ನವದೆಹಲಿ: ಭಾರತದ ಶೇ 94ರಷ್ಟು ಸಂಸ್ಥೆಗಳು 2024ರಲ್ಲಿ ತಮ್ಮ ಉದ್ಯೋಗಿಗಳ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಅಭಿವೃದ್ಧಿಗೊಳಿಸುವ ಯೋಜನೆ ಹೊಂದಿವೆ. ಈ ನಿಟ್ಟಿನಲ್ಲಿ ಶೇ 53ರಷ್ಟು ಆನ್ಲೈನ್ ತರಬೇತಿ ಮತ್ತು ಅಭಿವೃದ್ಧಿ ಕಾರ್ಯಕ್ರಮವನ್ನು ನೀಡಲಿವೆ ಎಂದು ವರದಿಯೊಂದು ತಿಳಿಸಿದೆ.
ವೃತ್ತಿಪರ ನೆಟ್ವರ್ಕ್ ಫ್ಲಾಟ್ಫಾರಂ ಆದ ಲಿಂಕ್ಡಿನ್ ಪ್ರಕಾರ, ಉದ್ಯೋಗಿಗಳಿಗೆ ಕೌಶಲ್ಯವೃದ್ಧಿ, ಉದ್ಯಮದ ಗುರಿಯ ಕಲಿಕೆ ಕಾರ್ಯಕ್ರಮ ಮತ್ತು ಕಲಿಕೆ ಸಂಸ್ಕೃತಿ ಸೃಷ್ಟಿ ಈ ವರ್ಷದ ಭಾರತದ ಕಲಿಕೆ ಮತ್ತು ಅಭಿವೃದ್ಧಿ ವೃತ್ತಿಪರತೆಯ ಪ್ರಮುಖ ಮೂರು ಗುರಿಗಳಾಗಿವೆ.
2030ರ ಹೊತ್ತಿಗೆ ಉದ್ಯೋಗದ ಕೌಶಲ್ಯಗಳು ಜಾಗತಿಕವಾಗಿ ಶೇ 68ರಷ್ಟು ಬದಲಾವಣೆ ಕಾಣಲಿದ್ದು, ತಂತ್ರಜ್ಞಾನ ಮತ್ತು ಸಾಫ್ಟ್ ಸ್ಕಿಲ್ಗಳು ಕಲಿಕೆಗೆ ಹೆಚ್ಚಿನ ಭರವಸೆ ನೀಡಲಿವೆ ಎಂದು ಬಹುತೇಕ ಉದ್ಯೋಗಿಗಳು ಸಮೀಕ್ಷೆಯಲ್ಲಿ ತಿಳಿಸಿದ್ದು, ಎಐ ಕಾಲಘಟ್ಟದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ನಿರ್ಣಾಯಕವಾಗಿದೆ ಎಂದು ಲಿಂಕ್ಡಿನ್ ಇಂಡಿಯಾದ ಟ್ಯಾಲೆಂಟ್, ಲರ್ನಿಂಗ್ ಅಂಡ್ ಎಂಗೇಜ್ಮೆಂಟ್ ಸಮ್ಯೂಷನ್ನ ಹಿರಿಯ ನಿರ್ದೇಶಕಿ ರುಚಿ ಆನಂದ್ ತಿಳಿಸಿದ್ದಾರೆ.
ವರದಿಯು ಯುಕೆ, ಐರ್ಲೆಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೇನ್, ಯುಎಸ್, ಭಾರತ, ಆಸ್ಟ್ರೇಲಿಯಾ, ಸಿಂಗಾಪೂರ್, ಜಪಾನ್, ಇಂಡೋನೇಷ್ಯಾ, ಚೀನಾ, ನೆದರ್ಲ್ಯಾಂಡ್, ಸ್ವೀಡನ್, ಮತ್ತು ಬ್ರೆಜಿಲ್ನಲ್ಲಿ 4,323 ಉದ್ಯೋಗದಾತರನ್ನು ಸಮೀಕ್ಷೆ ನಡೆಸಲಾಗಿದೆ.
ಎಐ ಮತ್ತು ಆಟೋಮೇಷನ್ನಿಂದಾಗಿ ಕೌಶಲ್ಯದ ಅವಶ್ಯಕತೆ ಬದಲಾವಣೆ ಹೆಚ್ಚು ವೇಗವಾಗಿ ನಡೆಯುತ್ತಿದೆ. ಭಾರತದ ಶೇ 98ರಷ್ಟು ಉದ್ಯೋಗದಾತರು ತಮ್ಮ ಉದ್ಯೋಗಿಗಳಲ್ಲಿ ಕೌಶಲ್ಯವನ್ನು ಪ್ರಮುಖವಾಗಿ ಗಮನಿಸುತ್ತಿದ್ದಾರೆ. ಸಂಸ್ಥೆಗಳು ಕೇವಲ ಎಐ ಪರಿಣಿತರ ಮೌಲ್ಯವನ್ನು ಮಾತ್ರ ಗಮನಿಸುತ್ತಿಲ್ಲ. ಅವರು ಸಾಫ್ಟ್ ಸ್ಕಿಲ್ ಮತ್ತು ಕಲಿಕೆಯ ಸಾಮರ್ಥ್ಯಕ್ಕೂ ಒತ್ತು ನೀಡುತ್ತಿದ್ದಾರೆ.
ಭಾರತದದ ಶೇ91ರಷ್ಟು ಕಲಿಕೆ ಮತ್ತು ಅಭಿವೃದ್ಧಿ ವೃತ್ತಿಪರರು ತಿಳಿಸುವಂತೆ ಆರ್ಥಿಕತೆಯಲ್ಲಿ ಮಾನವನ ಕೌಶಲ್ಯಗಳ ಅಭಿವೃದ್ಧಿ ಸ್ಪರ್ಧಾತ್ಮಕವಾಗಿದೆ ಎಂಬುದನ್ನು ವರದಿಯಲ್ಲಿ ತಿಳಿಸಿದೆ. ಇದಕ್ಕಿಂತ ಹೆಚ್ಚಾಗಿ ಶೇ 48ರಷ್ಟು ಭಾರತದ ನೇಮಕಾತಿ ಮ್ಯಾನೇಜರ್ಗಳು ತಮ್ಮ ಪ್ರಸ್ತುತ ಉದ್ಯೋಗಿಗಳಿಗೆ ವೃತ್ತಿ ಪ್ರಗತಿಗೆ ಸೌಲಭ್ಯವನ್ನು ನೀಡುತ್ತಿದ್ದಾರೆ ಎಂದು ವರದಿ ವಿವರಿಸಿದೆ.
ಭವಿಷ್ಯದ ಕೆಲಸಗಳಿಗೆ ಕೌಶಲ್ಯ ಅಭಿವೃದ್ಧಿಯು ಸಹಾಯ ಮಾಡಲಿದೆ ಎಂದು ಶೇ 38ರಷ್ಟು ಮಂದಿ ನಂಬಿದ್ದರೆ, ಸ್ಪರ್ಧಾತ್ಮಕ ವೇತನ ಮತ್ತು ಬೆಳವಣಿಗೆಗೆ ಇದು ಸಹಾಯ ಮಾಡಲಿದೆ ಎಂದು ಶೇ 31ರಷ್ಟು ಮಂದಿ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್ ಭವಿಷ್ಯದ ಉದ್ಯೋಗ ಭರವಸೆಗಳು