ಸ್ಯಾನ್ ಫ್ರಾನ್ಸಿಸ್ಕೋ : 2024ರ ಮೊದಲ ತ್ರೈಮಾಸಿಕದಲ್ಲಿ ಆ್ಯಪಲ್ ಹಿಂದಿಕ್ಕಿ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ಅಗ್ರಸ್ಥಾನ ಪಡೆದುಕೊಂಡಿದೆ ಎಂದು ಜಾಗತಿಕ ಸಂಶೋಧನಾ ಸಂಸ್ಥೆ ಐಡಿಸಿಯ ಪ್ರಾಥಮಿಕ ಅಂಕಿ - ಅಂಶಗಳು ಸೋಮವಾರ ತಿಳಿಸಿವೆ. ಐಡಿಸಿ ಪ್ರಕಾರ, ಜಾಗತಿಕ ಸ್ಮಾರ್ಟ್ಫೋನ್ ಮಾರಾಟ 2024 ರ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 7.8 ರಷ್ಟು ಬೆಳವಣಿಗೆಯಾಗಿ (ವರ್ಷದಿಂದ ವರ್ಷಕ್ಕೆ) 289.4 ಮಿಲಿಯನ್ ಯುನಿಟ್ಗಳಿಗೆ ಹೆಚ್ಚಾಗಿದೆ.
ಅನೇಕ ಮಾರುಕಟ್ಟೆಗಳಲ್ಲಿ ಸ್ಥೂಲ ಆರ್ಥಿಕ ಸಮಸ್ಯೆಗಳು ಮುಂದುವರೆದಿರುವುದರಿಂದ ಉದ್ಯಮವು ಬಿಕ್ಕಟ್ಟಿನಿಂದ ಇನ್ನೂ ಸಂಪೂರ್ಣವಾಗಿ ಹೊರ ಬಂದಿಲ್ಲ. ಆದಾಗ್ಯೂ ಇದು ಸತತ ಮೂರನೇ ಬೆಳವಣಿಗೆಯ ತ್ರೈಮಾಸಿಕವಾಗಿದೆ. ಹೀಗಾಗಿ ಮಾರುಕಟ್ಟೆಯು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ತ್ರೈಮಾಸಿಕದಲ್ಲಿ ಸ್ಯಾಮ್ಸಂಗ್ 60.1 ಮಿಲಿಯನ್ ಸ್ಮಾರ್ಟ್ ಫೋನ್ಗಳನ್ನು ಮತ್ತು ಆ್ಯಪಲ್ ತನ್ನ 50.1 ಮಿಲಿಯನ್ ಐಫೋನ್ಗಳನ್ನು ಮಾರಾಟ ಮಾಡಿದೆ. ಈ ಮೂಲಕ ಸ್ಯಾಮ್ಸಂಗ್ ಶೇಕಡಾ 20.8 ಮತ್ತು ಆ್ಯಪಲ್ ಶೇಕಡಾ 17.3 ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.
ನಿರೀಕ್ಷೆಯಂತೆ ಸ್ಮಾರ್ಟ್ ಫೋನ್ ಮಾರುಕಟ್ಟೆಯ ಚೇತರಿಕೆಯು ಆಶಾವಾದದೊಂದಿಗೆ ಮುಂದುವರಿಯುತ್ತಿದೆ. ಉನ್ನತ ಬ್ರಾಂಡ್ಗಳ ಮಾರಾಟ ನಿಧಾನವಾಗಿ ಬೆಳವಣಿಗೆಯಾಗುತ್ತಿದೆ ಎಂದು ಐಡಿಸಿಯ ವರ್ಲ್ಡ್ ವೈಡ್ ಮೊಬಿಲಿಟಿ ಮತ್ತು ಕನ್ಸ್ಯೂಮರ್ ಡಿವೈಸ್ ಟ್ರ್ಯಾಕರ್ಸ್ನ ಗ್ರೂಪ್ ಉಪಾಧ್ಯಕ್ಷ ರಯಾನ್ ರೀತ್ ಹೇಳಿದ್ದಾರೆ. ಆ್ಯಪಲ್ 2023 ರ ಕೊನೆಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿತ್ತು. ಆದರೆ, ಸ್ಯಾಮ್ಸಂಗ್ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಆ್ಯಪಲ್ ಹಿಂದಿಕ್ಕಿ ಮತ್ತೆ ಅಗ್ರಸ್ಥಾನಕ್ಕೇರಿತು ಎಂದು ಅವರು ಹೇಳಿದ್ದಾರೆ.
ಚೀನಾದ ಶಿಯೋಮಿ, ಟ್ರಾನ್ಸ್ ಷನ್ ಮತ್ತು ಒಪ್ಪೋ ಟಾಪ್ ಐದು ಕಂಪನಿಗಳಲ್ಲಿ ಸ್ಥಾನ ಪಡೆದಿವೆ. ಮಾರಾಟದಲ್ಲಿ ಕುಸಿತದ ಹೊರತಾಗಿಯೂ ಆ್ಯಪಲ್ನ ಪ್ರೀಮಿಯಂ ಐಫೋನ್ 15 ಪ್ರೊ ಮಾದರಿಗಳ ಮಾರಾಟ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ಪ್ರತಿ ಫೋನ್ ಮಾರಾಟದಿಂದ ಬರುವ ಆದಾಯ ಹೆಚ್ಚಾಗಲಿದೆ. ಆದಾಗ್ಯೂ ಬೇಡಿಕೆ ಹೆಚ್ಚಿಸಲು ಕಂಪನಿಯು ಚೀನಾದಲ್ಲಿ ಸ್ಮಾರ್ಟ್ಫೋನ್ಗಳ ಮೇಲೆ 180 ಡಾಲರ್ವರೆಗೆ ರಿಯಾಯಿತಿ ನೀಡಬೇಕಾಯಿತು.
ಗ್ರಾಹಕರು ದೀರ್ಘಕಾಲ ಬಾಳಿಕೆ ಬರುವ ಪ್ರೀಮಿಯಂ ಹ್ಯಾಂಡ್ಸೆಟ್ಗಳನ್ನು ಹೆಚ್ಚಾಗಿ ಕೊಳ್ಳಲು ಬಯಸುತ್ತಿರುವುದರಿಂದ ಸ್ಮಾರ್ಟ್ಫೋನ್ಗಳ ಸರಾಸರಿ ಮಾರಾಟ ಬೆಲೆಗಳು ಏರುತ್ತಿವೆ. ಈ ಪ್ರವೃತ್ತಿಯಿಂದ ಆ್ಯಪಲ್ನ ಆದಾಯ ಹೆಚ್ಚಾಗಬಹುದಾದರೂ ಕಂಪನಿಯು ಹೈ - ಎಂಡ್ ಮತ್ತು ಬಜೆಟ್ ವಿಭಾಗಗಳಲ್ಲಿ ಮಾರುಕಟ್ಟೆ ಪಾಲನ್ನು ವಶಪಡಿಸಿಕೊಳ್ಳುವ ಗುರಿಯೊಂದಿಗೆ ಆಂಡ್ರಾಯ್ಡ್ ಪ್ರತಿಸ್ಪರ್ಧಿಗಳಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದೆ.
ಇದನ್ನೂ ಓದಿ : ನಿಯಮ ಉಲ್ಲಂಘನೆ: ಮಾರ್ಚ್ನಲ್ಲಿ 2 ಲಕ್ಷಕ್ಕೂ ಅಧಿಕ ಖಾತೆಗಳನ್ನು ನಿಷೇಧಿಸಿದ 'ಎಕ್ಸ್' - X Corp