ಸಿಯೋಲ್ : ನಿತ್ಯ ಕ್ಷಿಪಣಿ ಹಾಗೂ ಶಕ್ತಿಶಾಲಿ ಬಾಂಬ್ಗಳ ಪರೀಕ್ಷೆ ನಡೆಸುವ ಮೂಲಕ ಸುದ್ದಿಯಾಗುವ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಕೈಯಲ್ಲಿ ಮತ್ತೊಂದು ಹೊಸ ಅಸ್ತ್ರ ಸಿಕ್ಕಿದೆ. ಅದೇ ಸುಸೈಡ್ ಡ್ರೋನ್ಸ್ (Suicide Drones). ಕಿಮ್ ಶನಿವಾರ ಅದರ ಪರ್ಫಾಮನ್ಸ್ ಅನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಿದ್ದಾರೆ. ಇವುಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಆ ದೇಶದ ಅಧಿಕೃತ ಮಾಧ್ಯಮದಲ್ಲಿ ಸೋಮವಾರ ಬಿಡುಗಡೆ ಮಾಡಲಾಗಿದೆ.
ತಮ್ಮ ಯುದ್ಧ ಸನ್ನದ್ಧತೆಯನ್ನು ಇನ್ನಷ್ಟು ಸುಧಾರಿಸಲು ಹೊಸದಾಗಿ ಸ್ಫೋಟಿಸುವ ಡ್ರೋನ್‌ಗಳ ಉತ್ಪಾದನೆಯನ್ನು ವೇಗಗೊಳಿಸುವುದಾಗಿ ಕಿಮ್ ಬಹಿರಂಗಪಡಿಸಿದ್ದಾರೆ. X- ಆಕಾರದ ರೆಕ್ಕೆಗಳನ್ನು ಹೊಂದಿರುವ ಬಿಳಿ ಡ್ರೋನ್ ದಕ್ಷಿಣ ಕೊರಿಯಾದ K-2 ಯುದ್ಧ ಟ್ಯಾಂಕ್ ಅನ್ನು ನಾಶಪಡಿಸಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಬಹಿರಂಗಗೊಂಡಿವೆ. ಸಾಮಾನ್ಯ ಡ್ರೋನ್‌ಗಳು ಗುರಿಯಿಂದ ನಿರ್ದಿಷ್ಟ ದೂರದಲ್ಲಿ ಉಳಿದು ಕ್ಷಿಪಣಿಗಳ ಮೂಲಕ ದಾಳಿ ನಡೆಸುತ್ತವೆ. ಆದ್ರೆ ಉತ್ತರ ಕೊರಿಯಾ ಇತ್ತೀಚಿಗೆ ಪ್ರಯೋಗಿಸಿರುವ ಡ್ರೋನ್‌ಗಳು ಗುರಿಯನ್ನು ನೇರವಾಗಿ ಹೊಡೆದು ವಿನಾಶವನ್ನು ಸೃಷ್ಟಿಸುತ್ತವೆ.
ಉತ್ತರ ಕೊರಿಯಾದಿಂದ ದಕ್ಷಿಣ ಕೊರಿಯಾ ಮತ್ತು ಅಮೆರಿಕಕ್ಕೆ ಪರಮಾಣು ಶಸ್ತ್ರಾಸ್ತ್ರಗಳ ಉಡಾವಣೆಯ ಬೆದರಿಕೆಗಳು ಹೆಚ್ಚಾಗಿ ಬರುತ್ತವೆ. ಈ ಹಿನ್ನೆಲೆ ಈ ಎರಡೂ ದೇಶಗಳು ಜಂಟಿ ಸಮರಾಭ್ಯಾಸ ನಡೆಸುತ್ತಿವೆ. ಹೀಗಾಗಿ ಅವರು ತಮ್ಮ ಆತ್ಮರಕ್ಷಣೆಯ ಕೌಶಲ್ಯಗಳನ್ನು ನಿರಂತರವಾಗಿ ಸುಧಾರಿಸುತ್ತಿದ್ದಾರೆ. ಯುದ್ಧ ಸನ್ನದ್ಧತೆಯನ್ನು ಪರೀಕ್ಷಿಸಲಾಗುತ್ತಿದೆ. ಈ ಕ್ಷಣದಲ್ಲಿ ಕಿಮ್ ಅವರ ಸ್ಫೋಟಗೊಳ್ಳುವ ಡ್ರೋನ್ನ ಪ್ರಯೋಗಗಳು ಮುನ್ನೆಲೆಗೆ ಬಂದಿರುವುದು ಗಮನಾರ್ಹ.
