Mukesh Ambani New Private Jet: ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಮಗ ಅನಂತ್ ಅಂಬಾನಿ ಅವರ ವೈಭವೋಪೇತ ವಿವಾಹೋತ್ಸವ ಕೆಲ ತಿಂಗಳ ಹಿಂದೆ ಭಾರಿ ಸುದ್ದಿಯಲ್ಲಿತ್ತು. ಇದೀಗ ಮತ್ತೊಂದು ಕಾರಣಕ್ಕೆ ಮುಖೇಶ್ ಅಂಬಾನಿ ಸುದ್ದಿಯಲ್ಲಿದ್ದಾರೆ. ಹೌದು, ಭಾರತಕ್ಕೆ ಆಗಮಿಸಿರುವ ಅಂಬಾನಿ ಕುಟುಂಬದ ಹೊಸ ಖಾಸಗಿ ಜೆಟ್ ಬೋಯಿಂಗ್ 737 ಮ್ಯಾಕ್ಸ್ 9 ಇದೀಗ ಟಾಕ್ ಆಫ್ ದಿ ಟೌನ್ ಆಗಿದೆ.
ಇದರ ಬೆಲೆ ಎಷ್ಟು?: ಈ ಜೆಟ್‌ನ ಬೆಲೆಯಲ್ಲಿ 200 ರೋಲ್ಸ್ ರಾಯಲ್ ಕಾರುಗಳನ್ನು ಖರೀದಿಸಬಹುದು. ಅಂದರೆ, ಐಷಾರಾಮಿ ಖಾಸಗಿ ಜೆಟ್ ಬೋಯಿಂಗ್ 737 ಮ್ಯಾಕ್ಸ್ 9ರ ಬೆಲೆ 1,000 ಕೋಟಿ ರೂಪಾಯಿ!. ಇದುವರೆಗೆ ಭಾರತದಲ್ಲಿ ಇಂತಹ ವಿಮಾನವನ್ನು ಯಾರೂ ಖರೀದಿಸಿಲ್ಲ.
ಈ ವಿಮಾನ ಭಾರತಕ್ಕೆ ಆಗಮಿಸುವ ಮೊದಲು ಬಾಸೆಲ್, ಜಿನೀವಾ ಮತ್ತು ಲಂಡನ್‌ನಲ್ಲಿ ಇದರ ಹಾರಾಟದ ಪರೀಕ್ಷೆ ನಡೆದಿದೆ. 2022ರಲ್ಲೇ ಖಾಸಗಿ ಜೆಟ್ ಬರಬೇಕಿತ್ತು. ಆದರೆ ಬೋಯಿಂಗ್ ಜೊತೆಗಿನ ವಿವಾದದಿಂದಾಗಿ ಆಗಮನ ವಿಳಂಬಗೊಂಡಿತ್ತು. ವಿಶ್ವದ ಯಾವುದೇ ಕೈಗಾರಿಕೋದ್ಯಮಿ ಕೂಡಾ ಬೋಯಿಂಗ್ 737 ಮ್ಯಾಕ್ಸ್ 9 ವಿಮಾನ ಹೊಂದಿಲ್ಲ. ಆದ್ದರಿಂದ ಮುಖೇಶ್ ಅಂಬಾನಿ ಅಲ್ಟ್ರಾ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ವಿಶ್ವದ ಮೊದಲ ಉದ್ಯಮಿಯೂ ಹೌದು.
ವಿಶೇಷತೆಗಳು: ಈ ವಿಮಾನವು ವಿಶಾಲವಾದ ಕ್ಯಾಬಿನ್ ಹೊಂದಿದೆ. ಎರಡು CFMI LEAP-1B ಎಂಜಿನ್‌ಗಳಿಂದ ಚಾಲಿತವಾಗಿದೆ. MSN 8401 ಸಂಖ್ಯೆಯ ಐಷಾರಾಮಿ ಜೆಟ್ ಒಂದು ಬಾರಿಗೆ 11 ಸಾವಿರದ 770 ಕಿಮೀ ದೂರ ಕ್ರಮಿಸಬಲ್ಲದು. ಈ ಜೆಟ್ ಅನ್ನು ಆಕಾಶದಲ್ಲಿ 7 ಸ್ಟಾರ್ ಹೋಟೆಲ್ ಎಂದು ಪರಿಗಣಿಸಲಾಗಿದೆ.
ಅಂಬಾನಿ ಬಳಿ ಇವೆ 10 ಖಾಸಗಿ ಜೆಟ್‌ಗಳು: ಅಂಬಾನಿ ಕುಟುಂಬ 10 ಖಾಸಗಿ ಜೆಟ್‌ಗಳನ್ನು ಹೊಂದಿದೆ. ಇವುಗಳಲ್ಲಿ ಬೊಂಬಾರ್ಡಿಯರ್ ಗ್ಲೋಬಲ್ 6000 ಮತ್ತು ಎಂಬ್ರೇರ್ ERJ-135 ಮತ್ತು ಎರಡು ಡಸಾಲ್ಟ್ ಫಾಲ್ಕನ್ 900 ಸೇರಿವೆ. 9 ಲಕ್ಷ ಕೋಟಿಗೂ ಅಧಿಕ ಆಸ್ತಿಯ ಒಡೆಯ ಮುಖೇಶ್ ಅಂಬಾನಿ ಹಲವು ಐಷಾರಾಮಿ ಕಾರುಗಳನ್ನೂ ಹೊಂದಿದ್ದಾರೆ.
ಇತರೆ ಖಾಸಗಿ ಜೆಟ್ ಮಾಲೀಕರು: ಮುಕೇಶ್ ಅಂಬಾನಿ ಅವರನ್ನು ಹೊರತುಪಡಿಸಿ ಖಾಸಗಿ ಜೆಟ್ ಹೊಂದಿರುವ ಇತರೆ ಮಾಲೀಕರೆಂದರೆ ಲಕ್ಷ್ಮಿ ಮಿತ್ತಲ್, ಪಂಕಜ್ ಮುಂಜಾಲ್, ಕಲಾನಿಧಿ ಮಾರನ್, ನವೀನ್ ಜಿಂದಾಲ್, ಅಡಾರ್ ಪೂನಾವಾಲಾ ಮತ್ತು ಗೌತಮ್ ಅದಾನಿ. ಇದಲ್ಲದೇ ಬಾಲಿವುಡ್ ಸೆಲೆಬ್ರಿಟಿಗಳಾದ ಶಾರುಖ್ ಖಾನ್, ಅಮಿತಾಬ್ ಬಚ್ಚನ್ ಮತ್ತು ಸಲ್ಮಾನ್ ಖಾನ್ ಅವರ ಬಳಿಯೂ ಖಾಸಗಿ ಜೆಟ್ ವಿಮಾನಗಳಿವೆ.
ಇದನ್ನೂ ಓದಿ: ವಿಮಾನಕ್ಕೆ ಇಂಧನವಾಗಿ ಪೆಟ್ರೋಲ್, ಡೀಸೆಲ್ ಬಳಸಲ್ಲ: ಏಕೆ ಗೊತ್ತೇ? - Aviation Turbine Fuel