ನವದೆಹಲಿ: ಇತ್ತೀಚಿನ ಎರಡು ಚಂದ್ರ ರಾತ್ರಿಗಳ ಅವಧಿಯಲ್ಲಿ ಬದುಕುಳಿದ ನಂತರ, ಜಪಾನ್ನ ಸ್ಮಾರ್ಟ್ ಲ್ಯಾಂಡರ್ ಫಾರ್ ಇನ್ವೆಸ್ಟಿಗೇಷನ್ ಮೂನ್ (ಎಸ್ಎಲ್ಐಎಂ -ಸ್ಲಿಮ್) (Smart Lander for Investigating Moon) ಈಗ ಮತ್ತೊಮ್ಮೆ ನಿಷ್ಕ್ರಿಯವಾಗಿದೆ ಎಂದು ದೇಶದ ಬಾಹ್ಯಾಕಾಶ ಸಂಸ್ಥೆ ಜಾಕ್ಸಾ ಸೋಮವಾರ ತಿಳಿಸಿದೆ. ಜಪಾನಿನಲ್ಲಿ ಮೂನ್ ಸ್ನೈಪರ್ ಎಂದೂ ಕರೆಯಲ್ಪಡುವ ಸ್ಲಿಮ್ ಜನವರಿ 20 ರಂದು ಚಂದ್ರನ ಮೇಲ್ಮೈ ಮೇಲೆ ಇಳಿದಿತ್ತು.
ಯೋಜಿಸಿದಂತೆ ಗುರಿಯ 100 ಮೀಟರ್ ಒಳಗೆ ಸ್ಲಿಮ್ ಪಿನ್ ಪಾಯಿಂಟ್ ಲ್ಯಾಂಡಿಂಗ್ ಸಾಧಿಸಿದರೂ, ಲ್ಯಾಂಡರ್ ತಲೆಕೆಳಗಾಗಿ ಇಳಿದಿತ್ತು. ಅದರ ಸೌರ ಫಲಕಗಳು ಸೂರ್ಯನಿಗೆ ಮುಖ ಮಾಡದ ಕಾರಣದಿಂದ ಲ್ಯಾಂಡರ್ಗೆ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ಚಂದ್ರನ ರಾತ್ರಿಗಳಲ್ಲಿ ತಾಪಮಾನ ಮೈನಸ್ 130 ಡಿಗ್ರಿಗಳಿಗೆ ಇಳಿಯುವ ಕಾರಣದಿಂದ ಲ್ಯಾಂಡರ್ ಸಂಪೂರ್ಣ ಹೆಪ್ಪುಗಟ್ಟಿದಂತಾಗಿ ಸ್ತಬ್ಧಗೊಳ್ಳಬಹುದು ಎಂದು ಯೋಜನೆಯ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದರು.
-
Last night, we received a response from #SLIM, confirming that the spacecraft made it through the lunar night for the second time! Since the sun was still high and the equipment was still hot, we only took some shots of the usual scenery with the navigation camera. #GoodAfterMoon pic.twitter.com/5BjIr7vxMG
— 小型月着陸実証機SLIM (@SLIM_JAXA) March 28, 2024
200 ಕಿಲೋಗ್ರಾಂಗಳಷ್ಟು ತೂಕದ ಮಾನವರಹಿತ ಲ್ಯಾಂಡರ್ ಚಳಿಗಾಲದಲ್ಲಿ ಬದುಕುಳಿದಿದೆ. ಆದರೆ ಕೆಲ ತಾಪಮಾನ ಸಂವೇದಕಗಳು ಮತ್ತು ಬಳಸದ ಬ್ಯಾಟರಿ ಕೋಶಗಳು ಅಸಮರ್ಪಕವಾಗಿ ಕೆಲಸ ಮಾಡಲಾರಂಭಿಸಿವೆ ಎಂದು ಜಾಕ್ಸಾ ಹೇಳಿದೆ. ಆದಾಗ್ಯೂ ಲ್ಯಾಂಡರ್ ಹೊಸ ಚಿತ್ರಗಳನ್ನು ಭೂಮಿಗೆ ರವಾನಿಸಿದೆ.
ಲ್ಯಾಂಡರ್ ತನ್ನ ಎರಡನೇ ರಾತ್ರಿಯ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ ಮತ್ತು ನಿದ್ರೆಗೆ ಜಾರಿದೆ ಎಂದು ಜಾಕ್ಸಾ ತಿಳಿಸಿದೆ. "ಮಾರ್ಚ್ 30 ರ ಮುಂಜಾನೆ ಸ್ಲಿಮ್ ತನ್ನ ಎರಡನೇ ರಾತ್ರಿಯ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ ನಂತರ ಮತ್ತೊಮ್ಮೆ ನಿಷ್ಕ್ರಿಯವಾಗಿದೆ" ಎಂದು ಜಾಕ್ಸಾ ಸೋಮವಾರ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.
"ಈ ಕಾರ್ಯಾಚರಣೆಯ ಸಮಯದಲ್ಲಿ ನಾವು ಮುಖ್ಯವಾಗಿ ಸ್ವಿಚ್ಗಳನ್ನು ಆನ್ ಮಾಡುವ ಮೂಲಕ ಮತ್ತು ಲೋಡ್ಗಳನ್ನು ಅನ್ವಯಿಸುವ ಮೂಲಕ ಹಲವಾರು ಸಾಧನಗಳ ಸ್ಥಿತಿಗತಿಯನ್ನು ಪರಿಶೀಲಿಸಿದ್ದೇವೆ. ಮಲ್ಟಿ ಬ್ಯಾಂಡ್ ಕ್ಯಾಮೆರಾದಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದ್ದರೂ ಅದು ಈಗಲೂ ಕೆಲಸ ಮಾಡುತ್ತಿದೆ. ಆದ್ದರಿಂದ ನಾವು ಅದರ ಸ್ಥಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತಿದ್ದೇವೆ" ಎಂದು ಅದು ಹೇಳಿದೆ. ಎಂಬಿಸಿ ಅಥವಾ ಮಲ್ಟಿ ಬ್ಯಾಂಡ್ ಕ್ಯಾಮೆರಾ ಇದು ಚಂದ್ರನ ಶಿಲೆಗಳನ್ನು ಪರೀಕ್ಷಿಸಲು ಬಳಸುವ ಕ್ಯಾಮೆರಾ ಆಗಿದೆ. ರಷ್ಯಾ, ಯುಎಸ್, ಚೀನಾ ಮತ್ತು ಭಾರತದ ನಂತರ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಐದನೇ ದೇಶ ಜಪಾನ್ ಆಗಿದೆ.
ಇದನ್ನೂ ಓದಿ : ರಾಷ್ಟ್ರೀಯ ಪ್ರಸಾರ ನೀತಿ-2024: ಸಮಾಲೋಚನಾ ಪತ್ರ ಹೊರಡಿಸಿದ ಟ್ರಾಯ್ - National Broadcasting Policy