OpenAI CTO Mira Murati Resigns: ಓಪನ್ AI ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಮುಖ್ಯ ತಾಂತ್ರಿಕ ಅಧಿಕಾರಿ ಮೀರಾ ಮುರತಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ಪ್ರಕಟಿಸಿದ್ದಾರೆ. ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ದೊಡ್ಡ ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸುವಲ್ಲಿ ಪ್ರಸಿದ್ಧಿ ಪಡೆದಿದ್ದ ಇವರು ಸುಮಾರು ಆರೂವರೆ ವರ್ಷ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಇದೀಗ ರಾಜೀನಾಮೆ ನೀಡಿದ್ದು, ತನಗಾಗಿ ಹೆಚ್ಚಿನ ಸಮಯ ಮೀಸಲಿಡಲು ಮತ್ತು ಇನ್ನಷ್ಟು ಕಲಿಕೆಯ ಉದ್ದೇಶಕ್ಕಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಚಾಟ್‌ಜಿಪಿಟಿಯನ್ನು ಕಂಪನಿಯಲ್ಲಿ ಪ್ರಮುಖ ಆಟಗಾರನನ್ನಾಗಿ ಮಾಡುವಲ್ಲಿ ಮತ್ತು ಅದನ್ನು ಮುನ್ನಡೆಸುವಲ್ಲಿ ಮೀರಾ ಮುರತಿ ಪ್ರಮುಖರು. ತಮ್ಮ ರಾಜೀನಾಮೆ ಮತ್ತು ಭವಿಷ್ಯದ ಪ್ರಯಾಣದ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್'ನಲ್ಲಿ ಪತ್ರವೊಂದನ್ನು ಅವರು ಪೋಸ್ಟ್ ಮಾಡಿದ್ದಾರೆ.
I shared the following note with the OpenAI team today. pic.twitter.com/nsZ4khI06P
— Mira Murati (@miramurati) September 25, 2024
ಚಾಟ್‌ಜಿಪಿಟಿ ಯೋಜನೆ ಸೇರಿದಂತೆ ಕಂಪನಿಯೊಂದಿಗೆ ನನ್ನ ಆರೂವರೆ ವರ್ಷಗಳ ಕಾರ್ಯ ನಿರ್ವಹಣೆ ಉತ್ತಮವಾಗಿದೆ. ನನಗೆ ವಿಶೇಷ ಸವಲತ್ತುಗಳನ್ನು ನೀಡಲಾಗಿತ್ತು. ಇದಕ್ಕಾಗಿ ಕಂಪನಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಉತ್ತಮ ತಂತ್ರಜ್ಞಾನ ಕಂಪನಿಯನ್ನು ಮುನ್ನಡೆಸಲು ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಸ್ಯಾಮ್ ಮತ್ತು ಗ್ರೆಗ್ ಅವರಿಗೆ ಧನ್ಯವಾದ ಎಂದಿದ್ದಾರೆ.
ನಾನು ನನ್ನ ಸ್ವಂತ ಅನ್ವೇಷಣೆಗಾಗಿ ಸಮಯ ಮೀಸಲಿಡಬೇಕಿದೆ. ನನ್ನ ತಂಡಕ್ಕೆ ನಾನು ಆಭಾರಿಯಾಗಿದ್ದೇನೆ. ನಮ್ಮ ಸಂಶೋಧನೆಗಳಲ್ಲಿ ನಾವು ಸುಧಾರಿತ ವೈಜ್ಞಾನಿಕ ತಿಳುವಳಿಕೆ ಹೊಂದಿದ್ದೇವೆ. ಓಪನ್‌ಎಐ ತೊರೆಯುವುದು ನಾನು ಕೈಗೊಂಡ ಕಠಿಣ ನಿರ್ಧಾರವಾಗಿತ್ತು ಎಂದು ಮೀರಾ ಮುರತಿ ಬರೆದುಕೊಂಡಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಸ್ಯಾಮ್ ಆಲ್ಟ್‌ಮ್ಯಾನ್ ಅವರನ್ನು ಕಂಪನಿ ತೆಗೆದುಹಾಕಿದ ನಂತರ ಮೀರಾ ಸ್ವಲ್ಪ ಸಮಯದವರೆಗೆ ಸಿಇಒ ಆಗಿದ್ದರು. ಮೈಕ್ರೋಸಾಫ್ಟ್ನ ಮಧ್ಯಸ್ಥಿಕೆಯ ನಂತರ ಸ್ಯಾಮ್ ಆಲ್ಟ್ಮನ್ ಓಪನ್ಎಐಗೆ ಮರು ಪ್ರವೇಶಿಸಿದ್ದರು. ಸ್ಯಾಮ್ ಹಿಂದಿರುಗಿದ ಬಳಿಕ ಮೀರಾ ಅವರಿಗೆ CTO ಜವಾಬ್ದಾರಿ ನೀಡಲಾಗಿತ್ತು.
ಇನ್ನು, ಕಂಪನಿಯ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಲವರು ಈ ವರ್ಷ ರಾಜೀನಾಮೆ ನೀಡಿರುವುದು ಗಮನಾರ್ಹ. ಆಗಸ್ಟ್‌ನಲ್ಲಿ ಅಧ್ಯಕ್ಷ ಮತ್ತು ಸಹಸಂಸ್ಥಾಪಕ ಗ್ರೆಗ್ ಬ್ರಾಕ್‌ಮನ್ ಹೊರಬಂದಿದ್ದರು. ಇದಕ್ಕೂ ಮುನ್ನ ಮತ್ತೊಬ್ಬ ಸಹಸಂಸ್ಥಾಪಕರಾದ ಜಾನ್ ಸುಲ್ಮನ್ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ: ಚೀನಾದಲ್ಲಿ ರಷ್ಯಾ ರಹಸ್ಯ ಡ್ರೋನ್ ಯೋಜನೆ ಪ್ರಾರಂಭ: ಯುರೋಪಿಯನ್ ಗುಪ್ತಚರ ಸಂಸ್ಥೆಗಳ ವರದಿ - Russia Secret Drone Project