ಸ್ಯಾನ್ ಫ್ರಾನ್ಸಿಸ್ಕೋ : ಎಲೆಕ್ಟ್ರಿಕ್ ಕಾರುಗಳ ಬ್ಯಾಟರಿಗಳನ್ನು ಹೆಚ್ಚು ಸುಸ್ಥಿರಗೊಳಿಸುವ ಮತ್ತು ಅವುಗಳನ್ನು ಕೋಬಾಲ್ಟ್ ಮುಕ್ತವಾಗಿಸುವ ನಿಟ್ಟಿನಲ್ಲಿ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಸಂಶೋಧಕರು ಹೊಸ ಬ್ಯಾಟರಿ ವಸ್ತುವೊಂದನ್ನು ವಿನ್ಯಾಸಗೊಳಿಸಿದ್ದಾರೆ. ಈ ಸಂಶೋಧಕರ ತಂಡದಲ್ಲಿ ಭಾರತೀಯ ಮೂಲದ ಓರ್ವ ವಿಜ್ಞಾನಿ ಇರುವುದು ವಿಶೇಷ. ವಾಹನ ತಯಾರಕ ಲ್ಯಾಂಬೊರ್ಗಿನಿ ತಂತ್ರಜ್ಞಾನದ ಪೇಟೆಂಟ್ ಗೆ ಪರವಾನಗಿ ನೀಡಿದೆ.
ಈ ಸಂಶೋಧನೆಯಲ್ಲಿ ರಸಾಯನಶಾಸ್ತ್ರಜ್ಞರು ಸಾವಯವ ವಸ್ತುಗಳ ಆಧಾರದ ಮೇಲೆ ಬ್ಯಾಟರಿ ಕ್ಯಾಥೋಡ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಇವಿ ಉದ್ಯಮದ ವಿರಳ ಲೋಹಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಈ ವಸ್ತುವು ಟಿಎಕ್ಯೂನ ಅನೇಕ ಪದರಗಳನ್ನು ಒಳಗೊಂಡಿದೆ. ಇದು ಸಣ್ಣ ಸಾವಯವ ಅಣುವಾಗಿದ್ದು, ಮೂರು ಸಂಯೋಜಿತ ಷಟ್ಕೋನ ರಿಂಗ್ಗಳನ್ನು ಒಳಗೊಂಡಿದೆ. ಈ ಪದರಗಳು ಪ್ರತಿಯೊಂದು ದಿಕ್ಕಿನಲ್ಲಿಯೂ ಹೊರಕ್ಕೆ ವಿಸ್ತರಿಸಬಹುದು. ಇದು ಗ್ರಾಫೈಟ್ನ ರಚನೆಯನ್ನು ಹೋಲುತ್ತದೆ.
ಅಣುಗಳ ಒಳಗೆ ಕ್ವಿನೋನ್ ಗಳು ಎಂದು ಕರೆಯಲ್ಪಡುವ ರಾಸಾಯನಿಕ ಗುಂಪುಗಳಿವೆ. ಅವು ಎಲೆಕ್ಟ್ರಾನ್ಗಳ ಆಗರವಾಗಿವೆ ಮತ್ತು ಅಮೈನ್ ಗಳು ವಸ್ತುವಿಗೆ ಬಲವಾದ ಹೈಡ್ರೋಜನ್ ಬಂಧಗಳನ್ನು ರೂಪಿಸಲು ಸಹಾಯ ಮಾಡುತ್ತವೆ ಎಂದು ಎಸಿಎಸ್ ಸೆಂಟ್ರಲ್ ಸೈನ್ಸ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನವು ವಿವರಿಸಿದೆ. ಕೋಬಾಲ್ಟ್ ಹೊಂದಿರುವ ಬ್ಯಾಟರಿಗಳಿಗಿಂತ ಕಡಿಮೆ ವೆಚ್ಚದಲ್ಲಿ ಉತ್ಪಾದಿಸಬಹುದಾದ ಈ ವಸ್ತುವು ಕೋಬಾಲ್ಟ್ ಬ್ಯಾಟರಿಗಳಂತೆಯೇ ವಿದ್ಯುತ್ ಅನ್ನು ಪೂರೈಸಬಹುದು ಎಂದು ಸಂಶೋಧಕರು ತೋರಿಸಿದ್ದಾರೆ.
