ಬೆಂಗಳೂರು: ಕಳೆದ ವರ್ಷ ಭಾರತದ ಹೆಮ್ಮೆಯ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದಿತ್ತು. ಇದರ ಸ್ಮರಣೆಗಾಗಿ, ಪ್ರತಿ ವರ್ಷವೂ ಭಾರತ ಆಗಸ್ಟ್ 23ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಿದೆ. ಈ ದಿನ ಬಾಹ್ಯಾಕಾಶ ಸಾಧನೆಗಳ ಸ್ಮರಣೆ ಮತ್ತು ಭವಿಷ್ಯದ ಅನ್ವೇಷಣೆಗಳ ಮಹತ್ವವನ್ನು ಸಾರಲು ಮುಖ್ಯವಾಗಿದೆ ಎಂದು ಬಾಹ್ಯಾಕಾಶ ವಿಶ್ಲೇಷಕ ಗಿರೀಶ್ ಲಿಂಗಣ್ಣ ಹೇಳಿದರು.
ಚಂದ್ರಯಾನ-3ರ ಅವಿಸ್ಮರಣೀಯ ಸಾಧನೆಯ ಮೂಲಕ ಭಾರತ ಚಂದ್ರನ ಅಂಗಳದಲ್ಲಿ ಇಳಿದ ನಾಲ್ಕನೇ ರಾಷ್ಟ್ರ ಎಂಬ ಗೌರವ ಸಂಪಾದಿಸಿದೆ. ಇದರ ಜೊತೆಗೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಆ ಮೂಲಕ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಭಾರತ ತನ್ನದೇ ಆದ ಛಾಪು ಮೂಡಿಸಿತು. ವಿಕ್ರಮ್ ಲ್ಯಾಂಡರ್‌ನ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಬಳಿಕ, ಪ್ರಗ್ಯಾನ್ ರೋವರ್ ಯಶಸ್ವಿಯಾಗಿ ಕಾರ್ಯಾಚರಿಸಿ, ಚಂದ್ರಯಾನ-3 ಯೋಜನೆಯ ಯಶಸ್ಸಿಗೆ ಇನ್ನೊಂದು ಗರಿ ಮೂಡಿಸಿತು. ಈ ಮಹತ್ವದ ಸಾಧನೆಯನ್ನು ಗುರುತಿಸಿ, ಗೌರವಿಸುವ ಸಲುವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 23ನ್ನು 'ರಾಷ್ಟ್ರೀಯ ಬಾಹ್ಯಾಕಾಶ ದಿನ' ಎಂದು ಘೋಷಿಸಿದರು. ಭಾರತದ ಮೊದಲ ಬಾಹ್ಯಾಕಾಶ ದಿನಾಚರಣೆ 2024ರ ಆಗಸ್ಟ್ 23ರಂದು ನಡೆಯಲಿದ್ದು, ಸರ್ಕಾರ ಭಾರತದ ಬಾಹ್ಯಾಕಾಶ ಸಾಧನೆಗಳನ್ನು ಪ್ರದರ್ಶಿಸಲು ಮತ್ತು ಯುವ ಜನರಲ್ಲಿ ಸ್ಫೂರ್ತಿ ತುಂಬಲು ಒಂದು ತಿಂಗಳ ಕಾಲದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಅವರು ವಿವರಿಸಿದರು.
