹೈದರಾಬಾದ್‌ನ ಗಚ್ಚಿಬೌಲಿಯ ಒಳಾಂಗಣ ಕ್ರೀಡಾಂಗಣದಲ್ಲಿ ಕಲಾಂ ಇನ್ಸ್ಟಿಟ್ಯೂಟ್ ಆಫ್ ಯೂತ್ ಎಕ್ಸಲೆನ್ಸ್ (ಕೆವೈಇ) ಆಯೋಜಿಸಿದ್ದ 'ಇನ್ಸ್ಪೈರ್-ಹೈದರಾಬಾದ್' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಇದೇ ವೇಳೆ ನಗರದ ಶಾಲಾ, ಕಾಲೇಜುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿದ್ಯಾರ್ಥಿಗಳ ಪ್ರಶ್ನೆಗಳಿಗೂ ಉತ್ತರಿಸಿದರು.
"ಬಾಹ್ಯಾಕಾಶ ಆರ್ಥಿಕತೆಯಲ್ಲಿ ಶೇ.70ರಷ್ಟು ಆದಾಯ ಅಪ್ಲಿಕೇಶನ್ಗಳಿಂದ ಬರುತ್ತದೆ. ಅವುಗಳಲ್ಲಿ ಮೊಬೈಲ್ ಕಮ್ಯುನಿಕೇಶನ್ನಿಂದ ಹಿಡಿದು ರಿಮೋಟ್ ಸೆನ್ಸಿಂಗ್ ಮತ್ತು ಇಮೇಜ್ ಪ್ರೊಸೆಸ್ಸಿಂಗ್ನಂತಹ ಅನೇಕ ಸೇವೆಗಳಿವೆ. ಪ್ರತಿಯೊಬ್ಬ ವ್ಯಕ್ತಿಯೂ ಈಗ ಆಧಾರ್ ಸಂಖ್ಯೆ ಹೊಂದಿದ್ದಾನೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಐಪಿ ನಂಬರ್ ಹೊಂದುವ ಸಾಧ್ಯತೆ ಇದೆ" ಎಂದು ತಿಳಿಸಿದರು.
"ಒಬ್ಬ ವ್ಯಕ್ತಿ ತಮಿಳಿನಲ್ಲಿ ಮಾತನಾಡುತ್ತಿದ್ದರೆ, ಆ ಮಾತುಗಳನ್ನು ತಕ್ಷಣ ತೆಲುಗು ಭಾಷೆಗೆ ಭಾಷಾಂತರಿಸಿ ಕೇಳುವ ತಂತ್ರಜ್ಞಾನ ಲಭ್ಯವಾಗಲಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ (AI) ಆಗಮನದಿಂದ ಶಿಕ್ಷಣ, ಕೌಶಲ್ಯ ಹಾಗೂ ಕೆಲಸದ ವಿಧಾನಗಳಲ್ಲಿ ಅನೇಕ ಬದಲಾವಣೆಗಳಾಗುವ ಸಾಧ್ಯತೆಯಿದೆ. ಇಲ್ಲಿಯವರೆಗೆ ಅಟೋಮೊಬೈಲ್ಗಳು ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಬಳಕೆಯಾಗುತ್ತಿದ್ದವು. ಆದರೆ ಈಗ ಪ್ರತr ಕಾರಿನಲ್ಲೂ 30-40 ಚಿಪ್ಗಳ ವ್ಯವಸ್ಥೆ ಮಾಡಿರುವುದರಿಂದ ಎಲೆಕ್ಟ್ರಾನಿಕ್ಸ್ ಪಾತ್ರ ಮಹತ್ವ ಪಡೆಯುತ್ತಿದೆ" ಎಂದು ಮಾಹಿತಿ ಹಂಚಿಕೊಂಡರು.
