ನವದೆಹಲಿ: ಕೃಷಿ ಭೂಮಿಯಲ್ಲಿ ಬಳಸಲಾಗುವ ರಾಸಾಯನಿಕ ಗೊಬ್ಬರ ಮತ್ತು ಪ್ರಾಣಿಗಳ ತ್ಯಾಜ್ಯ ಬಳಕೆ ಹೆಚ್ಚಾಗಿದ್ದರಿಂದ 1980 ಮತ್ತು 2020ರ ನಡುವೆ ಮಾರಕ ನೈಟ್ರಸ್ ಆಕ್ಸೈಡ್ ಅನಿಲದ ಹೊರಸೂಸುವಿಕೆಯು ಶೇಕಡಾ 40 ರಷ್ಟು ಏರಿಕೆಯಾಗಿದೆ ಎಂದು ಹೊಸ ವರದಿಯೊಂದು ಬುಧವಾರ ತಿಳಿಸಿದೆ. ನೈಟ್ರಸ್ ಆಕ್ಸೈಡ್ ಇದು ಇಂಗಾಲದ ಡೈಆಕ್ಸೈಡ್ ಅಥವಾ ಮೀಥೇನ್ ಗಿಂತ ಹೆಚ್ಚು ಮಾಲಿನ್ಯಕಾರಕವಾದ ಅನಿಲವಾಗಿದೆ.
ಈ ರಾಷ್ಟ್ರಗಳಲ್ಲೇ ಹೆಚ್ಚು: 15 ದೇಶಗಳ 55 ಸಂಸ್ಥೆಗಳ 58 ಸಂಶೋಧಕರ ತಂಡವು ತಯಾರಿಸಿದ ಗ್ಲೋಬಲ್ ಕಾರ್ಬನ್ ಪ್ರಾಜೆಕ್ಟ್ನ ಹೊಸ ವರದಿಯ ಪ್ರಕಾರ ಚೀನಾ, ಭಾರತ ಮತ್ತು ಅಮೆರಿಕ ಇವು ನೈಟ್ರಸ್ ಆಕ್ಸೈಡ್ ಹೊರಸೂಸುವ ಅಗ್ರ 10 ದೇಶಗಳಲ್ಲಿ ಸೇರಿವೆ. ಬ್ರೆಜಿಲ್, ರಷ್ಯಾ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಡೋನೇಷ್ಯಾ, ಟರ್ಕಿ ಮತ್ತು ಕೆನಡಾ ಸೇರಿದಂತೆ ಇತರ ದೇಶಗಳು ಸಹ ಈ ಮಾರಕ ಅನಿಲ ಹೊರಸೂಸುವಿಕೆಯಲ್ಲಿ ಮುಂಚೂಣಿಯಲ್ಲಿವೆ.
2020 ರಲ್ಲಿ ಕೃಷಿ ಚಟುವಟಿಕೆಗಳ ಕಾರಣದಿಂದ ನೈಟ್ರಸ್ ಆಕ್ಸೈಡ್ನ ಹೊರಸೂಸುವಿಕೆಯು 8 ಮಿಲಿಯನ್ ಮೆಟ್ರಿಕ್ ಟನ್ಗೆ ತಲುಪಿದೆ. ಇದು 1980 ರಲ್ಲಿ ಹೊರಸೂಸಲ್ಪಟ್ಟ 4.8 ಮಿಲಿಯನ್ ಮೆಟ್ರಿಕ್ ಟನ್ಗಿಂತ ಶೇಕಡಾ 67 ರಷ್ಟು ಹೆಚ್ಚಾಗಿದೆ ಎಂದು ಬೋಸ್ಟನ್ ಕಾಲೇಜಿನ ಸಂಶೋಧಕರ ನೇತೃತ್ವದಲ್ಲಿ ತಯಾರಿಸಲಾದ ಈ ವರದಿ ಹೇಳಿದೆ.
ಪರಿಸರ ಸೇರಿದ ನೈಟ್ರಸ್ ಆಕ್ಸೈಡ್: 2020 ಮತ್ತು 2021ರ ಅವಧಿಯಲ್ಲಿ ಇತಿಹಾಸದಲ್ಲಿಯೇ ಅತ್ಯಧಿಕ ಪ್ರಮಾಣದ ನೈಟ್ರಸ್ ಆಕ್ಸೈಡ್ ಪರಿಸರಕ್ಕೆ ಸೇರಿದೆ. ಇದು ಜಾಗತಿಕ ತಾಪಮಾನ ಏರಿಕೆಗೆ ಗಮನಾರ್ಹವಾಗಿ ಕಾರಣವಾಗಿದೆ ಎಂದು ಅರ್ಥ್ ಸಿಸ್ಟಮ್ ಸೈನ್ಸ್ ಡೇಟಾ ಜರ್ನಲ್ನಲ್ಲಿ ಪ್ರಕಟವಾದ ವರದಿ ತಿಳಿಸಿದೆ.