ಹೊಸ ಬ್ಯಾಟರಿಯು ಅತ್ಯುತ್ತಮ ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ ಮತ್ತು ಕೋಬಾಲ್ಟ್ ಬ್ಯಾಟರಿಗಳಿಗಿಂತ ವೇಗವಾಗಿ ಇದನ್ನು ಚಾರ್ಜ್ ಮಾಡಬಹುದು. "ಈ ವಸ್ತುವು ಈಗಾಗಲೇ ಅಸ್ತಿತ್ವದಲ್ಲಿರುವ ತಂತ್ರಜ್ಞಾನಗಳೊಂದಿಗೆ ಸ್ಪರ್ಧಾತ್ಮಕವಾಗಿದೆ ಮತ್ತು ಇದು ಪ್ರಸ್ತುತ ಬ್ಯಾಟರಿಗಳಲ್ಲಿ ಬಳಸಲ್ಪಡುವ ಲೋಹಗಳ ಗಣಿಗಾರಿಕೆಗೆ ಸಂಬಂಧಿಸಿದ ಸಾಕಷ್ಟು ವೆಚ್ಚ ಮತ್ತು ಪರಿಸರ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ" ಎಂದು ಎಂಐಟಿಯ ಡಬ್ಲ್ಯೂಎಂ ಕೆಕ್ ಇಂಧನ ಪ್ರಾಧ್ಯಾಪಕ ಮಿರ್ಸಿಯಾ ಡಿಂಕಾ ಹೇಳಿದರು.
ಡಿಂಕಾ ಈ ಅಧ್ಯಯನದ ಹಿರಿಯ ಸಂಶೋಧಕರಾಗಿದ್ದು, ಟಿಯಾನ್ಯಾಂಗ್ ಚೆನ್ ಮತ್ತು ಮಾಜಿ ಎಂಐಟಿ ಪೋಸ್ಟ್ ಡಾಕ್ಟರಲ್ ಹರೀಶ್ ಬಾಂಡಾ ಈ ಪ್ರಬಂಧದ ಪ್ರಮುಖ ಲೇಖಕರಾಗಿದ್ದಾರೆ.
ಬಹುತೇಕ ಲಿಥಿಯಂ-ಐಯಾನ್ ಬ್ಯಾಟರಿಗಳಲ್ಲಿ, ಕ್ಯಾಥೋಡ್ ಕೋಬಾಲ್ಟ್ ಎಂಬ ಲೋಹ ಇರುತ್ತದೆ. ಇದು ಹೆಚ್ಚಿನ ಸ್ಥಿರತೆ ಮತ್ತು ಶಕ್ತಿ ಸಾಂದ್ರತೆಯನ್ನು ನೀಡುತ್ತದೆ. ಆದಾಗ್ಯೂ, ಕೋಬಾಲ್ಟ್ ಗಮನಾರ್ಹ ಸಮಸ್ಯೆಗಳನ್ನು ಹೊಂದಿದೆ. ಇದು ವಿರಳ ಲೋಹವಾಗಿದ್ದು, ಇದರ ಬೆಲೆಗಳು ವಿಪರೀತ ಏರಿಳಿತವಾಗುತ್ತಿರುತ್ತವೆ. ವಿಶ್ವದ ಹೆಚ್ಚಿನ ಕೋಬಾಲ್ಟ್ ನಿಕ್ಷೇಪಗಳು ರಾಜಕೀಯವಾಗಿ ಅಸ್ಥಿರ ದೇಶಗಳಲ್ಲಿರುವುದು ಮತ್ತೊಂದು ಸಮಸ್ಯೆಯಾಗಿದೆ.
ಇದನ್ನೂ ಓದಿ : ಆಡಿಯೋ, ವಿಡಿಯೋ ಕರೆ ವೈಶಿಷ್ಟ್ಯ ಆರಂಭಿಸಿದ ಎಕ್ಸ್ ಆ್ಯಪ್