ವಿವಿಧ ದೂರವನ್ನು ಪ್ರಯಾಣಿಸುವ ಸಾಮರ್ಥ್ಯವಿರುವ ವಿವಿಧ ಬಗೆಯ ಡ್ರೋನ್‌ಗಳನ್ನು ಶನಿವಾರ ಪರೀಕ್ಷಿಸಲಾಗಿದೆ. ಈ ಡ್ರೋನ್‌ಗಳು ಸಮುದ್ರ ಹಾಗೂ ಭೂಮಿಯಲ್ಲಿನ ಗುರಿಗಳ ಮೇಲೆ ದಾಳಿ ಮಾಡಬಲ್ಲವು. ಹೆಚ್ಚಿನ ನಿಖರತೆಯೊಂದಿಗೆ ಗುರಿಗಳನ್ನು ಹೊಡೆಯುವ ಮೊದಲು ಡ್ರೋನ್‌ಗಳು ವಿವಿಧ ದಿಕ್ಕುಗಳಲ್ಲಿ ಹಾರಟ ನಡೆಸುತ್ತವೆ ಎಂದು ಕೆಸಿಎನ್‌ಎ ಬಹಿರಂಗಪಡಿಸಿದೆ.
ಅಂತಾರಾಷ್ಟ್ರೀಯ ಸೇನಾ ಸಾಮರ್ಥ್ಯ ಮತ್ತು ಆತ್ಮರಕ್ಷಣಾ ವ್ಯವಸ್ಥೆಗಳನ್ನು ನೋಡಿದರೆ ಡ್ರೋನ್‌ಗಳಂತಹ ಅತ್ಯಾಧುನಿಕ ತಂತ್ರಜ್ಞಾನದ ಅವಶ್ಯಕತೆ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ಆದಷ್ಟು ಬೇಗ ಸೇನೆಗೆ ಸೇರ್ಪಡೆಗೊಳಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ಕಿಮ್ ಹೇಳಿದ್ದಾರೆ.
ಇಡೀ ವಿಶ್ವವೇ ರಷ್ಯಾ-ಉಕ್ರೇನ್, ಇಸ್ರೇಲ್-ಹಮಾಸ್ ಕಡೆಗೆ ಗಮನಹರಿಸುತ್ತಿರುವ ಈ ಹೊತ್ತಿನಲ್ಲಿ ಕಿಮ್ ಜಾಂಗ್ ಉನ್ ತನ್ನ ಪರಮಾಣು ಸಾಮರ್ಥ್ಯವನ್ನು ಬಲಪಡಿಸುವತ್ತ ಗಮನ ಹರಿಸಿದ್ದಾರೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾಗೆ ಆಗಾಗ್ಗೆ ಎಚ್ಚರಿಕೆಗಳನ್ನು ನೀಡುತ್ತಿರುತ್ತಾರೆ. ಅಮೆರಿಕದಲ್ಲಿಯೂ ಗುರಿ ತಲುಪಬಲ್ಲ ದೂರಗಾಮಿ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ನೆರೆಯ ದಕ್ಷಿಣ ಕೊರಿಯಾವನ್ನು ಗುರಿಯಾಗಿಸಲು ಕಡಿಮೆ ವ್ಯಾಪ್ತಿಯ ಶಸ್ತ್ರಾಸ್ತ್ರಗಳನ್ನು ಸಹ ಸಿದ್ಧಪಡಿಸುತ್ತಿದೆ ಕಿಮ್ ಸೇನೆ.
ಅಮೆರಿಕದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಆ ದೇಶದ ಮೇಲೆ ಒತ್ತಡ ಹೆಚ್ಚಿಸುವುದು ಕಿಮ್ ಗುರಿ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಕಿಮ್ ತಮ್ಮ ದೇಶವನ್ನು ಪರಮಾಣು ಅಸ್ತ್ರ ದೇಶವೆಂದು ಗುರುತಿಸುವ ಭರವಸೆ ಹೊಂದಿದ್ದಾರೆ. ಇದರಿಂದಾಗಿ ಆರ್ಥಿಕ ಮತ್ತು ಸೇನಾ ನಿರ್ಬಂಧಗಳಿಂದ ಮುಕ್ತಿ ಪಡೆಯುವುದು ತಮ್ಮ ಗುರಿ ಎಂದು ವಿವರಿಸಿದ್ದಾರೆ.