₹21 ಸಾವಿರ ಕೋಟಿ ಮೌಲ್ಯದ ಉತ್ಪನ್ನ ರಫ್ತು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(ಡಿಆರ್‌ಡಿಒ) ಮಾಜಿ ಅಧ್ಯಕ್ಷ ಡಾ.ಜಿ.ಸತೀಶ್ ರೆಡ್ಡಿ ಮಾತನಾಡಿ, "ಈ ವರ್ಷ ಮಾರ್ಚ್ 31ರವೆರೆಗೆ ನಮ್ಮ ದೇಶ 21 ಸಾವಿರ ಕೋಟಿ ರೂಪಾಯಿ ಮೌಲ್ಯದ ಉತ್ಪನ್ನಗಳನ್ನು 58 ದೇಶಗಳಿಗೆ ರಫ್ತು ಮಾಡಿದೆ. ಗ್ರೀನ್ ಪ್ರೊಪಲ್ಷನ್ ಮತ್ತು ಕಾಂಪೊಸಿಟ್ ರಾಕೆಟ್ ಮೋಟಾರ್ಗಳಂತಹ ಸಂಕೀರ್ಣ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಸ್ಟಾರ್ಟ್ಅಪ್ಗಳು ಅದ್ಭುತಗಳನ್ನು ಸಾಧಿಸುತ್ತಿವೆ." ಎಂದು ತಿಳಿಸಿದರು.
ಕೆಐವೈಇ ಅಧ್ಯಕ್ಷ ನರೇಶ್ ಇಂಡಿಯನ್ ಮಾತನಾಡಿ, "ಕಲಾಂ ಸ್ಮಾರಕ ಕೇಂದ್ರವನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು" ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆರ್ಮಿ ಸೌತ್ ಜಿವಿಒಸಿ, ಲೆಫ್ಟಿನೆಂಟ್ ಜನರಲ್ ಕರಣ್ ಬೀರ್ಸಿಂಗ್, ನಿಮ್ಸ್ಮೆ ಮಹಾನಿರ್ದೇಶಕ ಡಾ.ಎಸ್.ಗ್ಲೋರಿ ಸ್ವರೂಪ, ಡಿಆರ್‌ಡಿಒ ವಿಜ್ಞಾನಿ ಡಾ.ಜಿ.ರಾಜಾಸಿಂಗ್ ಮಾತನಾಡಿದರು. ಸ್ಟಾರ್ಟ್‌ಅಪ್‌ಗಳ ಧ್ರುವ ಸ್ಪೇಸ್ ಸಂಸ್ಥಾಪಕ ಸಂಜಯ್, ಕಾನ್‌ಸ್ಟೆಲ್ಲಿ ಸಿಟಿಒ ಸಿಎಚ್ ಅವಿನಾಶ್ ರೆಡ್ಡಿ ಮತ್ತು ಸಿಎಸ್‌ಸಿಸಿ ಲ್ಯಾಬ್ಸ್ ಸಂಸ್ಥಾಪಕ ಚಂದ್ರಶೇಖರ್ ರೆಡ್ಡಿ ಅವರು ತಮ್ಮ ಸ್ಫೂರ್ತಿದಾಯಕ ಕಥೆಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಡಿಆರ್‌ಡಿಒ ಯಂಗ್ ಸೈಂಟಿಸ್ಟ್ ಲ್ಯಾಬ್ ನಿರ್ದೇಶಕ ಡಾ.ಪಿ.ಶಿವಪ್ರಸಾದ್ ಮತ್ತಿತರರು ಇದ್ದರು.
ಇದನ್ನೂ ಓದಿ: 'ಆದಿತ್ಯ ಎಲ್1 ಉಡಾವಣೆ ದಿನದಂದೇ ನನಗೆ ಕ್ಯಾನ್ಸರ್ ಇರುವುದು ಗೊತ್ತಿತ್ತು': ಇಸ್ರೋ ಅಧ್ಯಕ್ಷ ಸೋಮನಾಥ್