ಪ್ಯಾರಿಸ್ ಒಪ್ಪಂದದಂತೆ ಜಾಗತಿಕ ತಾಪಮಾನ ಏರಿಕೆಯನ್ನು 2 ಡಿಗ್ರಿ ಸೆಲ್ಸಿಯಸ್ಗೆ ಸೀಮಿತಗೊಳಿಸಬೇಕಾದರೆ ಮಾನವ ಚಟುವಟಿಕೆಗಳಿಂದ ನೈಟ್ರಸ್ ಆಕ್ಸೈಡ್ ಹೊರಸೂಸುವಿಕೆ ಕಡಿಮೆ ಮಾಡುವುದು ಅಗತ್ಯವಾಗಿದೆ ಎಂದು ಬೋಸ್ಟನ್ ಕಾಲೇಜಿನ ಪ್ರಾಧ್ಯಾಪಕ ಹ್ಯಾಂಕಿನ್ ಟಿಯಾನ್ ಕರೆ ನೀಡಿದ್ದಾರೆ.
"ವಾತಾವರಣದಿಂದ ನೈಟ್ರಸ್ ಆಕ್ಸೈಡ್ ಅನ್ನು ತೆಗೆದುಹಾಕುವ ಯಾವುದೇ ತಂತ್ರಜ್ಞಾನಗಳು ನಮ್ಮ ಬಳಿ ಇಲ್ಲದಿರುವುದರಿಂದ ಅದರ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದೊಂದೇ ದಾರಿ" ಎಂದು ಅವರು ಹೇಳಿದರು.
ವಾತಾವರಣದಲ್ಲಿ ನೈಟ್ರಸ್ ಆಕ್ಸೈಡ್ನ ಸಾಂದ್ರತೆಯು 2022 ರಲ್ಲಿ ಶತಕೋಟಿಗೆ 336 ಭಾಗಗಳನ್ನು ತಲುಪಿದೆ ಎಂದು ವರದಿ ಹೇಳಿರುವುದು ಆತಂಕಕಾರಿಯಾಗಿದೆ. ಇದು ಪೂರ್ವ ಕೈಗಾರಿಕಾ ಕ್ರಾಂತಿಯ ಮಟ್ಟಕ್ಕಿಂತ ಶೇಕಡಾ 25 ರಷ್ಟು ಹೆಚ್ಚಾಗಿದೆ.
ಮಿತಿ ಮೀರಿದ ಸಾರಜನಕ ರಸಗೊಬ್ಬರ ಬಳಕೆ: ವಿಶ್ವದ ರೈತರು 1980 ರಲ್ಲಿ 60 ಮಿಲಿಯನ್ ಮೆಟ್ರಿಕ್ ಟನ್ ವಾಣಿಜ್ಯ ಸಾರಜನಕ ರಸಗೊಬ್ಬರಗಳನ್ನು ಬಳಸಿದ್ದರು. 2020 ರ ವೇಳೆಗೆ, ಈ ಪ್ರಮಾಣ 107 ಮಿಲಿಯನ್ ಮೆಟ್ರಿಕ್ ಟನ್ಗೆ ಏರಿಕೆಯಾಯಿತು. 2020 ರಲ್ಲಿ ಬಳಕೆಯಾದ ಒಟ್ಟು 208 ಮಿಲಿಯನ್ ಮೆಟ್ರಿಕ್ ಟನ್ ರಸಗೊಬ್ಬರದ ಪೈಕಿ ಪ್ರಾಣಿ ತ್ಯಾಜ್ಯದ ಗೊಬ್ಬರದ ಪ್ರಮಾಣ 101 ಮಿಲಿಯನ್ ಮೆಟ್ರಿಕ್ ಟನ್ ಆಗಿತ್ತು.
ಜಾಗತಿಕ ತಾಪಮಾನ ಏರಿಕೆಗೆ ಮಾರಕ ನೈಟ್ರಸ್ ಆಕ್ಸೈಡ್ ಅನಿಲವು ಇಂಗಾಲದ ಡೈಆಕ್ಸೈಡ್ಗಿಂತ ಸುಮಾರು 300 ಪಟ್ಟು ಹೆಚ್ಚು ಕಾರಣವಾಗುತ್ತದೆ ಮತ್ತು ಭೂಮಿಯ ವಾತಾವರಣದ ಮೇಲೆ ಭೀಕರ ಪರಿಣಾಮಗಳನ್ನು ಬೀರುತ್ತದೆ ಎಂದು ವರದಿ ತಿಳಿಸಿದೆ. ಅತಿಯಾದ ನೈಟ್ರೋಜನ್ನಿಂದ ಮಣ್ಣು, ನೀರು ಮತ್ತು ವಾಯುಮಾಲಿನ್ಯ ಹೆಚ್ಚಾಗುತ್ತದೆ ಮತ್ತು ಓಝೋನ್ ಪದರವು ಕ್ಷೀಣಿಸುತ್ತದೆ. ಇದು ಹವಾಮಾನ ಬದಲಾವಣೆಯನ್ನು ಉಲ್ಬಣಗೊಳಿಸುತ್ತದೆ. ಅಲ್ಲದೆ ಇದು ಪಾರ್ಶ್ವವಾಯು ಮತ್ತು ಮಾರಣಾಂತಿಕವಾದ ಆರೋಗ್ಯ ಸಮಸ್ಯೆಗಳನ್ನು ಸಹ ಉಂಟು ಮಾಡುತ್ತದೆ.