ಈ ವರ್ಷದ ಘೋಷವಾಕ್ಯವೇನು?: ಈ ವರ್ಷದ ಸಮಾರಂಭ 'ಟಚಿಂಗ್ ಲೈವ್ಸ್ ವೈಲ್ ಟಚಿಂಗ್ ದ ಮೂನ್' ಎನ್ನುವ ಘೋಷವಾಕ್ಯದಲ್ಲಿ ನಡೆಯುತ್ತದೆ. ಇಂಡಿಯಾಸ್ ಸ್ಪೇಸ್ ಸಾಗಾ ಎಂಬ ಧ್ಯೇಯವಾಕ್ಯವನ್ನು ಇದು ಹೊಂದಿದೆ. ಬಾಹ್ಯಾಕಾಶ ದಿನದ ಸತ್ವವನ್ನು ಸುಂದರವಾಗಿ ವಿವರಿಸಲಿದೆ. ಭಾರತದ ಬಾಹ್ಯಾಕಾಶ ಅನ್ವೇಷಣೆಗಳು ಕೇವಲ ಅಸಾಧಾರಣ ವೈಜ್ಞಾನಿಕ ಸಾಧನೆಗಳಿಗೆ ಸೀಮಿತವಾಗಿರದೆ, ಭಾರತೀಯರ ದೈನಂದಿನ ಜೀವನದ ಮೇಲೂ ಧನಾತ್ಮಕ ಬದಲಾವಣೆ ಬೀರುತ್ತದೆ ಎನ್ನುವುದನ್ನು ಈ ಥೀಮ್ ಸಮರ್ಥವಾಗಿ ವಿವರಿಸುತ್ತದೆ. ಭಾರತ ನಕ್ಷತ್ರಗಳನ್ನು ಹಿಡಿಯಲು ಆಗಸಕ್ಕೆ ಏರುವಾಗಲೂ, ತನ್ನ ಬೇರುಗಳನ್ನು ಭೂಮಿಯಲ್ಲಿ ಭದ್ರವಾಗಿಟ್ಟು, ತಾಂತ್ರಿಕ ಅಭಿವೃದ್ಧಿಗಳು ಮತ್ತು ಬಾಹ್ಯಾಕಾಶ ಅನ್ವೇಷಣೆಗಳಲ್ಲಿನ ವಿಕ್ರಮಗಳ ಮೂಲಕ ತನ್ನ ಜನರ ಜೀವನವನ್ನು ಸುಧಾರಿಸಲು ಪ್ರಯತ್ನ ನಡೆಸುತ್ತಿದೆ ಎಂದು ಅವರು ವಿಶ್ಲೇಷಿಸಿದರು.
ಬಾಹ್ಯಾಕಾಶ ಅನ್ವೇಷಣೆಗಳಲ್ಲಿ ಭಾರತದ ಮಹತ್ವದ ಸಾಧನೆಗಳನ್ನು ಗುರುತಿಸಿ ಗೌರವಿಸಲು ರಾಷ್ಟ್ರೀಯ ಬಾಹ್ಯಾಕಾಶ ದಿನ ಸೂಕ್ತ ಸಂದರ್ಭ. ಆ ಮೂಲಕ, ದೇಶದ ತಾಂತ್ರಿಕ ಸಾಮರ್ಥ್ಯಕ್ಕೆ ಬೆಳಕು ಚೆಲ್ಲಿ, ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ವೃತ್ತಿ ಜೀವನ ಹೊಂದಲು ಆಸಕ್ತಿ ಮೂಡಿಸಲಿದೆ. ಅದರೊಡನೆ, ಸಾರ್ವಜನಿಕರಲ್ಲಿ ಬಾಹ್ಯಾಕಾಶ ಅನ್ವೇಷಣೆಗಳಿಂದ ಲಭಿಸುವ ಹತ್ತು ಹಲವು ಪ್ರಯೋಜನಗಳ ಕುರಿತು ಅರಿವು ಮೂಡಿಸುವುದೂ ಇದರ ಗುರಿ. ಬಾಹ್ಯಾಕಾಶ ದಿನಾಚರಣೆ ಜನರಲ್ಲಿ ರಾಷ್ಟ್ರೀಯ ಹೆಮ್ಮೆ ಮತ್ತು ಐಕ್ಯತೆ ಮೂಡಿಸಲಿದೆ ಎನ್ನುವ ವಿಶ್ವಾಸವನ್ನು ಗಿರೀಶ್ ಲಿಂಗಣ್ಣ ವ್ಯಕ್ತಪಡಿಸಿದ್ದಾರೆ.